ಕಾಂಗ್ರೆಸ್‌ಗೆ ಹೋಗಲ್ಲ: ಡಿಕೆಶಿಗೆ ಮೂರು ಸಚಿವರ ತಿರುಗೇಟು
ಡಿಕೆಶಿ ಆಹ್ವಾನಕ್ಕೆ ಎಸ್‌ಟಿಎಸ್, ಬಿಸಿಪಾ, ಹೆಬ್ಬಾರ್ ತಿರುಗೇಟು, ನಾವ್ಯಾರೂ ಮತ್ತೆ ಕಾಂಗ್ರೆಸ್‌ಗೆ ಹೋಗಲ್ಲ: ಸಚಿವತ್ರಯರ ಸ್ಪಷ್ಟೋಕ್ತಿ
ಬೆಂಗಳೂರು(ನ.04): ಪಕ್ಷ ತೊರೆದವರೂ ಮುಂಬರುವ ಚುನಾವಣೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಸಬಹುದು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಸ್ತಾಪಕ್ಕೆ ಬಿಜೆಪಿಗೆ ವಲಸೆ ಬಂದಿರುವ ಹಲವು ಸಚಿವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಈ ಸಚಿವರು ವಾಪಸ್ ಕಾಂಗ್ರೆಸ್‌ಗೆ ಹೋಗುವುದನ್ನು ಬಲವಾಗಿ ನಿರಾಕರಿಸಿದ್ದಾರೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಯಾವ ಕಾರಣಕ್ಕೂ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಮೇಯ ಕಾಣುತ್ತಿಲ್ಲ. ನಾವು ಪಕ್ಷ ಬಿಟ್ಟು ಬಂದ ಮೇಲೆ ಆಕಾಶ ಕೆಳಗೆ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದಾರೆ. ಇವಾಗ ನಾನು ಸಹಕಾರ ಸಚಿವನಾಗಿ ಇಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಪಕ್ಷ ತೊರೆದವರಿಗೆ ಮರಳಿ ಬರಲು ಡಿಕೆಶಿ ಆಹ್ವಾನ, ಕಾಂಗ್ರೆಸ್‌ನಲ್ಲಿ ಒಡಕು, ಬಿಜೆಪಿಗೆ ತೊಡಕು!
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಅಂಥ ಜರೂರತ್ತು ಇಲ್ಲ. ಈಗಾಗಲೇ ವಿಚ್ಛೇದನ ತೆಗೆದುಕೊಂಡು ಇಲ್ಲಿಗೆ ಬಂದಿದ್ದೇವೆ. ಒಡೆದು ಹೋದ ಹಾಲು, ಮನಸ್ಸು ಮತ್ತೆ ಒಂದಾಗಲು ಸಾಧ್ಯವಿಲ್ಲ. ಮತ್ತೆ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ಅವರಿಗೆ ಕ್ಯಾಂಡಿಡೇಟ್‌ಗಳು ಇಲ್ಲ. ಹಳೇ ಗಂಡನ ಪಾದವೇ ಗತಿ ಎನ್ನುವ ರೀತಿ ಕರೆಯುತ್ತಿದ್ದಾರೆ. ಆದರೆ, ನಾವು ಹೋಗುವುದಿಲ್ಲ. ಅದಕ್ಕಾಗಿಯೇ ಕರೆಯುತ್ತಿದ್ದಾರೆ. ನಾವು ಇಲ್ಲಿ ಚೆನ್ನಾಗಿದ್ದೇವೆ. ಸಿದ್ದರಾಮಯ್ಯ ಅವರು ವೀರಾವೇಶದಿಂದ ವಿಧಾನಸಭೆಯಲ್ಲಿ ಮಾತಾಡಿದ್ದನ್ನು ಕೇಳಿದ್ದೇವೆ. ಅದಾದ ಮೇಲೂ ನಾವು ಯಾಕೆ ಹೋಗುತ್ತೇವೆ ಎಂದು ಪ್ರಶ್ನಿಸಿದರು.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ, ನಾವು ಯಾರೂ ಅಲ್ಲಿನ ಅಭ್ಯರ್ಥಿ ಅಲ್ಲ. ನಮ್ಮ ನಿರ್ಣಯದಲ್ಲಿ ಬದಲಾವಣೆ ಇಲ್ಲ. ನಾವೆಲ್ಲರೂ ಒಟ್ಟಾಗಿದ್ದೇವೆ. ಒಗ್ಗಟ್ಟಾಗಿ ಇರುತ್ತೇವೆ. ಎಲ್ಲರ ಅಭಿಪ್ರಾಯವೇ ನಮ್ಮ ಅಭಿಪ್ರಾಯ ಎಂದರು.