ಬೆಂಗಳೂರು[ನ.15]: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ರಾಜೀನಾಮೆ ನೀಡಿದ ಮೈತ್ರಿ ಪಕ್ಷದ ಶಾಸಕರಿಗೆ ನೀಡಿರುವ ಭರವಸೆಯನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ. ಯಾವುದೇ ಕಾರಣಕ್ಕೂ ನಂಬಿಕೆ ದ್ರೋಹ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘಂಟಾಘೋಷವಾಗಿ ಸಾರಿದ್ದಾರೆ.

ಅಲ್ಲದೆ, ಎಲ್ಲ ಅನರ್ಹ ಶಾಸಕರು ಗೆದ್ದು ಬಂದ ಮೇಲೆ ಸಚಿವರಾಗಲಿದ್ದಾರೆ ಎಂದು ಹೇಳುವ ಮೂಲಕ ಅವರು ಬಹಿರಂಗವಾಗಿಯೇ ವಾಗ್ದಾನವನ್ನೂ ನೀಡಿದ್ದಾರೆ.

ಕಸ ಗುಡಿಸುತ್ತೇನೆ, ಕೇಸ್‌ ವಾಪಸ್‌ ಪಡೆಯಲ್ಲ ಎಂದ ಮುನಿರಾಜು : ಮುನಿರತ್ನಗೆ ಸಂಕಷ್ಟ

ಗುರುವಾರ ಬಿಜೆಪಿ ಕಚೇರಿ ಬಳಿ ಹದಿನಾರು ಅನರ್ಹ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಜೆಡಿಎಸ್‌-ಕಾಂಗ್ರೆಸ್‌ನ ಹದಿನೇಳು ಶಾಸಕರು ತಮ್ಮ ಸ್ಥಾನವನ್ನು ತ್ಯಜಿಸಿ ರಾಜೀನಾಮೆ ಕೊಟ್ಟಿದ್ದು ಕಾರಣ. ನಮಗಾಗಿ ಎಲ್ಲ ರೀತಿಯ ತ್ಯಾಗ ಮಾಡಿದ್ದಾರೆ. ನಮ್ಮ ಜತೆ ಬಂದಿರುವವರಿಗೆ ಈ ಮೊದಲು ನೀಡಿದ ಭರವಸೆಯನ್ನು ಈಡೇರಿಸುತ್ತೇವೆ. ಯಾವುದೇ ಕಾರಣಕ್ಕೂ ನಂಬಿಕೆ ದ್ರೋಹ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದೇಶದ ರಾಜಕಾರಣದಲ್ಲಿ ಈ ರೀತಿ ಹದಿನೇಳು ಶಾಸಕರು ಒಟ್ಟಾಗಿ ರಾಜೀನಾಮೆ ನೀಡಿದ ಉದಾಹರಣೆ ಇಲ್ಲ. ನಮಗಾಗಿ ಅವರು ಎಲ್ಲ ರೀತಿಯ ತ್ಯಾಗ ಮಾಡಿದ್ದಾರೆ. ಅವರ ಗೆಲುವು ಬಿಜೆಪಿ ಕಾರ್ಯಕರ್ತರು, ನಾಯಕರ ಮೇಲಿದೆ. ಸಣ್ಣಪುಟ್ಟಒಡಕಿನ ಮಾತುಗಳನ್ನಾಡದೆ ಎಲ್ಲಾ ರೀತಿಯ ಸಹಕಾರವನ್ನು ಅವರಿಗೆ ನೀಡಬೇಕು. ಅವರ ಗೆಲುವಿಗೆ ಪ್ರತಿಯೊಬ್ಬರು ಕಾರಣಕರ್ತರಾಗಬೇಕು. 15 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, 15 ಮಂದಿ ಗೆಲುವು ಸಾಧಿಸಿ ಶಾಸಕರಾಗಿ ಆಗಮಿಸಿದ ಬಳಿಕ ಮೈದಾನವೊಂದರಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕೆ. ಆರ್. ಪೇಟೆ JDS ಅಭ್ಯರ್ಥಿ ಫಿಕ್ಸ್, ಅಧಿಕೃತ ಘೋಷಣೆಯೊಂದೇ ಬಾಕಿ

ಚುನಾವಣೆ ನಡೆಯುವ ಕ್ಷೇತ್ರದ ಹೊಣೆಗಾರಿಕೆಯನ್ನು ಸಂಸದರು, ಶಾಸಕರು, ಕಾರ್ಯಕರ್ತರಿಗೆ ಹಂಚಿಕೆ ಮಾಡಲಾಗಿದೆ. ಅವರೆಲ್ಲಾ ಉಸ್ತುವಾರಿ ವಹಿಸಿಕೊಂಡು ನಮಗಾಗಿ ರಾಜೀನಾಮೆ ನೀಡಿದವರ ಗೆಲುವಿಗೆ ಶ್ರಮವಹಿಸಲಿದ್ದಾರೆ. ನಮಗೋಸ್ಕರ ತ್ಯಾಗ ಮಾಡಿರುವವರ ಜತೆಗೆ ನಾವೆಲ್ಲಾ ಇದ್ದೇವೆ. ಯಾವುದೇ ಒಡಕಿನ ಮಾತಿಗೆ ಕಿವಿಗೊಡಬಾರದು. ಕೇಂದ್ರದ ನಾಯಕತ್ವವು ಸಹ ಅವರ ಜತೆಗಿದೆ. ಯಾವುದೇ ಆತಂಕ ಬೇಡ. ಕಾಂಗ್ರೆಸ್‌-ಜೆಡಿಎಸ್‌ನಿಂದ ಬಂದಿದ್ದು, ಬಿಜೆಪಿಯಿಂದ ಹೊಸದಾಗಿ ಚುನಾವಣೆ ಎದುರಿಸುವುದು ಹೇಗೆ ಎಂಬ ಆತಂಕ ಪಡುವ ಅಗತ್ಯ ಇಲ್ಲ. ಆತ್ಮಸಾಕ್ಷಿಯಾಗಿ ಹೇಳುತ್ತೇನೆ, ನಮಗೋಸ್ಕರ ತ್ಯಾಗ ಮಾಡಿದವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.