ಗೆದ್ದ ಶಾಸಕರಿಗೆ ಶೀಘ್ರ ಮಂತ್ರಿಗಿರಿ : ಈ ತಿಂಗಳೇ ಅಧಿಕಾರ ಸ್ವೀಕಾರ
ರಾಜ್ಯದಲ್ಲಿ ಕಳೆದ ತಿಂಗಳು ನಡೆದ ಉಪಚುನಾವಣೆಯಲ್ಲಿ ಗೆದ್ದ ಎಲ್ಲಾ ಶಾಸಕರು ಸಚಿವರಾಗಲಿದ್ದು, ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ [ಜ.02]: ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಕಾರಣರಾದ, ಉಪಚುನಾವಣೆಯಲ್ಲಿ ಗೆದ್ದ ಎಲ್ಲಾ ಶಾಸಕರು ಸಚಿವರಾಗಲಿದ್ದು, ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ತಾಲೂಕಿನ ಭೋಗನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಮೊದಲೇ ಸಚಿವ ಸ್ಥಾನ ನಿಗದಿಯಾಗಿದ್ದು, ಇದೇ ತಿಂಗಳಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನೂತನ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಯಾವುದೇ ಗೊಂದಲವಿಲ್ಲ. ಇನ್ನೂ ವಿಳಂಬವಾಗುವುದಿಲ್ಲ. ಶೀಘ್ರವೇ ಸಚಿವರಾಗಿ ಜನತೆಯ ಸೇವೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅಂ.ರಾ. ಮಾರುಕಟ್ಟೆಯಂತೆ ಎಲ್‌ಪಿಜಿ ಬೆಲೆಯೇರಿಕೆ:
ಕೇಂದ್ರ ಸರ್ಕಾರ ಎಲ್‌ಪಿಜಿ ಗ್ಯಾಸ್ ಏರಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಂತೆ ಬೆಲೆ ನಿಗದಿಯಾಗಿದೆ. ದೇಶದ ಅಭಿವೃದ್ಧಿಗೆ, ಬದಲಾಗುತ್ತಿರುವ ಕಾಲಮಾನಕ್ಕೆ ಬೆಲೆ ಏರಿಕೆ ಸ್ವೀಕರಿಸಬೇಕಾಗಿದೆ. ಬೆಲೆ ಏರಿಕೆ ವಿರೋಧಿ ನೀತಿ ಸರಿಯಲ್ಲ ಎಂದಿದ್ದಾರೆ.
ಡಿಸಿಎಂಗೆ ಡೆಡ್‍ಲೈನ್: ಲಕ್ಷ್ಮಣ ಸವದಿಗೆ ಶುರುವಾಯ್ತು ಅವಧಿ ಸಂಕಟ...
ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯಕ್ಕೆ ಬುಧವಾರ ಕುಟುಂಬ ಸಮೇತ ಭೇಟಿ ನೀಡಿದ್ದ ಅಶ್ವತ್ ನಾರಾಯಣ್ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಭೋಗನಂದಿಶ್ವರ ದೇಗುಲದ ಅರ್ಚಕರಿಂದ ವಾಸ್ತುಶಿಲ್ಪದ ಮಾಹಿತಿ ಪಡೆದು, ಕಲ್ಯಾಣಿ ವೀಕ್ಷಿಸಿದರು. ಅಧಿಕಾರಿಗಳಿಂದ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿ ಪಡೆದರು.