ಸರ್ಕಾರಿ ಆಸ್ಪತ್ರೆಗಳಿಗೆ ಕಂಪನಿಗಳು ಪೂರೈಸುವ ಔಷಧಗಳ ಗುಣಮಟ್ಟವನ್ನು ಎರಡನೇ ಬಾರಿ ಪ್ರಯೋಗಾಲಯದಿಂದ ಪರೀಕ್ಷಿಸಿದ ನಂತರವೇ ಜಿಲ್ಲೆ, ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಸಲು ತೀರ್ಮಾನಿಸಲಾಗಿದೆ.

ವಿಧಾನ ಪರಿಷತ್‌ (ಮಾ.11): ಸರ್ಕಾರಿ ಆಸ್ಪತ್ರೆಗಳಿಗೆ ಕಂಪನಿಗಳು ಪೂರೈಸುವ ಔಷಧಗಳ ಗುಣಮಟ್ಟವನ್ನು ಎರಡನೇ ಬಾರಿ ಪ್ರಯೋಗಾಲಯದಿಂದ ಪರೀಕ್ಷಿಸಿದ ನಂತರವೇ ಜಿಲ್ಲೆ, ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಸಲು ತೀರ್ಮಾನಿಸಲಾಗಿದೆ. ಜೊತೆಗೆ 2-3 ವರ್ಷಕ್ಕೊಂದು ಬಾರಿ ಔಷಧ ತಯಾರಿಕೆ ಕಂಪನಿಗೆ ಖುದ್ದಾಗಿ ತೆರಳಿ ತಪಾಸಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಬಿಜೆಪಿಯ ಡಾ. ತಳವಾರ್‌ ಸಾಬಣ್ಣ ಹಾಗೂ ಸಿ.ಟಿ. ರವಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಅಗತ್ಯ ಹಾಗೂ ಇತರ ಔಷಧಗಳ ಸಂಖ್ಯೆಯನ್ನು 732ರಿಂದ 1084ಕ್ಕೆ ಹೆಚ್ಚಿಸಲಾಗಿದೆ. ಕೆಲವು ಜೀವ ರಕ್ಷಕ ಔಷಧಗಳನ್ನು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪೂರೈಸಬೇಕಾಗಿರುವುದರಿಂದ ಟೆಂಡರ್‌ ಪ್ರಕ್ರಿಯೆಯಲ್ಲಿ ಹೆಚ್ಚು ಬಿಡ್‌ದಾರರು ಭಾಗಿಯಾಗಲ್ಲ. ಕೆಲವು ಔಷಧಗಳಿಗೆ ಹಲವು ಬಾರಿ ಟೆಂಡರ್‌ ಆಹ್ವಾನಿಸಿದ್ದರೂ ಪ್ರತಿಕ್ರಿಯಿಸುವುದಿಲ್ಲ ಎಂದರು.

ತುರ್ತು ಸಂದರ್ಭದಲ್ಲಿ ಅಗತ್ಯ ಪ್ರಮಾಣದಲ್ಲಿ ಔಷಧಗಳನ್ನು ತಮ್ಮ ಮಟ್ಟದಲ್ಲಿ ಸೂಕ್ತ ಪ್ರಾಧಿಕಾರದ ಅನುಮೋದನೆಯೊಂದಿಗೆ ಖರೀದಿಸಿ ಸಾರ್ವಜನಿಕರಿಗೆ ವಿತರಿಸಲು ಸಹ ಸೂಚಿಸಲಾಗಿದೆ. 23 ಔಷಧಿಗಳನ್ನು 4ಜಿ ವಿನಾಯಿತಿ ಮೂಲಕ 9.50 ಕೋಟಿ ರು. ಮೌಲ್ಯದ ಔಷಧಿಗಳನ್ನು ಖರೀದಿಸುವ ಪ್ರಸ್ತಾವನೆ ಪ್ರಕ್ರಿಯೆಯಲ್ಲಿರುತ್ತದೆ ಎಂದು ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ ಡಾ. ತಳವಾರ್‌ ಸಾಬಣ್ಣ ಅವರು, ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಹಾಗೂ ಜೀವ ರಕ್ಷಕ ಔಷಧಗಳ ಕೊರತೆಯಿಂದ ದುಬಾರಿ ದರದಲ್ಲಿ ಜನರು ಖರೀದಿಸುವ ಸ್ಥಿತಿ ಇದೆ ಎಂದರು. 

ಬಿಜೆಪಿ ವಿರೋಧದ ಮಧ್ಯೆ ಬೆಂಗಳೂರು ಅರಮನೆ ವಿಧೇಯಕ ವಿಧಾನ ಪರಿಷತ್ತಲ್ಲೂ ಅಂಗೀಕಾರ

ಒತ್ತಡ ನಿವಾರಣೆಗೆ ಮನೋವಿಜ್ಞಾನ ಅವಶ್ಯಕ: ಇಂದಿನ ಡಿಜಿಟಲ್‌ ಯುಗದಲ್ಲಿ ಮಾನಸಿಕ ಒತ್ತಡ, ಖಿನ್ನತೆಗಳು ಅತ್ಯಧಿಕವಾಗಿದ್ದು ಎಲ್ಲರಿಗೂ ಮನೋವಿಜ್ಞಾನದ ಅವಶ್ಯಕತೆ ಇದೆ. ಹಾಗಾಗಿ ಎಲ್ಲ ಆರೋಗ್ಯ ಸಂಸ್ಥೆಗಳು ನುರಿತ ಮನೋಶಾಸ್ತ್ರಜ್ಞರನ್ನು ನೇಮಿಸಿಕೊಂಡು ಉದ್ಯೋಗಸ್ತರು ಒತ್ತಡ ಪರಿಸ್ಥಿತಿ ನಿಭಾಯಿಸಲು ಕೌನ್ಸೆಲಿಂಗ್‌, ಚಿಕಿತ್ಸೆ ಮೂಲಕ ಸೂಕ್ತ ಪರಿಹಾರಗಳನ್ನು ಒದಗಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ‘ಮನೋವಿಜ್ಞಾನ ಕ್ಷೇತ್ರ ವಿಶ್ವದೆಲ್ಲೆಡೆ ವ್ಯಾಪಿಸಿದೆ, ಆಧುನಿಕ ಪ್ರಪಂಚದಲ್ಲಿ ಮನೋವಿಜ್ಞಾನದ ಅನಿವಾರ್ಯತೆ ಕೂಡ ಹೆಚ್ಚಾಗಿದೆ. ಸಂತೋಷ, ನೆಮ್ಮದಿಯನ್ನು ಹುಡುಕುವ ಪರಿಸ್ಥಿತಿ ಎದುರಾಗಿದೆ ಆ ನಿಟ್ಟಿನಲ್ಲಿ ಮನೋವಿಜ್ಞಾನದ ಪಾತ್ರ ಗಣನೀಯವಾಗಿದೆ‌ ಎಂದು ತಿಳಿಸಿದರು.