ಕಂಪನಿ ಕೆಲಸ ಬಿಟ್ಟು, ರಾಜಕೀಯಕ್ಕೆ ಬಂದ ಎಂಬಿಎ ಪದವೀಧರೆ: ಎಎಪಿಯಿಂದ ಸುಮನಾ ಸ್ಪರ್ಧೆ
60 ವರ್ಷಗಳ ಇತಿಹಾಸವಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸಮುಖಗಳಿಗೆ ಶುಕ್ರದೆಸೆ. ಬಿಜೆಪಿ ಸೇರಿದಂತೆ ಬೇರೆ, ಬೇರೆ ಪಕ್ಷಗಳು ಹೊಸಮುಖಗಳಿಗೆ ಮಣೆ ಹಾಕಿವೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದಿರುವ ಆಮ್ ಆದ್ಮಿ ಪಕ್ಷ ಕೂಡ ಇದಕ್ಕೆ ಹೊರತಲ್ಲ.
ದುರ್ಗಾಕುಮಾರ್ ನಾಯರ್‌ಕೆರೆ
ಸುಳ್ಯ (ಏ.24): 60 ವರ್ಷಗಳ ಇತಿಹಾಸವಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸಮುಖಗಳಿಗೆ ಶುಕ್ರದೆಸೆ. ಬಿಜೆಪಿ ಸೇರಿದಂತೆ ಬೇರೆ, ಬೇರೆ ಪಕ್ಷಗಳು ಹೊಸಮುಖಗಳಿಗೆ ಮಣೆ ಹಾಕಿವೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದಿರುವ ಆಮ್ ಆದ್ಮಿ ಪಕ್ಷ ಕೂಡ ಇದಕ್ಕೆ ಹೊರತಲ್ಲ. ಈ ಬಾರಿ, ಆಪ್‌ನ ಅಭ್ಯರ್ಥಿಯಾಗಿ ಎಂಬಿಎ ಪದವೀಧರೆ ಸುಮನಾ ಬೆಳ್ಳಾರ್ಕರ್ ಅವರು ರಾಜಕೀಯ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.
ಮಾಜಿ ಶಾಸಕನ ಪುತ್ರಿ: 5 ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, 2 ಬಾರಿ ಗೆಲುವು ಸಾಧಿಸಿ, ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದ ಕೆ.ಕುಶಲ ಅವರ ಪುತ್ರಿ ಇವರು. ಸುಳ್ಯದ ಚಚ್‌ರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸುಮನಾ, ಬಳಿಕ, ಶಾರದಾ ಹೆಣ್ಣು ಮಕ್ಕಳ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ಪೂರೈಸಿದರು. ಬಳಿಕ, ಕೆವಿಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದರು. ನಂತರ, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಟ್ರಾನ್ಸ್‌ಲೇಟ್ ಇಂಡಸ್ಟ್ರಿಯಲ್ಲಿ ರಿಕ್ರೂಟರ್ ಆಗಿ ಕೆಲಸಕ್ಕೆ ಸೇರಿದರು. ವರ್ಷದ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಧುಮುಕಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮಂಡ್ಯದ ಪ್ರಭು ಅವರನ್ನು ವಿವಾಹವಾಗಿರುವ ಸುಮನಾ ಅವರಿಗೆ ಸುಶಾನ್ ಮತ್ತು ಸುಹಾನ್ ಎಂಬ ಅವಳಿ ಮಕ್ಕಳಿದ್ದಾರೆ.
ಯುವಕನಿಗೆ ಶಾಸಕನ ಕಪಾಳಮೋಕ್ಷ: ಚರ್ಚೆಗೆ ಗ್ರಾಸವಾದ ಘಟನೆ ಬಗ್ಗೆ ಎಂ.ಬಿ.ಪಾಟೀಲ್ ಹೇಳಿದ್ದೇನು?
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿ ಮಾಡುತ್ತಿರುವ ಕ್ರಾಂತಿಯಿಂದ ಪ್ರೇರಿತಗೊಂಡು, ರಾಜಕಾರಣಕ್ಕೆ ಹೊಸ ದಿಕ್ಕು ತೋರಿದ ಆಪ್‌ನ ಧೋರಣೆ ಮೆಚ್ಚಿಕೊಂಡು, ಆ ಪಕ್ಷದಿಂದ ರಾಜಕೀಯ ಸೇರುವ ಯೋಚನೆ ಮಾಡಿದರು. ವಿದ್ಯಾವಂತರು, ಪ್ರಜ್ಞಾವಂತರು ರಾಜಕೀಯಕ್ಕೆ ಬಂದರೆ ಅಭಿವೃದ್ಧಿಗೆ ಅನುಕೂಲ ಎಂಬ ಧೋರಣೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಿ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಸುಳ್ಯ ಮೀಸಲು ಕ್ಷೇತ್ರವಾಗಿರುವುದರಿಂದ ಇಲ್ಲಿ ಸ್ಪರ್ಧಿಸಲು ಸಾಮಾನ್ಯ ಕೆಟಗರಿಯವರಿಗೆ ಅವಕಾಶವಿಲ್ಲ. ಹೀಗಾಗಿ, ಹೆಚ್ಚಿನ ಪೈಪೋಟಿ ಇಲ್ಲ. ಅದೂ ಅಲ್ಲದೆ ಆಪ್ ಕೂಡ ಯೋಗ್ಯ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತ್ತು. ಹೀಗಾಗಿ, ಈ ಕ್ಷೇತ್ರವನ್ನೇ ಸುಮನಾ ಆಯ್ದುಕೊಂಡರು. ಚುನಾವಣೆ ಘೋಷಣೆಗೆ ಸಾಕಷ್ಟುಮುಂಚಿತವಾಗಿಯೇ ಕ್ಷೇತ್ರ ಸುತ್ತತೊಡಗಿದರು. ಪಕ್ಷದ ವತಿಯಿಂದ ಸುಳ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ವಸತಿ ಯೋಜನೆಗಳ ಅಭಿಯಾನದಲ್ಲಿ ಪಾಲ್ಗೊಂಡು, ತನ್ನ ಅನುಭವ ಮತ್ತು ಸೇವಾಕಾಂಕ್ಷೆಯನ್ನು ವಿಸ್ತರಿಸಿಕೊಂಡರು. ಇವರ ಸಾಮಾಜಿಕ ಕಾಳಜಿಯ ಬದ್ಧತೆ ನೋಡಿ, ಪಕ್ಷ ಕೂಡ ಇವರಿಗೆ ಸುಳ್ಯ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿದೆ.
‘ಆಮ್ ಆದ್ಮಿ ಪಾರ್ಟಿಯ ಧೋರಣೆಗಳು ನನಗೆ ಇಷ್ಟವಾದವು. ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಈ ಪಕ್ಷ ಹೊಸ ಕ್ರಾಂತಿಯನ್ನೇ ಮಾಡುತ್ತಿದೆ. ಇದು ಭವಿಷ್ಯದ ಅಭಿವೃದ್ಧಿಗೆ ಪೂರಕವಾಗಲಿದೆ. ಹೀಗಾಗಿಯೇ ಈ ಪಕ್ಷಕ್ಕೆ ಸೇರಿದೆ. ಇಂದು ಭ್ರಷ್ಟಾಚಾರ ಎಂಬುದು ರಾಜಕೀಯ ಪಕ್ಷಗಳಲ್ಲಿ ಹಾಸುಹೊಕ್ಕಾಗಿದೆ. ಆಪ್‌ನಿಂದ ಮಾತ್ರ ರಾಜಕೀಯದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ’ ಎನ್ನುತ್ತಾರೆ ಸುಮನಾ. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.
ಹಾಸನಕ್ಕೆ ಇಂದು ಶಾ ಭೇಟಿ: ನಮಗೆ ದೇವೇಗೌಡ, ಕುಮಾರಣ್ಣನೇ ಸಾಕು, ಇನ್ಯಾರು ಬೇಡ ಎಂದ ಎಚ್.ಡಿ.ರೇವಣ್ಣ
ಆಮ್ ಆದ್ಮಿ ಪಾರ್ಟಿಯ ಧೋರಣೆಗಳು ನನಗೆ ಇಷ್ಟವಾದವು. ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಈ ಪಕ್ಷ ಮಾಡಿರುವ ಕ್ರಾಂತಿ ಭವಿಷ್ಯಕ್ಕೆ ಪೂರಕವಾಗಲಿದೆ. ಇದನ್ನು ಖುದ್ದಾಗಿ ಕಂಡಿದ್ದೇನೆ. ಹೀಗಾಗಿಯೇ ಈ ಪಕ್ಷಕ್ಕೆ ಸೇರಿದೆ.
- ಸುಮನಾ, ಸುಳ್ಯ ಕ್ಷೇತ್ರದ ಆಪ್ ಅಭ್ಯರ್ಥಿ.