ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರು ಸ್ಪಷ್ಟೀಕರಣ ಕೇಳುವುದು ಸಹಜ.  

ತುಮಕೂರು (ಫೆ.23): ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರು ಸ್ಪಷ್ಟೀಕರಣ ಕೇಳುವುದು ಸಹಜ. ನಾವು ಕಳಿಸಿದ್ದೆಲ್ಲಾ ಸರಿ ಇದೆ ಎಂದು ಅವರಿಗೆ ಅನ್ನಿಸುವುದಿಲ್ಲ. ಹಾಗೆಯೇ ಅನೇಕ ಬಿಲ್ ಗಳಲ್ಲಿ‌ ನಾವು ಕಳಿಸುವುದನ್ನು ಅವರು ಪ್ರಶ್ನೆನೇ ಮಾಡುವುದಿಲ್ಲ‌. ಹಾಗೇ ಸಹಿ ಹಾಕಿ ಕಳುಹಿಸಿದ್ದಾರೆ ಎಂದರು. ಕೆಲವು ಸಂದರ್ಭದಲ್ಲಿ ಅವರು ಸ್ಪಷ್ಟೀಕರಣ ಕೇಳುತ್ತಾರೆ. ಆಗ ನಾವು ಸ್ಪಷ್ಟೀಕರಣ ಕೊಡುತ್ತೇವೆ ಎಂದರು.

ಮೈಕ್ರೋ ಫೈನಾನ್ಸ್ ಬಿಲ್ ನಲ್ಲೂ ಅವರಿಗೆ ಡೌಟ್ ಇತ್ತು.‌ ನಾವು ಸ್ಪಷ್ಟೀಕರಣ ಕೊಟ್ಟೆವು. ನಂತರ ಅವರು ಅಂಕಿತ ಹಾಕಿದ್ದರು ಎಂದರು. ಹಾಗಾಗಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದರು. ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿ ಪುಂಡರಿಂದ ಹಲ್ಲೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅವರ ವಿರುದ್ಧ ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದ್ದಾರೆ ಎಂದರು. ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮತ್ತೆ ಮತ್ತೆ ಆತ್ಮಹತ್ಯೆಗಳು ಆಗುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಹೊಸ ಕಾನೂನು ಪರಿಣಾಮಕಾರಿಯಾಗಲು ಸ್ವಲ್ಪ ದಿನ ಸಮಯ ಬೇಕು. ನಾವು ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದರು.

ಆಗಸ್ಟ್ ಮಾಹೆಯೊಳಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ: ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಆಗಸ್ಟ್ ಮಾಹೆಯೊಳಗೆ ಪೂರ್ಣಗೊಳಿಸಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎತ್ತಿನಹೊಳೆ, ರೈಲ್ವೆ, ಹೇಮಾವತಿ, ಕೆಐಎಡಿಬಿ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಗಾಗಿ ಈವರೆಗೂ 2679 ಎಕರೆ ಭೂಸ್ವಾಧೀನವಾಗಿದ್ದು, ಯೋಜನೆಗೆ ಅವಶ್ಯವಿರುವ ಉಳಿದ 438 ಎಕರೆ ಭೂಮಿಯನ್ನು 4 ತಿಂಗಳೊಳಗಾಗಿ ಸ್ವಾಧೀನಪಡಿಸಿಕೊಂಡು ಎತ್ತಿನ ಹೊಳೆ ಯೋಜನೆಗೆ ಹಸ್ತಾಂತರಿಸಬೇಕೆಂದು ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್ ಜಿ.ಎನ್.ಅವರಿಗೆ ಸೂಚನೆ ನೀಡಿದರು.

ಎತ್ತಿನಹೊಳೆ ನೀರಿನ ಯೋಜನೆ ನಿಧಾನಗತಿ: ಗೃಹ ಸಚಿವ ಪರಮೇಶ್ವರ್ ಅಸಮಾಧಾನ

ಲಭ್ಯವಿರುವ ಅನುದಾನವನ್ನು ಭೂಮಾಲೀಕರಿಗೆ ಪಾವತಿಸಿ ಎತ್ತಿನ ಹೊಳೆ ಯೋಜನೆಯನ್ನು ಆಗಸ್ಟ್ ಮಾಹೆಯೊಳಗೆ ಪೂರ್ಣಗೊಳಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಮುರಳೀಧರ್ ರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಈ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮುರಳೀಧರ್ ಸಚಿವರಿಗೆ ಮಾಹಿತಿ ನೀಡಿ, ಯೋಜನೆಯಡಿ ಜಿಲ್ಲೆಯಲ್ಲಿ 150 ಕಿ.ಮೀ. ಗುರುತ್ವಾ ಕಾಲುವೆಯನ್ನು ಹೊಂದಿದ್ದು, ಇದರಲ್ಲಿ 115 ಕಿ.ಮೀ.ವರೆಗಿನ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಉಳಿದ 24 ಕಿ.ಮೀ.ನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ 3 ಕಡೆ ಅರಣ್ಯ ಪ್ರದೇಶದ ಸಮಸ್ಯೆಯಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಸರಿಪಡಿಸಲಾಗುವುದು ಎಂದು ತಿಳಿಸಿದರು. ನಂತರ ಮಾತನಾಡಿದ ಸಚಿವರು, ತುಮಕೂರು-ರಾಯದುರ್ಗ ಯೋಜನೆಗಾಗಿ 1361 ಎಕರೆ ಪ್ರದೇಶವನ್ನು ರೈಲ್ವೆ ಇಲಾಖೆಗೆ ಈಗಾಗಲೇ ಹಸ್ತಾಂತರಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ. ಬಾಕಿ ಇರುವ 35 ಎಕರೆ ಭೂಮಿಯನ್ನು 45 ದಿನಗಳೊಳಗಾಗಿ ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿದರು.