ದಾವಣಗೆರೆ, (ನ.21): ಮುಖ್ಯಮಂತ್ರಿ ಕುರ್ಚಿ ಗಟ್ಟಿಯಾಗಿ ಉಳಿಯಬೇಕೆಂದರೆ ಸಿಎಂ ಬಿ.ಎಸ್. ಯಡಿಯೂರಪ್ಪ ಈ ಬಾರಿಯಾದರೂ ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಆಗಮಿಸಬೇಕು ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಪೀಠ ಮುಕ್ತಿಗಾಗಿ ನಡೆಸಿದ ಆರಂಭಿಕ ಹೋರಾಟದಲ್ಲಿ ಬಿ.ಎಸ್. ಯಡಿಯೂರಪ್ಪ ಅವರೂ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಅವರು ತಾವು ಮುಖ್ಯಮಂತ್ರಿಯಾದರೆ ದತ್ತಪೀಠಕ್ಕೆ ಮಾಲೆ ಹಾಕಿಕೊಂಡು ಬರುವುದಾಗಿ ಪ್ರಮಾಣ ಮಾಡಿದ್ದರು. ಆದರೆ, ಅವರು 3 ಬಾರಿ ಮುಖ್ಯಮಂತ್ರಿಯಾದರೂ ಈ ಪ್ರಮಾಣ ಪಾಲನೆ ಮಾಡಿಲ್ಲ. ಈ ಕಾರಣದಿಂದಾಗಿಯೇ ಅವರು ಒಮ್ಮೆಯೂ ಪೂರ್ಣಾವಧಿ ಮುಖ್ಯಮಂತ್ರಿಯಾಗಿಲ್ಲ ಎಂದು ತಿಳಿಸಿದರು.

ದತ್ತಪೀಠ ವಿವಾದ ಕೋರ್ಟ್ ಹೊರಗೇ ಬಗೆಹರಿಸಿಕೊಳ್ಳಿ

 ಈ ಬಾರಿಯಾದರೂ ಅವರು ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುವ ಆದೇಶದೊಂದಿಗೆ ಬರಬೇಕು. ಆಗಲಾದರೂ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಕುರ್ಚಿಗೆ ತಗುಲಿದ ಪಾಪ ತೊಳೆಯಲು ಸಾಧ್ಯವಾಗಬಹುದು ಎಂದರು.

ದತ್ತಪೀಠ ಹಿಂದುಳಿಗಳಿಗೆ ಸೇರಿದ್ದು ಎಂಬುದಕ್ಕೆ ಎಲ್ಲ ದಾಖಲೆಗಳೂ ಇವೆ. ದಾಖಲೆಗಳೆಲ್ಲವೂ ಸ್ಪಷ್ಟವಾಗಿಯೂ ಇವೆ. ಆದರೂ ಈ ವಿವಾದವನ್ನು ಜೀವಂತವಾಗಿರುವಂತೆ ನೋಡಿಕೊಳ್ಳುತ್ತಿರುವುದು ಸರಿಯಲ್ಲ. ದತ್ತಪೀಠವನ್ನು ಹಿಂದುಳಿಗಳಿಗೆ ವಹಿಸಿಕೊಡಲು ಯಡಿಯೂರಪ್ಪ ಅವರಿಗೆ ಒಳ್ಳೆಯ ಅವಕಾಶವಿದೆ. ಈಗಲೂ ಅವರು ದತ್ತಪೀಠ ಮುಕ್ತಿಗೊಳಿಸುವ ಕೆಲಸ ಮಾಡದಿದ್ದರೆ ಚಳಿಗಾಲದ ಅಧಿವೇಶನ ಮುಗಿದು ಮುಂದಿನ ಅಧಿವೇಶನದ ವೇಳೆಗೆ ರಾಜ್ಯಾದ್ಯಂತ ದೊಡ್ಡ ಹೋರಾಟ ಮಾಡಲಾಗುವುದು. ಈ ಹೋರಾಟದಲ್ಲಿ ಏನೇ ಅವಘಡಗಳಾದರೂ ಅದಕ್ಕೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಚಿವ ಸಿ.ಟಿ. ರವಿಯವರು ಸಹ ದತ್ತಮಾಲೆ ಧರಿಸಿದ ವೇಳೆಯೇ ತಮ್ಮ ಸರಕಾರ ಬಂದ 24ಗಂಟೆಗಳಲ್ಲಿ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಲಾಗುವುದು ಎಂದು ಹೇಳಿದ್ದರು. ಆದರೆ, ಈವರೆಗೂ ಆ ಕೆಲಸ ಮಾಡಿಸಲು ಆಗಿಲ್ಲ. ಅವರು ಧರ್ಮದ ಜತೆ ಅವರು ಆಟ ಆಡುತ್ತಿದ್ದಾರೆ. ಅವರಿಗೆ ತಮ್ಮ ನಾಲಿಗೆ ಮೇಲೆ ಸ್ವಾಭಿಮಾನವಿದ್ದರೆ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಮಾಜ ಅವರನ್ನು ಕ್ಷಮಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.