ದುಡ್ಡಿಗೋಸ್ಕರ ಕಾರ್ಕಳಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಪ್ರಮೋದ್ ಮುತಾಲಿಕ್
ನಾನು ದುಡ್ಡಿಗೋಸ್ಕರ ಬೆಳಗಾವಿಯಿಂದ ಕಾರ್ಕಳಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಡೋಂಗಿ ಹಿಂದುವಾದ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಂದಿದ್ದೇನೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕಾರ್ಕಳ (ಫೆ.16): ನಾನು ದುಡ್ಡಿಗೋಸ್ಕರ ಬೆಳಗಾವಿಯಿಂದ ಕಾರ್ಕಳಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಡೋಂಗಿ ಹಿಂದುವಾದ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಂದಿದ್ದೇನೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಸಚಿವ ಸುನಿಲ್ ಕುಮಾರ್ ಅವರು ‘ಮುತಾಲಿಕ್ ದುಡ್ಡು ಮಾಡಲು ಬಂದಿದ್ದಾರೆ’ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, ದುಡ್ಡು ಗಳಿಸುವುದೇ ನನ್ನ ಉದ್ದೇಶವಾಗಿದ್ದರೆ ನನಗೆ 45 ವರ್ಷ ಬೇಕಾಗಿರಲಿಲ್ಲ.
ಆದರೆ, ಕಾರ್ಕಳದ 40 ಹಳ್ಳಿಗಳಲ್ಲಿ ಚುನಾವಣಾ ಪ್ರಚಾರಕ್ಕೆ ನಾನೊಬ್ಬನೆ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ. ನನ್ನ ಜೊತೆ ಇರುವ ಕಾರ್ಯಕರ್ತರ ಓಡಾಟ, ಊಟ, ತಿಂಡಿಗೆ ಪ್ರತಿ ಮತದಾರರಿಂದ 100 ರು.ಕೇಳಿದ್ದೇನೆ. ಈ ಮುತಾಲಿಕ್ ಹಣ ಮಾಡುವವನಲ್ಲ. ಸುನಿಲ್ ಕುಮಾರ್‌ಗೆ ಇಂತಹ ಆರೋಪ ಶೋಭೆ ತರುವುದಿಲ್ಲ. ಅವರು ಆತಂಕದಿಂದ, ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ ಎಂದರು.
ರೈತರ ಸಂಕಷ್ಟಅರಿಯದ ರಾಯರಡ್ಡಿ: ಸಚಿವ ಹಾಲಪ್ಪ ಆಚಾರ್
ನಕಲಿ ಹಿಂದುತ್ವ- ಅಸಲಿ ಹಿಂದುತ್ವ ನಡುವಿನ ಸ್ಪರ್ಧೆ: ಕಾರ್ಕಳದಲ್ಲಿ ಬಿಜೆಪಿಯ ಸುನಿಲ್ ಕುಮಾರ್ ವಿರುದ್ಧ ಸ್ಪರ್ಧಿಸಲು ನನಗೆ ಬಿಜೆಪಿಯವರೇ ಸಹಕಾರ ನೀಡುವುದಾಗಿ ಹೇಳಿದ್ದಾರೆ. ತನು, ಮನ, ಧನ ಸಹಕಾರದ ಭರವಸೆ ನೀಡಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುನಿಲ್ ಕುಮಾರ್ ಮುಂದಿನ ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಸಿಎಂ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಉದ್ದ ಇದೆ.
ಹಾಗಾಗಿ ರಾಜ್ಯದೆಲ್ಲೆಡೆಯಿಂದ ಬಿಜೆಪಿ ನಾಯಕರೇ ನನ್ನ ಸ್ಪರ್ಧೆಗೆ ಬೆಂಬಲ ನೀಡುತ್ತಿದ್ದಾರೆ ಎಂದರು. ಗಡೀಪಾರು ಮಾಡಿದ್ರೂ ಗೆಲ್ತೇನೆ: ನನ್ನ ಮೇಲಿರುವ 109 ಪ್ರಕರಣಗಳಲ್ಲಿ ಹೆಚ್ಚಿನ ಕೇಸ್ ಹಾಕಿದ್ದು ಬಿಜೆಪಿಯವರೇ. ಗಡಿಪಾರು ಮಾಡಿದ್ದು ಕೂಡ ಬಿಜೆಪಿಯವರೇ ಹೆಚ್ಚು. ಹಿಂದೂ ನಾಯಕರಿಗೆ ಹೆಚ್ಚು ತೊಂದರೆ ನೀಡಿದ್ದು ನಮ್ಮವರೇ. ಈ ಬಾರಿ ಏನಾದರೂ ಕಾರ್ಕಳದಿಂದ ನನ್ನನ್ನು ಗಡೀಪಾರು ಮಾಡಿದರೆ ಕೋರ್ಟಿಗೆ ಹೋಗಲ್ಲ. ಬದಲಾಗಿ ಕ್ಷೇತ್ರದಿಂದ ಹೊರಗಡೆಯೇ ಇದ್ದು ಗೆದ್ದು ತೋರಿಸುತ್ತೇನೆ ಎಂದು ಮುತಾಲಿಕ್ ಸವಾಲು ಹಾಕಿದರು.
ಬಜೆಟ್ ಬೇಡಿಕೆಗಳು: ಮುಂಬರುವ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವೇದ ಪಾಠಶಾಲೆ ಆರಂಭಿಸಬೇಕು. ಎಲ್ಲ ಅರ್ಚಕರಿಗೆ ಸೂಕ್ತ ಸಂಬಳ, ವಿಮೆ, ಭದ್ರತೆ, ಉಚಿತ ಶಿಕ್ಷಣ- ಚಿಕಿತ್ಸೆ, ಮಾಸಾಶನ ಇತ್ಯಾದಿ ಸೌಲಭ್ಯ ಒದಗಿಸಬೇಕು. ಹೋಬಳಿ ಮಟ್ಟದಲ್ಲಿ ಗೋಶಾಲೆ ನಿರ್ಮಾಣವಾಗಬೇಕು. ಕರಾವಳಿ ಭಾಗದ ಹಿಂದು ಸಂಸ್ಕೃತಿ, ಸಂಪ್ರದಾಯ, ಜಾನಪದ ಕಲೆಗಳಾದ ಯಕ್ಷಗಾನ, ಭಜನಾ ಮಂಡಳಿ, ಗೊಂಬೆಯಾಟ, ಕಂಬಳ ಇತ್ಯಾದಿಗಳ ಉಳಿವಿಗೆ ಅನುದಾನ ಮೀಸಲಿಡಬೇಕು.
ಕಾಂಗ್ರೆಸ್ಸಿನದು ಟಿಪ್ಪು ಸಂತಾನ: ನಳಿನ್‌ಕುಮಾರ್ ಕಟೀಲ್ ವಾಗ್ದಾಳಿ
ನಾಗಾರಾಧನೆ, ಭೂತಾರಾಧನೆ ಸೇವೆಯಲ್ಲಿರುವ ಕೋಲ ನರ್ತಕರು, ಗೊಂದಲು ನರ್ತಕರು, ಕೋಲ ಕಟ್ಟುವವರು, ವಾದ್ಯದವರು, ಮಧು ಹೇಳುವವರು, ಹುಲಿ ವೇಷಧಾರಿಗಳು, ಮರಾಠಿ ಮತ್ತು ಕುಡುಬಿ ಜನಾಂಗದ ಸಾಂಪ್ರದಾಯಿಕ, ಹೋಳಿ ಆಚರಣೆ ಮಾಡುವವರಿಗೆ ಮಾಸಾಶನ, ವಿಮೆ, ಉಚಿತ ಚಿಕಿತ್ಸೆ, ಮನೆ ಕಟ್ಟಲು ಶೂನ್ಯ ಬಡ್ಡಿದರದ ಸಾಲ ಒದಗಿಸಬೇಕು. ರಾಜ್ಯದ ಎಲ್ಲ ನಾಟಕ ಕಂಪೆನಿ, ಬಯಲಾಟ, ಸ್ವದೇಶಿ ಆಟಗಳಿಗೆ ಪ್ರೋತ್ಸಾಹಧನ, ಸರ್ಕಾರದ ಮಾನ್ಯತೆ, ಉಚಿತ ಶಿಕ್ಷಣ- ಉಚಿತ ಚಿಕಿತ್ಸೆ ಘೋಷಣೆ ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.