ಇನ್ನು 15 ದಿವಸ ಕಾದು ನೋಡಿ. ನನಗೆ ಯಾರೆಲ್ಲಾ ಟೋಪಿ ಹಾಕಿ (17 ಶಾಸಕರು) ಮೈತ್ರಿ ಸರ್ಕಾರ ಪತನಗೊಳಿಸಿದರೋ ಅವರಲ್ಲಿ ಎಷ್ಟುಜನ ಕಾಂಗ್ರೆಸ್‌ಗೆ ಪುನಃ ಸೇರ್ಪಡೆ ಆಗಲಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ಎಚ್‌.ಡಿ.ಕುಮಾರಸ್ವಾಮಿ ನುಡಿದರು.

ಬೆಂಗಳೂರು (ಮಾ.06): ‘ಅಂದು ನನಗೆ ಯಾರ್ಯಾರು ಟೋಪಿ ಹಾಕಿ ಹೋಗಿದ್ದರೋ ಅವರಲ್ಲಿ ಎಷ್ಟುಜನ ಈಗ ಕಾಂಗ್ರೆಸ್‌ಗೆ ಮತ್ತೆ ವಾಪಸ್‌ ಬರುತ್ತಾರೆ ಎಂಬುದನ್ನು 15 ದಿನ ಕಾದು ನೋಡಿ’ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನವಾಗಲು ಕಾರಣರಾದ 17 ಶಾಸಕರಲ್ಲಿ ಹಲವರು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ಭಾನುವಾರ ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿರುವ ಶಾಸಕ ಸುರೇಶ್‌ ಗೌಡ ಪರವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಕ್ಷೇತ್ರದ ಜನರ ಪ್ರತಿಜ್ಞಾ ಸಮಾವೇಶದಲ್ಲಿ ಮಾತನಾಡಿದ ಅವರು, ಇನ್ನು 15 ದಿವಸ ಕಾದು ನೋಡಿ. ನನಗೆ ಯಾರೆಲ್ಲಾ ಟೋಪಿ ಹಾಕಿ (17 ಶಾಸಕರು) ಮೈತ್ರಿ ಸರ್ಕಾರ ಪತನಗೊಳಿಸಿದರೋ ಅವರಲ್ಲಿ ಎಷ್ಟುಜನ ಕಾಂಗ್ರೆಸ್‌ಗೆ ಪುನಃ ಸೇರ್ಪಡೆ ಆಗಲಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಸಿಎಂರನ್ನು ಚಪ್ರಾಸಿ ತರ ನಡೆಸಿಕೊಂಡಿರಿ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಗರಂ

ಜೆಡಿಎಸ್‌ ವರಿಷ್ಠರೂ ಆಗಿರುವ ತಂದೆ ಎಚ್‌.ಡಿ.ದೇವೇಗೌಡ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಬಂದಿದ್ದೇನೆ. ‘ನೀವು ಏನು ಕನಸು ಕಂಡಿದ್ದೀರೋ ಅದನ್ನು ಈಡೇರಿಸುತ್ತೇನೆ. ನೊಂದುಕೊಳ್ಳಬೇಡಿ. ಭಗವಂತ ನಿಮ್ಮನ್ನು ಬೇಗ ಕರೆಸಿಕೊಳ್ಳುವುದಿಲ್ಲ’ ಎಂದು ಹೇಳಿ ಬಂದಿದ್ದೇನೆ. ಕಳೆದ ಮೂರು ತಿಂಗಳಿಂದ ಇಷ್ಟೊಂದು ಪ್ರವಾಸ ಮಾಡುತ್ತಿರುವುದು ನನ್ನ ಸ್ವಾರ್ಥಕ್ಕಲ್ಲ. ಎರಡು ಬಾರಿ ಹಾರ್ಚ್‌ ಸರ್ಜರಿಯಾಗಿದ್ದರೂ ಕಷ್ಟಪಡುತ್ತಿದ್ದೇನೆ. ದೇವೇಗೌಡರ ಕುಟುಂಬದವನು ನಾನು. ಹೇಡಿಯಲ್ಲ, ಏಕಾಂಗಿ ಹೋರಾಟ ನಡೆಸುತ್ತೇನೆ. ಪಲಾಯನವಾದ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ನಿಮ್ಮ ಮನೆಯ ಮಕ್ಕಳಿಗೆ ವಿಷ ಹಾಕುವ ಹುನ್ನಾರಕ್ಕೆ ಬಲಿ ಆಗಬೇಡಿ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸುವುದು ಬೇಡ ಎಂದು ಹೇಳಿದ್ದೆ. ಆದರೆ ಕಾರ್ಯಕರ್ತರ ಒತ್ತಡದಿಂದ ಅವನು ಚುನಾವಣೆಗೆ ಸ್ಪರ್ಧಿಸಿದ. ಮಂಡ್ಯದ ಜನತೆ ಅವನನ್ನು ಸೋಲಿಸಲಿಲ್ಲ. ಕಾಂಗ್ರೆಸ್‌, ಬಿಜೆಪಿ, ರೈತ ಸಂಘದವರು ಸೋಲಿಸಿದರು. ಸ್ವಾಭಿಮಾನ, ಸ್ವಾಭಿಮಾನ ಎಂದು ಮತ ಕೇಳಿ ಜಯಗಳಿಸಿದರು. ಆದರೆ ಇಂದು ಮಂಡ್ಯ ಜಿಲ್ಲೆ ಸ್ವಾಭಿಮಾನ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೈಗೆ ಹೋಗಲಿದೆ ಎಂದು ಪರೋಕ್ಷವಾಗಿ ಸಂಸದೆ ಸುಮಲತಾ ಅಂಬರೀಷ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ಸುರೇಶ್‌ಗೌಡ ಮಾತನಾಡಿ, ಕಳೆದ ಬಾರಿ 47 ಸಾವಿರ ಮತಗಳ ಅಂತರದಿಂದ ಜಯಗಳಿಸುವಂತೆ ಮಾಡಿದಿರಿ. ಕುಮಾರಸ್ವಾಮಿಯವರು 1700 ಕೋಟಿ ರುಪಾಯಿಗೂ ಅಧಿಕ ಅನುದಾನವನ್ನು ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದರು. ಪ್ರತಿ ಗ್ರಾಮಕ್ಕೆ ಕಾಂಕ್ರೀಟ್‌ ರಸ್ತೆ ಮಾಡಲಾಗಿದೆ. ಜೆಡಿಎಸ್‌ಗೆ ಮತ ಹಾಕುವ ಮೂಲಕ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮೂರು ಪಕ್ಷಗಳಿಗೂ ಈ ಚುನಾವಣೆ ಅಗ್ನಿ ಪರೀಕ್ಷೆ: ಎಚ್‌.ಡಿ.ಕುಮಾರಸ್ವಾಮಿ

ಮತ ಸೆಳೆಯಲು ಭರ್ಜರಿ ಬಾಡೂಟ: ಬೆಂಗಳೂರಿನಲ್ಲಿ ನೆಲೆಸಿರುವ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮತದಾರರನ್ನು ಸೆಳೆಯಲು ಭಾನುವಾರ ಕಾಂಗ್ರೆಸ್‌ನ ಚಲುವರಾಯಸ್ವಾಮಿ ನಾಯಂಡಹಳ್ಳಿಯಲ್ಲಿ ಸಮಾವೇಶ ಆಯೋಜಿಸಿ ಭರ್ಜರಿ ಬಾಡೂಟ ಹಾಕಿಸಿದರು. ಇತ್ತ ಜೆಡಿಎಸ್‌ನ ಸುರೇಶ್‌ಗೌಡ ಸಹ ಶ್ರೀಗಂಧ ಕಾವಲ್‌ನಲ್ಲಿ ಸಮಾವೇಶ ಆಯೋಜಿಸಿ ಮತದಾರರಿಗೆ ಬಾಡೂಟ ಹಾಕಿಸಿದರು. ಒಂದೇ ದಿವಸ ಇಬ್ಬರೂ ಶಕ್ತಿ ಪ್ರದರ್ಶನ ನಡೆಸಿದ್ದು ವಿಶೇಷವಾಗಿತ್ತು.