ನನ್ನ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಈಗಲೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಮುಂದೆಯೂ ಇರುವುದಿಲ್ಲ. ನಾವಿಬ್ಬರು ಮುಂದೆಯೂ ಒಟ್ಟಿಗೆ ಹೋಗಲು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ನ.30): ‘ನನ್ನ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಈಗಲೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಮುಂದೆಯೂ ಇರುವುದಿಲ್ಲ. ನಾವಿಬ್ಬರು ಮುಂದೆಯೂ ಒಟ್ಟಿಗೆ ಹೋಗಲು ನಿರ್ಧರಿಸಿದ್ದೇವೆ. ನಾಯಕತ್ವದ ವಿಚಾರದಲ್ಲಿ ನಾವಿಬ್ಬರೂ ಹೈಕಮಾಂಡ್‌ ನಿರ್ದೇಶನ, ನಿರ್ಧಾರದಂತೆ ನಡೆದುಕೊಳ್ಳಲು ತೀರ್ಮಾನಿಸಿದ್ದೇವೆ. ಈ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡುತ್ತೇವೆ. ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ..’ ಇದು, ಹೈಕಮಾಂಡ್‌ ನಿರ್ದೇಶನದಂತೆ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಉಪಾಹಾರ ಸಭೆ ನಡೆಸಿದ ಬಳಿಕ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಸ್ಪಷ್ಟೋಕ್ತಿ.

ಡಿ.8ರಿಂದ ವಿಧಾನಸಭೆ ಅಧಿವೇಶನ ಇರುವುದರಿಂದ ಪ್ರಸ್ತುತ ಉದ್ಭವಿಸಿರುವ ಗೊಂದಲಗಳನ್ನು ತಿಳಿಗೊಳಿಸುವ ಕೆಲಸ ಮಾಡಲು ಇಬ್ಬರಿಗೂ ಹೈಕಮಾಂಡ್‌ ನಾಯಕರು ಸೂಚಿಸಿದ್ದರು. ಅದರಂತೆ ಡಿ.ಕೆ.ಶಿವಕುಮಾರ್‌ ಅವರಿಗೆ ಇಂದು ನಮ್ಮ ಮನೆಗೆ ಉಪಹಾರಕ್ಕೆ ಬರಲು ಆಹ್ವಾನ ನೀಡಲಾಗಿತ್ತು. ಉಪಹಾರ ಸೇವಿಸಿದ ಬಳಿಕ ಇಬ್ಬರೇ ಚರ್ಚೆ ನಡೆಸಿದ್ದೇವೆ. ನಾಯಕತ್ವದ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನ, ಹೈಕಮಾಂಡ್‌ ಸೂಚನೆಯಂತೆ ನಡೆದುಕೊಳ್ಳಲು ನಾನು ಹಾಗೂ ಶಿವಕುಮಾರ್ ಇಬ್ಬರೂ ತೀರ್ಮಾನಿಸಿದ್ದೇವೆ ಎಂದರು.

ನಾಳೆಯಿಂದ ಯಾವ ಗೊಂದಲವೂ ಇರುವುದಿಲ್ಲ. ಈಗಲೂ ಇಲ್ಲ. ಕೆಲ ಮಾಧ್ಯಮಗಳಿಂದ ಗೊಂದಲ ಸೃಷ್ಟಿಯಾಗಿತ್ತು. ನಮ್ಮ ನಡುವೆ ಆಗಿರುವ ಈ ಒಪ್ಪಂದದ ಬಗ್ಗೆ ಹೈಕಮಾಂಡಿಗೆ ಮಾಹಿತಿ ನೀಡಲಾಗುವುದು. ಅಂತಿಮವಾಗಿ ವರಿಷ್ಠರು ಯಾವುದೇ ನಿರ್ಧಾರ ಮಾಡಿದರೂ ಅದರಂತೆ ನಡೆಯಲು ನಾವಿಬ್ಬರೂ ಬದ್ಧರಾಗಿರುತ್ತೇವೆ ಎಂದರು. ಇಬ್ಬರ ಮಧ್ಯೆ ಅಧಿಕಾರ ಹಂಚಿಕೆ ಬಗ್ಗೆ ಸೌಹಾರ್ದಯುತವಾದ ಸೆಟಲ್ಮೆಂಟ್‌ ಆಗಲಿದೆ ಎಂಬ ಮಾತುಗಳು ಕೇಳಿಬಂದಿವೆ ಎಂಬ ಪ್ರಶ್ನೆಗೆ, ನಾವಿಬ್ಬರೂ ಒಟ್ಟಿಗೆ ಹೋಗುವುದೇ ನಮ್ಮಿಬ್ಬರ ನಡುವೆ ಆಗಿರುವ ಸೆಟಲ್‌ಮೆಂಟ್‌, ಹೈಕಮಾಂಡ್‌ ನಾಯಕರು ಹೇಳಿದಂತೆ ನಡೆದುಕೊಳ್ಳುವುದೇ ನಮ್ಮಿಬ್ಬರ ನಡುವಿನ ಸೆಟಲ್‌ಮೆಂಟ್‌ ಎಂದರು.

ಈ ಸಭೆಯಿಂದ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಭರವಸೆ ಸಿಕ್ಕಿದೆಯಾ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಮಾಧ್ಯಮದವರು ಪ್ರಶ್ನಿಸಿದಾಗ ತಾವೇ ಉತ್ತರ ನೀಡಿದ ಸಿಎಂ ಅವರು, ಹೈಕಮಾಂಡ್‌ ಏನೇ ಹೇಳಿದರೂ ಅದನ್ನು ನಾವಿಬ್ಬರೂ ಚಾಚೂತಪ್ಪದೆ ಪಾಲಿಸುತ್ತೇವೆ ಎಂದು ಹೇಳಿದ ಮೇಲೆ ಇನ್ನೇನು ಕೊಟ್ಟ ಮಾತಿನಂತೆ ನಡೆಯುವುದು ಎಂದು ಪ್ರಶ್ನಿಸಿದರು.

ಕೆಲ ಸಚಿವರು, ಶಾಸಕರು ಪ್ರತ್ಯೇಕ ಗುಂಪಾಗಿ ದೆಹಲಿ ನಾಯಕರ ಭೇಟಿ ನೀಡುವುದು, ಸಿಎಂ, ಡಿಸಿಎಂ ಪರ ಹೇಳಿಕೆಗಳನ್ನು ನೀಡುತ್ತಿರುವ ಕುರಿತ ಪ್ರಶ್ನೆಗೆ ಯಾವ ಗುಂಪು, ಬಣಗಳೂ ಇಲ್ಲ. ಗೊಂದಲವೂ ಇಲ್ಲ, ಅಧಿಕಾರ ಹಂಚಿಕೆ, ನಾಯಕತ್ವದ ಬದಲಾವಣೆ ಬಗ್ಗೆ ಉದ್ಭವಿಸಿರುವ ಗೊಂದಲಗಳೆಲ್ಲವೂ ಕೆಲ ಮಾಧ್ಯಮಗಳ ಸೃಷ್ಟಿ. ಯಾವುದೇ ಸಚಿವರಾಗಲಿ, ಶಾಸಕರಾಗಲಿ ಸರ್ಕಾರ, ನಾಯಕತ್ವದ ವಿರುದ್ಧ ಬಣ, ಗುಂಪುಗಾರಿಕೆ ಮಾಡಿಲ್ಲ. ನಾನು ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಹೇಳಿದ್ದಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್‌ ನಾಯಕರ ಭೇಟಿಗೆ ದೆಹಲಿಗೆ ಹೋಗಿರಬಹುದು. ಹಾಗೆಂದು ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಕೆಲವರು ಇಂಥ ಕಾರಣಕ್ಕೆ ಭೇಟಿ ನೀಡಿರುವುದಾಗಿಯೂ ನಮಗೆ ತಿಳಿಸಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದರು.

2028ರಲ್ಲೂ ಒಟ್ಟಾಗಿ ಪಕ್ಷ ಅಧಿಕಾರಕ್ಕೆ ತರ್ತೇವೆ

ಇತ್ತೀಚಿನ ದಿನಗಳಲ್ಲಿ ಅನಗತ್ಯವಾಗಿ ಸೃಷ್ಟಿಯಾಗಿರುವ ಕೆಲ ಗೊಂದಲಗಳ ಬಗ್ಗೆ ಚರ್ಚಿಸಿ ಅವುಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದೇವೆ. ಜೊತೆಗೆ 2028ರ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಕಾರ್ಪೋರೇಷನ್, ತಾಲೂಕು, ಜಿಲ್ಲಾ ಹಾಗೂ ಗ್ರಾಪಂ ಚುನಾವಣೆಗಳು ನಮಗೆ ಬಹಳ ಮುಖ್ಯ. ಈ ಬಗ್ಗೆ ಚರ್ಚೆ ಮಾಡಿದ್ದೇವೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದಂತೆಯೇ 2028ರ ವಿಧಾನಸಭೆ ಚುನಾವಣೆಯಲ್ಲೂ ಒಟ್ಟಿಗೆ ಕೆಲಸ ಮಾಡಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದೇವೆ ಎಂದರು. ಜತೆಗೆ 2029ರ ಲೋಕಸಭಾ ಚುನಾವಣೆಯಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಒಟ್ಟಾಗಿ ಕೆಲಸ ಮಾಡಿ ದೇಶದಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.