Asianet Suvarna News Asianet Suvarna News

Hijab Row: ಸದನದಲ್ಲಿ HDK ಹಿಜಾಬ್‌ ಪ್ರಸ್ತಾಪಕ್ಕೆ ಜಮೀರ್‌ ಗರಂ

*   ನಿಲುವಳಿ ಸೂಚನೆ ಮಂಡಿಸಿದ ಎಚ್‌ಡಿಕೆ, ಜಮೀರ್‌ ವಿರೋಧ
*  ಜೆಡಿಎಸ್‌- ಕಾಂಗ್ರೆಸ್‌ ಶಾಸಕರ ಜಟಾಪಟಿ
*  ನಿಯಮ 69ರ ಅಡಿ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಸ್ಪೀಕರ್‌ ಕಾಗೇರಿ ಭರವಸೆ
 

Talk War Between HD Kumaraswamy and Zameer Ahmed Khan For Hijab Row grg
Author
First Published Mar 15, 2022, 7:41 AM IST | Last Updated Mar 15, 2022, 7:41 AM IST

ಬೆಂಗಳೂರು(ಮಾ.15):  ಹಿಜಾಬ್(Hijab) ವಿವಾದ ಸದನದಲ್ಲಿ ಮತ್ತೆ ಪ್ರತಿಧ್ವನಿಸಿದ್ದು, ಸಮವಸ್ತ್ರ ವಿವಾದದಿಂದ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟದ ಮೇಲಾಗಿರುವ ದುಷ್ಪರಿಣಾಮದ ಬಗ್ಗೆ ಚರ್ಚಿಸಲು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಅವರು ಸೋಮವಾರ ನಿಲುವಳಿ ಸೂಚನೆ ಮಂಡಿಸಿದ ಪರಿಣಾಮ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಕುಮಾರಸ್ವಾಮಿ ಅವರು ನಿಲುವಳಿ ಸೂಚನೆ ಕುರಿತು ಪ್ರಾಥಮಿಕ ವಿಚಾರ ಮಂಡಿಸುವ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಜಮೀರ್‌ ಅಹಮದ್‌ ಖಾನ್‌(Zameer Ahmed Khan), ಇಷ್ಟು ದಿನ ಕುಮಾರಸ್ವಾಮಿ ಏಕೆ ಸುಮ್ಮನಿದ್ದರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕಾಂಗ್ರೆಸ್‌(Congress) ಹಾಗೂ ಜೆಡಿಎಸ್‌(JDS) ನಡುವೆ ಕೆಲ ಕಾಲ ವಾದ-ಪ್ರತಿವಾದ ನಡೆಯಿತು.

Hijab Row: ಶಿವಮೊಗ್ಗದಲ್ಲಿ ಮತ್ತೆ ಹಿಜಾಬ್‌ ವಿವಾದ ಸದ್ದು: ಪ್ರತಿಭಟನೆ

ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ(Uniform) ವಿವಾದದಿಂದ ಸಮಸ್ಯೆ ಉಂಟಾಗಿದೆ. ಕೆಲವೆಡೆ ಅಹಿತಕರ ಘಟನೆಯೂ ನಡೆದು ಸಾಮರಸ್ಯಕ್ಕೆ ಭಂಗ ತಂದಿವೆ. ರಾಷ್ಟ್ರಕವಿ ಕುವೆಂಪು ಅವರು ನಮ್ಮ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದರು. ಆದರೆ ಅವರ ಜಿಲ್ಲೆಯಲ್ಲೇ ಹಿಂಸಾಚಾರ ನಡೆದಿದೆ. ಮಕ್ಕಳ ಮನಸ್ಸಿನ ಮೇಲೆ ಇದರಿಂದ ತೀವ್ರ ದುಷ್ಪರಿಣಾಮ ಬೀರಿದ್ದು, ಈ ಸೂಕ್ಷ್ಮ ವಿಚಾರ ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋರಿದರು.

ಜೆಡಿಎಸ್‌-ಕಾಂಗ್ರೆಸ್‌ ವಾಗ್ವಾದ:

ಈ ವೇಳೆ ಮಧ್ಯಪ್ರವೇಶಿಸಿದ ಜಮೀರ್‌ ಅಹ್ಮದ್‌ ಖಾನ್‌, ‘ಕುಮಾರಸ್ವಾಮಿ ಅವರು ಹಿಜಾಬ್‌, ಗಿಜಾಬ್‌ ಏನೂ ಬೇಡ ಎನ್ನುತ್ತಿದ್ದರು. ಒಂದೂವರೆ ತಿಂಗಳ ನಂತರ ಈಗ ದಿಢೀರನೇ ಪ್ರಸ್ತಾಪ ಮಾಡುತ್ತಿದ್ದಾರೆ. ಇಷ್ಟುದಿನ ಸುಮ್ಮನಿದ್ದವರಿಗೆ ದಿಢೀರ್‌ ಪ್ರೀತಿ ಏಕೆ?’ ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪಿಸಿದ ಕೆಲ ಜೆಡಿಎಸ್‌ ಸದಸ್ಯರು, ‘ನಿಮಗೆ ಕಾಳಜಿ ಇದ್ದಿದ್ದರೆ ನೀವೂ ನಿಲುವಳಿ ಸೂಚನೆ ಮಂಡಿಸಬೇಕಿತ್ತು. ಈಗ ಕುಮಾರಸ್ವಾಮಿ ಅವರು ಮಂಡಿಸಿದರೆ ನಿಮಗೇನು?’ ಎಂದು ಕಿಡಿ ಕಾರಿದರು. ಇದರಿಂದ ಕೆಲ ಕಾಲ ವಾಗ್ವಾದ ನಡೆಯಿತು.

ಮತ್ತೆ ಮಾತು ಮುಂದುವರೆಸಿದ ಕುಮಾರಸ್ವಾಮಿ, ಜಂಟಿ ಅಧಿವೇಶನದ ಸಂದರ್ಭದಲ್ಲೇ ನಿಲುವಳಿ ಸೂಚನೆ ಕೊಟ್ಟಿದ್ದೆವು. ಆಗ ಅವಕಾಶ ಸಿಗಲಿಲ್ಲ. ಚುನಾವಣೆಗೆ ಮತ ಪಡೆಯಲು ಪ್ರಸ್ತಾಪ ಮಾಡುವುದು ಬೇರೆ, ಪಕ್ಷದ ನಿಲುವು ಬೇರೆ, ಸರ್ಕಾರದ ನಿಲುವು ಬೇರೆ. ಎಲ್ಲ ಸಮಾಜಕ್ಕೂ ರಕ್ಷಣೆ ಕೊಡಬೇಕಾದದ್ದು ಸರ್ಕಾರದ ಜವಾಬ್ದಾರಿ. ಸಾಮರಸ್ಯ ಮೂಡಿಸಲು ಈ ವಿಷಯದ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದರು.

Dress Code: ಬಣ್ಣ ಬಣ್ಣ ಬೇಡ... ಸಮವಸ್ತ್ರವೇ ಬೆಸ್ಟ್ ಎಂದ ನಿವೃತ್ತ ವಿಸಿಗಳು!

ಮಧ್ಯಪ್ರವೇಶಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ(JC Madhuswamy), ನಿಲುವಳಿ ಸೂಚನೆಯಡಿ ಈ ವಿಚಾರ ಬರುವುದಿಲ್ಲ. ಇತ್ತೀಚಿನ ವಿಚಾರವಲ್ಲ. ಬಜೆಟ್‌ ಮೇಲಿನ ಚರ್ಚೆ, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ನಿಲುವಳಿ ವಿಚಾರ ಪ್ರಸ್ತಾಪಿಸಲು ಅವಕಾಶ ನೀಡಬಾರದು. ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ನ್ಯಾಯಾಂಗ ನಿಂದನೆಯಾಗುವ ಸಾಧ್ಯತೆ ಇದೆ. ಹೀಗಾಗಿ ಚರ್ಚೆಗೆ ಅವಕಾಶ ನೀಡಿದರೂ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬಾರದು ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಕುಮಾರಸ್ವಾಮಿ ಅವರು, ನ್ಯಾಯಾಂಗ ನಿಂದನೆಗೆ ಒಳಗಾಗುವಂತಹ ಅಂಶಗಳನ್ನು ಹೊರತುಪಡಿಸಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಸ್ಪೀಕರ್‌ ಅವರನ್ನು ಕೋರಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ ಕುಮಾರಸ್ವಾಮಿ ಅವರಿಗೆ ಚರ್ಚೆಗೆ ಅವಕಾಶ ನೀಡಬೇಕು ಎಂದರು. ಈ ವೇಳೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನಿಲುವಳಿ ಸೂಚನೆಯಡಿ ಈ ವಿಚಾರ ಬರುವುದಿಲ್ಲ. ಹಾಗಾಗಿ ನಿಯಮ 69ರಡಿ ಮಂಗಳವಾರ ಅಥವಾ ಬುಧವಾರ ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.
 

Latest Videos
Follow Us:
Download App:
  • android
  • ios