Asianet Suvarna News Asianet Suvarna News

ಅನರ್ಹ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ

ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಶಾಸಕರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ಬಗೆಗಿನ ತೀರ್ಪು ಇಂದು ಪ್ರಕಟಗೊಳ್ಳಲಿದ್ದು, ಈಗಾಗಲೇ ದಿನಾಂಕ ನಿಗದಿಯಾಗಿರುವ ಉಪಚುನಾವಣೆ ನಡೆಯಲಿದೆಯೇ ಅಥವಾ ಇಲ್ಲವೇ ಎಂಬು ದನ್ನು ಈ ತೀರ್ಪು ನಿರ್ಧರಿಸಲಿದೆ. 

Supreme court To Deliver Verdict On Disqualified MLAs
Author
Bengaluru, First Published Nov 13, 2019, 7:24 AM IST

ನವದೆಹಲಿ [ನ.13]:  ರಾಜ್ಯ ವಿಧಾನಸಭೆಯಿಂದ ಅಂದಿನ ಸ್ಪೀಕರ್ ರಮೇಶ್ ಕುಮಾರ್ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಶಾಸಕರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ಬಗೆಗಿನ ತೀರ್ಪು ಇಂದು ಪ್ರಕಟಗೊಳ್ಳಲಿದ್ದು, ಈಗಾಗಲೇ ದಿನಾಂಕ ನಿಗದಿಯಾಗಿರುವ ಉಪಚುನಾವಣೆ ನಡೆಯಲಿದೆಯೇ ಅಥವಾ ಇಲ್ಲವೇ ಎಂಬು ದನ್ನು ಈ ತೀರ್ಪು ನಿರ್ಧರಿಸಲಿದೆ. 

ಇದರೊಂದಿಗೆ ಕಳೆದ ನಾಲ್ಕೂವರೆ ತಿಂಗಳ ರಾಜ್ಯ ರಾಜಕೀಯದ ನಾಟಕೀಯ ಬೆಳವಣಿಗೆಗಳಿಗೆ ತೆರೆ ಬೀಳಲಿದೆಯೇ ಅಥವಾ ಹೊಸದೊಂದು ಅಧ್ಯಾಯ ಪ್ರಾರಂಭವಾಗಲಿದೇ ಎಂಬ ಕುತೂಹಲ ದೇಶಾದ್ಯಂತ ಮಡುಗಟ್ಟಿದೆ.

ಅದೇರೀತಿ ರಾಜೀನಾಮೆ ಮತ್ತು ಅನರ್ಹ ತೆಯ ಪ್ರಶ್ನೆ ಅಡಕಗೊಂಡ ಸಂದರ್ಭದಲ್ಲಿ ಸ್ಪೀಕರ್ ಯಾವ ಕ್ರಮ ಕೈಗೊಳ್ಳಬೇಕು ಎಂಬ ಕಾನೂನಾತ್ಮಕ ಪ್ರಶ್ನೆಗೂ ಈ ಪ್ರಕರಣದಲ್ಲಿ ನೀಡುವ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉತ್ತರ ಅಡಕವಾಗಿರಬಹುದು ಎಂಬ ಕಾರಣಕ್ಕೆ ಇಡೀ ಕಾನೂನು ವಲಯ ಕೂಡ ಪ್ರಕರಣದ ತೀರ್ಪನ್ನು ಕಾತರದಿಂದ ಕಾಯುತ್ತಿದೆ.

ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ 15 ಶಾಸಕರನ್ನು ಮತ್ತು ರಾಜೀನಾಮೆ  ನೀಡದ ಇಬ್ಬರು ಶಾಸಕರನ್ನು ಅನರ್ಹ ಗೊಳಿಸಿದ್ದ ಆಗಿನ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶವನ್ನು ಪ್ರಶ್ನಿಸಿ ಜುಲೈ 28ಕ್ಕೆ ಮೊದಲ ಅರ್ಜಿ ಮತ್ತು ಆ.3ರಂದು 9ನೇಯ ಹಾಗೂ ಕೊನೆಯ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿತ್ತು. ಜುಲೈ ತಿಂಗಳಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿದ ಒಟ್ಟು 15ಶಾಸಕರು ಆಗಿನ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. 

ಆದರೆ ಈ ಶಾಸಕರ ಮೇಲೆ ಆ ಪಕ್ಷಗಳ ನಾಯಕರು ನೀಡಿದ ಅನರ್ಹತೆಯ ದೂರನ್ನು ಪರಿಗಣಿಸಿದ ಸ್ಪೀಕರ್ ಅವರು ಈ ಶಾಸಕರನ್ನು 2023 ರವರೆಗೆ ವಿಧಾನ ಸಭೆಯಿಂದ ಅನರ್ಹಗೊಳಿಸಿದ್ದರು. ಕೆಪಿಜೆಪಿಯಿಂದ ಚುನಾಯಿತರಾಗಿ, ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ ಆರ್.ಶಂಕರ್ ಮತ್ತು ಅನಾರೋಗ್ಯದ ಕಾರಣವೊಡ್ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಸದನದಲ್ಲಿ ಹಾಜರಿರದ ಶ್ರೀಮಂತ್ ಪಾಟೀಲ್ ಅವರನ್ನು ಕೂಡ ಸ್ಪೀಕರ್ ಸದನದ ಸದಸ್ಯತ್ವದಿಂದ ಅನರ್ಹಗೊಳಿಸಿದ್ದರು. 

ಈ  ರಾಜೀನಾಮೆಯೇ ಏಟಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತ್ತು. ತಮ್ಮ ರಾಜೀನಾಮೆಯನ್ನು ಪರಿಗಣಿಸದೇ ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ ಎಂದು 15 ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶಂಕರ್ ಮತ್ತು ಶ್ರೀಮಂತ್ ಪಾಟೀಲ್ ನಮ್ಮನ್ನು ಸ್ಪೀಕರ್ ದುರುದ್ದೇಶದಿಂದ ಅನರ್ಹಗೊಳಿಸಿದ್ದಾರೆ ಎಂದು ಸುಪ್ರೀಂ ಕೋರ್ಟಿನಲ್ಲಿ 9 ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ಬಗ್ಗೆ ಸುಮಾರು 20 ಗಂಟೆಗಳ ಕಾಲ ಸುಪ್ರೀಂ ಕೋರ್ಟಿನ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಅ.25 ರಂದು ತೀರ್ಪು ಕಾದಿರಿಸಿತ್ತು.

ಡಿ.5ಕ್ಕೆ ಈ ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಈಗಾಗಲೇ ಘೋಷಿಸಿದ್ದು ನವೆಂಬರ್ 18 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಇದೀಗ ರಾಜ್ಯದಲ್ಲಿ ನೀತಿ ಸಂಹಿತೆ ಕೂಡ ಜಾರಿಯಲ್ಲಿದೆ. ಸುಪ್ರೀಂ ಕೋರ್ಟ್ ಬುಧವಾರ ನೀಡುವ ತೀರ್ಪು ಈ ಉಪಚುನಾವಣೆ ನಡೆಯಲಿದೆಯೇ ಇಲ್ಲವೇ ಎಂಬುದನ್ನು ಕೂಡ ನಿರ್ಧರಿಸಲಿದೆ.

Follow Us:
Download App:
  • android
  • ios