ಕೆಲವು ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನವೊಂದು ಇದೀಗ ಭುಗಿಲೆದ್ದಿದೆ. ಇಂತಹ ಅತೃಪ್ತರು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವೊಂದನ್ನು ರವಾನೆ ಮಾಡಿದ್ದು, ಚಳಿಗಾಲದ ಅಧಿವೇಶನದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. 

ಬೆಂಗ​ಳೂರು : ಸಚಿವ ಸಂಪುಟ ವಿಸ್ತ​ರಣೆ ವಿಳಂಬ, ಕ್ಷೇತ್ರ​ಗ​ಳಿಗೆ ಅನು​ದಾ​ನ​ ನೀಡಿ​ಕೆ​ಯಲ್ಲಿ ತಾರ​ತಮ್ಯ ಹಾಗೂ ರಾಜ್ಯ ನಾಯ​ಕ​ತ್ವವು ತಮ್ಮ ಬೇಡಿ​ಕೆ​ಗಳ ಬಗ್ಗೆ ತೋರು​ತ್ತಿ​ರುವ ಅಸೀಮ ನಿರ್ಲಕ್ಷ್ಯದಿಂದ ಬೇಸತ್ತಿರುವ ಕಾಂಗ್ರೆ​ಸ್‌ನ ಕೆಲ ಶಾಸ​ಕರು ಬೆಳ​ಗಾ​ವಿ ವಿಧಾ​ನ​ಮಂಡಲ ಅಧಿ​ವೇ​ಶ​ನ​ದಿಂದ ದೂರ​ವು​ಳಿ​ಯುವ ಮೂಲಕ ಸಮ್ಮಿಶ್ರ ಸರ್ಕಾ​ರಕ್ಕೆ ಎಚ್ಚ​ರಿ​ಕೆಯ ಸಂದೇ​ಶ​ವನ್ನು ರವಾ​ನಿ​ಸುವ ಪ್ರಯ​ತ್ನಕ್ಕೆ ಮುಂದಾ ​ಗಿ​ದ್ದಾ​ರೆ.

ಉಪ ಚುನಾ​ವಣೆ ನಂತರ ಸಂಪುಟ ವಿಸ್ತ​ರಣೆ ಮಾಡು​ವು​ದಾಗಿ ನೀಡಿದ್ದ ಭರ​ವ​ಸೆ ಇದೀಗ ಹುಸಿ ಹೋಗಿದೆ. ಬೆಳ​ಗಾವಿ ಅಧಿ​ವೇ​ಶ​ನ ಪೂರ್ಣ​ಗೊ​ಳ್ಳು​ವ​ವ​ರೆಗೂ ವಿಸ್ತ​ರಣೆ ಸಾಧ್ಯತೆ ಕಡಿಮೆ ಎಂಬ ಸೂಚನೆ ದೊರ​ಕಿ​ರುವ ಹಿನ್ನೆ​ಲೆ​ಯಲ್ಲಿ ಕೆಲ ಶಾಸ​ಕರು ಅಸ​ಮಾ​ಧಾ​ನ​ಗೊಂಡಿದ್ದು, ಬೆಳ​ಗಾವಿ ಅಧಿ​ವೇ​ಶ​ನ​ದಲ್ಲಿ ಪಾಲ್ಗೊ​ಳ್ಳು​ವು​ದಿಲ್ಲ ಎಂಬ ಸಂದೇಶ ರವಾ​ನಿ​ಸಲು ಮುಂದಾ​ಗಿ​ದ್ದಾ​ರೆ.

‘ಸಮ್ಮಿಶ್ರ ಸರ್ಕಾ​ರದ ನೆಪ​ದಲ್ಲಿ ಕಾಂಗ್ರೆಸ್‌ ಪಕ್ಷ ಕೆಲವೇ ವ್ಯಕ್ತಿ​ಗಳ ಹಿಡಿ​ತಕ್ಕೆ ಸಿಲು​ಕಿದೆ. ಪಕ್ಷ​ಕ್ಕಾಗಿ ದುಡಿದ ಹಾಗೂ ಪಕ್ಷದ ಕಟ್ಟಿದ ಹಿರಿಯ ಶಾಸ​ಕ​ರನ್ನು ನಿರ್ಲ​ಕ್ಷಿ​ಸ​ಲಾ​ಗು​ತ್ತಿದೆ. ನಾವು ಎಷ್ಟೇ ಪಕ್ಷ ನಿಷ್ಠರು ಎಂದರೂ ಇಂತಹ ಪರಿ​ಸ್ಥಿ​ತಿ​ಯಲ್ಲಿ ಬೇರೆಯೇ ಭಾವ​ನೆ​ಗಳು ಬರು​ವುದು ಸಹಜ. ಇದಕ್ಕೆ ಆಸ್ಪದ ಮಾಡ​ದಂತೆ ನಡೆ​ದು​ಕೊ​ಳ್ಳ​ಬೇ​ಕಿ​ರು​ವುದು ಹಿರಿಯ ನಾಯಕ ಹೊಣೆ’ ಎಂದು ಹೆಸರು ಹೇಳ​ಬ​ಯ​ಸದ ಹಿರಿಯ ಶಾಸ​ಕ​ರೊ​ಬ್ಬರು ಕನ್ನ​ಡ​ಪ್ರ​ಭಕ್ಕೆ ತಿಳಿ​ಸಿ​ದ​ರು.

‘ಇನ್ನು ಯುವ ಶಾಸ​ಕ​ರಿಗೆ ತಮ್ಮ ಕ್ಷೇತ್ರಕ್ಕೆ ಸಮ​ರ್ಪ​ಕ​ವಾಗಿ ಅನು​ದಾನ ದೊರೆ​ಯು​ತ್ತಿಲ್ಲ ಎಂಬ ಅಸ​ಮಾ​ಧಾನ ತೀವ್ರ​ವಾ​ಗಿದೆ. ಸಮ್ಮಿಶ್ರ ಸರ್ಕಾ​ರ​ದಲ್ಲಿ ಕಾಂಗ್ರೆಸ್‌ ಶಾಸ​ಕ​ರನ್ನು ಕಡೆ​ಗ​ಣಿ​ಸ​ಲಾ​ಗು​ತ್ತಿದೆ. ಅಷ್ಟೇ ಅಲ್ಲ, ಕಾಂಗ್ರೆಸ್‌ ಶಾಸ​ಕರು ಇರುವ ಕ್ಷೇತ್ರ​ಗ​ಳಲ್ಲಿ ಜೆಡಿ​ಎ​ಸ್‌ನ ನಾಯ​ಕರ ಮಾತಿಗೆ ಹೆಚ್ಚು ಮನ್ನಣೆ ದೊರೆ​ಯು​ತ್ತಿದೆ. ಈ ಬಗ್ಗೆ ಸತ​ತ​ವಾಗಿ ದೂರಿ​ದರೂ ರಾಜ್ಯ ನಾಯ​ಕರು ಕ್ಯಾರೆ ಎನ್ನು​ತ್ತಿಲ್ಲ’ ಎಂಬ ತೀವ್ರ ಅಸ​ಮಾ​ಧಾ​ನ​ವಿದೆ.

ಈ ಹಿನ್ನೆ​ಲೆ​ಯಲ್ಲಿ ರಾಜ್ಯ ನಾಯ​ಕ​ತ್ವಕ್ಕೆ ಸ್ಪಷ್ಟಸಂದೇ​ಶ​ವೊಂದನ್ನು ನೀಡ​ಬೇಕು ಎಂದು ನಿರ್ಧ​ರಿ​ಸಿ​ರುವ ಕಾಂಗ್ರೆಸ್‌ ಶಾಸ​ಕರ ಗುಂಪೊಂದು ಬೆಳ​ಗಾವಿ ಅಧಿ​ವೇ​ಶ​ನ​ದಿಂದ ದೂರ​ವು​ಳಿ​ಯುವ ಚಿಂತನೆ ಹೊಂದಿ​ದ್ದಾರೆ ಎನ್ನ​ಲಾ​ಗು​ತ್ತಿದೆ.