ಯಾವ ಪ್ರತ್ಯೇಕ ಸಭೆಯೂ ಇಲ್ಲ. ಊಟಕ್ಕೆ ಸೇರಿದರೆ ಅದನ್ನೇ ಸಭೆ ಎಂದು ಊಹೆ ಮಾಡಿಕೊಂಡರೆ ಏನು ಹೇಳಬೇಕು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು(ಜ.04): ಮುಖ್ಯಮಂತ್ರಿಗಳ ಬದಲಾವಣೆ ಕುರಿತು ಚರ್ಚಿಸಲು ಕಾಂಗ್ರೆಸ್‌ನ ಒಕ್ಕಲಿಗ ಶಾಸಕರು ಸಭೆ ಸೇರಿದ್ದಾರೆ ಎಂಬುದು ಶುದ್ಧ ಸುಳ್ಳು. ಊಟಕ್ಕೆ ಸೇರಿದರೆ ಅದನ್ನೇ ಸಭೆ ಎಂದು ಊಹೆ ವಾಡಿದರೆ ಹೇಗೆ?' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, 'ಮೊನ್ನೆ ಕೆಲವು ಸಿದ್ದು ಬಣದ ಶಾಸಕರು ಸಭೆ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಕೆಲ ಒಕ್ಕಲಿಗೆ ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದಾರೆ. ಅದರ ಉದ್ದೇಶವೇನು?' ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಯಾವ ಪ್ರತ್ಯೇಕ ಸಭೆಯೂ ಇಲ್ಲ. ಊಟಕ್ಕೆ ಸೇರಿದರೆ ಅದನ್ನೇ ಸಭೆ ಎಂದು ಊಹೆ ಮಾಡಿಕೊಂಡರೆ ಏನು ಹೇಳಬೇಕು ಎಂದು ಪ್ರಶ್ನಿಸಿದರು. ಹಾಗಾದರೆ ಒಕ್ಕಲಿಗ ಶಾಸಕರು ಸೇರಿರುವ ಉದ್ದೇಶವೇನು ಎಂಬ ಪ್ರಶ್ನೆಗೆ, 'ಊಟ ಮಾಡೋಕೆ' ಎಂದಷ್ಟೇ ಹೇಳಿದರು. ಸಂಪುಟ ಪುನರ್‌ರಚನೆ, ಮುಖ್ಯಮಂತ್ರಿಗಳ ಬದಲಾವಣೆ ವಿಚಾರವಾಗಿ ಚರ್ಚಿಸಲು ಸೇರಿದ್ದಾರಂತಲ್ಲ ಎಂಬ ಪ್ರಶ್ನೆಗೆ, 'ಅವೆಲ್ಲವೂ ಸುಳ್ಳು. ಯಾವ ಪುನರ್ ರಚನೆಯೂ ಇಲ್ಲ, ಯಾವ ಬದಲಾವಣೆಯೂ ಇಲ್ಲ.' ಎಂದು ಹೇಳಿದರು. 

ತನ್ಮೂಲಕ ಮುಖ್ಯಮಂತ್ರಿಗಳ ಬದಲಾವಣೆ ವಿಚಾರವಾಗಿ ಚರ್ಚಿಸಲು ಒಕ್ಕಲಿಗ ಶಾಸಕರು ಸಭೆ ನಡೆಸಿದ್ದಾರೆ ಎಂಬ ಸುದ್ದಿಯನ್ನು ತಳ್ಳಿ ಹಾಕಿದರು. 

ಅಶೋಕ್ ಅವಧಿಯಲ್ಲಿ ಮಾಡಿರಲಿಲ್ಲವೇ?: 

ಬಸ್‌ ಪ್ರಯಾಣ ದರ ಪರಿಷ್ಕರಣೆ ಸಂಬಂಧ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಆ‌ರ್. ಅಶೋಕ್‌ ಸಾರಿಗೆ ಸಚಿವರಾಗಿದ್ದಾಗ ಬಿಜೆಪಿ ಸರ್ಕಾರವು ಬಸ್‌ ದರ ಹೆಚ್ಚಳ ಮಾಡಿರಲಿಲ್ಲವೇ? ಅವರು ಎಷ್ಟು ಬಾರಿ ಹೆಚ್ಚಳ ಮಾಡಿದ್ದರು? ಯಾಕೆ ಹೆಚ್ಚಳ ಮಾಡಿದ್ದರು ಎಂಬುದನು ಕೇಳಿ ಎಂದು ಹೇಳಿದರು. 

ಯಾವ ಅಜೆಂಡಾನೂ ಇಲ್ಲ 

ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ದಲ್ಲಿ ಊಟಕ್ಕಷ್ಟೇ ಸೇರಿದ್ದೆವು. ಈ ವೇಳೆ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿರುವ ಬಿಜೆಪಿಯವರಿಗೆ ತಿರುಗೇಟು ನೀಡುವುದು ಹೇಗೆಂಬುದನ್ನು ಚರ್ಚಿಸಿದ್ದೇವೆ. ಉಳಿದಂತೆ ಬೇರೆ ಯಾವುದೇ ಅಜೆಂಡಾವೂ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ನಮ್ಮ ಕೈಯಲ್ಲಿಲ್ಲ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.