ಬೈ ಎಲೆಕ್ಷನ್ ಗೆಲ್ಲೋದು ಸಿಎಂಗೇಕೆ ಅನಿವಾರ್ಯ? ಸಿದ್ದು, ಬಿಎಸ್‌ವೈಗೆ ಚುನಾವಣೆಯಿಂದ ಏನು ಬೇಕಿದೆ?
ಹಾನಗಲ್ ಗೆದ್ದರೆ ಬೆಂಗಳೂರು ಮತ್ತು ದಿಲ್ಲಿಯಲ್ಲಿ ಬೊಮ್ಮಾಯಿ ಮಾತಿಗೆ ವಜನ್ ಬರುತ್ತದೆ, ಒಂದು ವೇಳೆ ಸೋತರೆ ಬೊಮ್ಮಾಯಿ ತೂಕ ಕಡಿಮೆಯಾಗುತ್ತದೆ. ಸದಾನಂದಗೌಡರಿಗೆ ಆದ ಫಜೀತಿ ತಮಗೆ ಆಗಬಾರದು ಎಂದು ಬೊಮ್ಮಾಯಿ ತುಂಬಾ ಜೋರಾಗಿಯೇ ಪ್ರಯತ್ನ ಹಾಕುತ್ತಿದ್ದಾರೆ.
ಒಬ್ಬ ರಾಜನಿಗೆ ಎಷ್ಟುಮಿತ್ರರು ಇದ್ದರೇನು, ರಾಜನ ವಾಣಿಯಲ್ಲಿ ಎಷ್ಟುಸವಿ ಇದ್ದರೇನು, ರಾಜನ ಸಾಮರ್ಥ್ಯ ಪರೀಕ್ಷೆ ಆಗುವುದು ಯುದ್ಧಗಳಲ್ಲಿ ಆತ ತೋರಿಸುವ ಬಾಹುಬಲದ ಪರಾಕ್ರಮ ಮತ್ತು ಗೆಲ್ಲಿಸಲು ಬೇಕಾದ ನಾಯಕತ್ವದ ಗುಣಗಳಿಂದ ಅಷ್ಟೆ. ಉಳಿದದ್ದೆಲ್ಲವೂ ಹೆಚ್ಚುವರಿ ಗುಣವಿಶೇಷಣಗಳು. ಅದರಲ್ಲೂ ಸ್ವಂತ ಊರಿನ ಕೋಟೆ ಗೆದ್ದುಕೊಂಡು ಬರಲು ಹೋದಾಗ ವಿಜಯ ಅನಿವಾರ್ಯ.
ಈ ತಿಂಗಳ ಅಂತ್ಯಕ್ಕೆ 90 ದಿನಗಳ ಆಳ್ವಿಕೆ ಪೂರೈಸಲಿರುವ ಬೊಮ್ಮಾಯಿ ಸಾಹೇಬರಿಗೆ ಈಗ ಹಾನಗಲ…ನ ಟೆನ್ಷನ್ ಅಂತೂ ಶುರುವಾಗಿದೆ. ತವರು ಜಿಲ್ಲೆಯ ಕ್ಷೇತ್ರವಾದರೂ ಬಿಜೆಪಿ 100 ಪ್ರತಿಶತ ಗೆದ್ದೇ ಗೆಲ್ಲುತ್ತದೆ ಎಂಬ ವರದಿಗಳು ಮಾಧ್ಯಮ ಬೇಹುಗಾರಿಕೆ ಮತ್ತು ಪಕ್ಷದ ವಲಯಗಳಿಂದ ಬರದೇ ಇರುವುದು ಮುಖ್ಯಮಂತ್ರಿಗಳ ಚಿಂತೆ ಹೆಚ್ಚಲು ಮೂಲ ಕಾರಣ. ಹೀಗಾಗಿ ತಾವೇ ಸ್ವತಃ ಹಿರಿಯ ಕ್ಯಾಬಿನೆಟ್ ಮಂತ್ರಿಗಳನ್ನು ಒಬ್ಬೊಬ್ಬರನ್ನೇ ಕರೆದು ಹಾನಗಲ…ಗೆ ಕಳುಹಿಸುತ್ತಿರುವ ಬೊಮ್ಮಾಯಿ, ಈಗ ಹಾನಗಲ್ ಗೆದ್ದರೆ ಮಾತ್ರ 2023ಕ್ಕೆ ನನ್ನ ನಾಯಕತ್ವಕ್ಕೆ ತಾಕತ್ತು ಬರುತ್ತದೆ.
ನೀವು 27ರ ಸಂಜೆವರೆಗೆ ಅಲ್ಲಿಂದ ಕದಲಬೇಡಿ, ಒಂದೊಂದು ಹೋಬಳಿಗೆ ಹೋಗಿ ಕುಳಿತುಕೊಳ್ಳಿ ಎಂದು ಹೇಳಿ ಕಳುಹಿಸುತ್ತಿದ್ದಾರಂತೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಮಾಡಿಸಿರುವ ಸರ್ವೇಗಳ ಪ್ರಕಾರ ಹಾನಗಲ್‌ನಲ್ಲಿ ಯಾರೇ ಗೆದ್ದರೂ 3ರಿಂದ 4 ಸಾವಿರದ ಅಂತರ ಇರಲಿದೆ ಅಷ್ಟೆ. ಹೀಗಾಗಿ ಮುಖ್ಯಮಂತ್ರಿಗಳು ತಮ್ಮೆಲ್ಲಾ ಶಕ್ತಿಯನ್ನು ಸ್ವಂತ ಜಿಲ್ಲೆಯಲ್ಲಿ ಹಾಕುತ್ತಿದ್ದಾರೆ. ಒಟ್ಟಾರೆ ಹಾನಗಲ್ ಗೆದ್ದರೆ ಬೆಂಗಳೂರು ಮತ್ತು ದಿಲ್ಲಿಯಲ್ಲಿ ಬೊಮ್ಮಾಯಿ ಮಾತಿಗೆ ವಜನ್ ಬರುತ್ತದೆ; ಒಂದು ವೇಳೆ ಸೋತರೆ ಬೊಮ್ಮಾಯಿ ತೂಕ ಕಡಿಮೆಯಾಗುತ್ತದೆ. ಸದಾನಂದಗೌಡರಿಗೆ ಆದ ಫಜೀತಿ ತಮಗೆ ಆಗಬಾರದು ಎಂದು ಬೊಮ್ಮಾಯಿ ತುಂಬಾ ಜೋರಾಗಿಯೇ ಪ್ರಯತ್ನ ಹಾಕುತ್ತಿದ್ದಾರೆ. ಹಾನಗಲ…ನಲ್ಲಿ ಪಣಕ್ಕೆ ಬೊಮ್ಮಾಯಿ ಭವಿಷ್ಯವೂ ಇದೆ ನೋಡಿ.
ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ? ಹೀಗಿದೆ ನೋಡಿ ಕಾಂಗ್ರೆಸ್ ಲೆಕ್ಕಾಚಾರ!
ಸದಾನಂದಗೌಡ ಮಾಡಿದ ತಪ್ಪು
2011ರಲ್ಲಿ ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನ ಸದಾನಂದಗೌಡರಿಗೆ ಸಿಕ್ಕಿದ್ದು ಆರ್‌ಎಸ್‌ಎಸ್ ಮತ್ತು ಯಡಿಯೂರಪ್ಪನವರ ಕೃಪಾ ಕಟಾಕ್ಷ ದಿಂದ. ನಂತರ ಸದಾನಂದಗೌಡರು ಉಡುಪಿ-ಚಿಕ್ಕಮಗಳೂರು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಈಗಿನ ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ಟಿಕೆಟ್ ಕೊಡಿಸಿದರು.
ಎಷ್ಟಂದರೂ ಸಂಘದ ಜಿಲ್ಲೆ, ಹಾಗೆ ಹೀಗೆ ಎಂದು ಉಪ ಚುನಾವಣೆ ಬಗ್ಗೆ ಸದಾನಂದಗೌಡ ತಲೆಕೆಡಿಸಿಕೊಳ್ಳಲಿಲ್ಲ. ತಮ್ಮನ್ನು ಕುರ್ಚಿಯಿಂದ ಕೆಳಗಿಳಿಸಿದ್ದಕ್ಕಾಗಿ ಯಡಿಯೂರಪ್ಪ ಕೂಡ ತುಂಬಾ ಮುತುವರ್ಜಿಯೇನೂ ತೋರಲಿಲ್ಲ. ಪರಿಣಾಮ- ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಬಿಜೆಪಿ ಸೋತಿತು. ಅಲ್ಲಿಯವರೆಗೆ ಹಸನ್ಮುಖಿ ಸ್ಮೈಲ್ ಗೌಡ ಎಂದು ಹೊಗಳಿಸಿಕೊಳ್ಳುತ್ತಿದ್ದ ಸದಾನಂದರ ವಿರುದ್ಧ ಅವತ್ತೇ ಶಾಸಕರ ಟೀಕೆ ಟಿಪ್ಪಣಿ ಆರಂಭ ಆದವು. ಈಗ 80 ದಿನಗಳಲ್ಲಿ ಬೊಮ್ಮಾಯಿ ಅವರಿಗೆ ಒಳ್ಳೆ ಹೆಸರು ಬರುತ್ತಿದೆ. ಆದರೆ ಇದಕ್ಕೆಲ್ಲ ಅರ್ಥ ಬರುವುದು ಚುನಾವಣೆ ಗೆದ್ದಾಗ ಮಾತ್ರ.
ಕುರುಡು ಕಾಂಚಾಣ ಕುಣಿಯುತಲಿದೆ
ಚುನಾವಣೆ ಪ್ರತಿಷ್ಠೆ ಎಂದರೆ ಕೇಳಬೇಕೆ? ಈಗೀಗ ಅಂತೂ ಉಪಚುನಾವಣೆಗಳಲ್ಲಿ ದುಡ್ಡು ನೀರಿನಂತೆ ಹರಿಯುತ್ತದೆ. ಹಾನಗಲ್ ಮತ್ತು ಸಿಂದಗಿಗಳಲ್ಲಿ ರಾಜಕೀಯ ಪಕ್ಷಗಳ ಮೂಲಗಳು ಹೇಳುವ ಪ್ರಕಾರ, ಒಂದೊಂದು ಕ್ಷೇತ್ರಕ್ಕೆ ತಲಾ 25ರಿಂದ 30 ಕೋಟಿ ‘ಬಂಡವಾಳ’ ಹೂಡಲಾಗುತ್ತಿದೆ. ಬಿಎಸ್‌ವೈ ನಾಯಕತ್ವ ಬದಲಾಗಿ ಬೊಮ್ಮಾಯಿ ಕೈಗೆ ಅಧಿಕಾರ ಬಂದಿರುವುದರಿಂದ ಬಿಜೆಪಿಗೆ ಸವಾಲು ಇದೆ. ಆದರೆ ಯಡಿಯೂರಪ್ಪರನ್ನು ಕೆಳಗೆ ಇಳಿಸಿರುವಾಗ ಈಗ ಗೆದ್ದರೆ 2023ರ ಚುನಾವಣೆಗೆ ಮೂಡ್ ಸೆಟ್ ಮಾಡಬಹುದು ಎಂದು ಕಾಂಗ್ರೆಸ್‌ಗೂ ಅವಕಾಶ ಇದೆ. ರಾಜಕೀಯ ಪಕ್ಷಗಳು ಹಣ ಖರ್ಚು ಮಾಡುತ್ತಿರುವ ಪರಿ ನೋಡಿ ಸ್ಥಳೀಯ ನಾಯಕರು ಹೌಹಾರಿದ್ದಾರೆ. ಸ್ವತಃ ಒಬ್ಬರು ಸಂಸದರು ರಾಜ್ಯ ಮಟ್ಟದ ನಾಯಕರೊಬ್ಬರ ಬಳಿ ಈಗ ಹೀಗೆಲ್ಲ ಖರ್ಚು ಮಾಡೋದು ಅಭ್ಯಾಸ ಮಾಡಿಸಿದರೆ ನಾವು ಮುಂದೆ ಚುನಾವಣೆ ಮಾಡೋದು ಕಷ್ಟಆಗುತ್ತದೆ ಅಂದೇಬಿಟ್ಟರಂತೆ. ಕುರುಡು ಕಾಂಚಾಣ ಕುಣಿಯುತ್ತಲಿದೆ. ಜೇಬನ್ನು ತುಂಬಿಸಿ ಸೆಳೆಯುತ್ತಲಿದೆ.
ಯಡಿಯೂರಪ್ಪ ಮೌನವಾಗಿದ್ದಾರಾ?
ಉಪ ಚುನಾವಣೆ ಪ್ರಚಾರಕ್ಕೆ ಯಡಿಯೂರಪ್ಪ ಹೋಗುತ್ತಿದ್ದಾರೆ. ಆದರೂ ಅವರ ಮೌನ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯಗೆ ನೇರ ಸವಾಲು ಹಾಕುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ಮುಂದಿನ ರಾಜಕಾರಣ ಬೊಮ್ಮಾಯಿ ವರ್ಸಸ್ ಸಿದ್ದರಾಮಯ್ಯ ರೀತಿ ನಡೆಯಲಿ ಎಂದು ಪ್ರಯತ್ನಪಡುತ್ತಿದ್ದಾರೆ. ಯಡಿಯೂರಪ್ಪ ಅದನ್ನೆಲ್ಲ ಮೌನವಾಗಿ ನೋಡುತ್ತಿದ್ದಾರಾ? ಎರಡು ಉಪ ಚುನಾವಣೆಗಳಲ್ಲಿ ಬಿಜೆಪಿ ಗೆದ್ದರೆ ಪಕ್ಷಕ್ಕೆ ಲಾಭವೇ ಹೊರತು ಯಡಿಯೂರಪ್ಪ ಅವರಿಗೆ ವೈಯಕ್ತಿಕ ಪ್ರಯೋಜನವೇನೂ ಇಲ್ಲ.
ಯಡಿಯೂರಪ್ಪನವರ ಸಾಮರ್ಥ್ಯ ಇರುವುದೇ ಕರ್ನಾಟಕ ಬಿಜೆಪಿಯಲ್ಲಿ ಅವರಿಗೆ ಇರುವ ಅನಿವಾರ್ಯತೆಯಿಂದಾಗಿ. ಒಂದು ವೇಳೆ ಬೊಮ್ಮಾಯಿ ಎರಡೂ ಯುದ್ಧ ಗೆದ್ದುಬಿಟ್ಟರೆ ಯಡಿಯೂರಪ್ಪನವರ ಮಹತ್ವ ಕಡಿಮೆ ಆಗಬಹುದು ಎಂಬ ಆತಂಕ ಬಿಎಸ್‌ವೈ ಬೆಂಬಲಿಗರಲ್ಲಿದೆ. ಇವತ್ತಲ್ಲಾ ನಾಳೆ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರ ರಾಜಕೀಯ ಹಾದಿ ಕವಲು ಒಡೆಯಲೇ ಬೇಕು. ಅದು ಯಾವಾಗ ಎಂಬುದು ಕರ್ನಾಟಕ ರಾಜಕೀಯದ ಅತ್ಯಂತ ಕುತೂಹಲದ ಪ್ರಶ್ನೆ.
ಹಿಂಗಿದ್ರು ನೋಡ್ರಿ ಉದಾಸಿ!
ದಿವಂಗತ ಸಿ.ಎಂ.ಉದಾಸಿ ಅವರು ರಾಮಕೃಷ್ಣ ಹೆಗಡೆ, ದೇವೇಗೌಡ, ಸೀನಿಯರ್ ಬೊಮ್ಮಾಯಿ ಕಾಲದ ರಾಜಕಾರಣದ ಕೊನೆಯ ಕೊಂಡಿ. 7ನೇ ಇಯತ್ತೆ ಮಾತ್ರ ಪಾಸಾಗಿದ್ದರೂ ಉದಾಸಿ ರಾಜಕೀಯ ಜಾಣ್ಮೆ ಅಪರೂಪದ್ದು. 2002ರಲ್ಲಿ ಒಮ್ಮೆ ರಾಜ್ಯದ ಹಿರಿಯ ಪತ್ರಕರ್ತರೊಬ್ಬರು ಅಹಮದಾಬಾದ್‌ನಲ್ಲಿ ಓಡಾಡುತ್ತಿದ್ದರಂತೆ. ದಂಗೆ ನಂತರದ ಚುನಾವಣೆಗಳವು. ಪತ್ರಕರ್ತರು ರಸ್ತೆಯಲ್ಲಿ ಹೊರಟಾಗ ಎದುರು ಉದಾಸಿ ಸಿಕ್ಕರಂತೆ. ಯಾಕೆ ನೀವು ಇಲ್ಲಿ ಎಂದು ಕೇಳಿದರೆ, ‘ಸುಮ್ಮನೆ ಗಾಳಿ ತಿಳಿದುಕೊಳ್ಳೋಕೆ’ ಅಂದರಂತೆ.
ಅಲ್ಲಿ ಮೋದಿ ಗೆದ್ದರು, ಇಲ್ಲಿ ಉದಾಸಿ ಬಿಜೆಪಿ ಸೇರಿಕೊಂಡರು. ಯುಪಿ, ಬಿಹಾರ, ಪಂಜಾಬ್ ಹೀಗೆ ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ಇರಲಿ, ಒಂದು ಮೂರು ನಾಲ್ಕು ದಿನವಾದರೂ ಅಲ್ಲಿಗೆ ಹೋಗದೇ ಉದಾಸಿ ಸಾಹೇಬರಿಗೆ ಸಮಾಧಾನ ಆಗುತ್ತಿರಲಿಲ್ಲ. ಯಾವುದೇ ರಾಜ್ಯದಲ್ಲಿ ಚುನಾವಣೆಯಿದ್ದರೂ ಅಲ್ಲಿನ ವಾತಾವರಣ ತಿಳಿದುಕೊಳ್ಳುವ ಹಂಬಲ ಅವರಿಗೆ ಜಾಸ್ತಿ ಇರುತ್ತಿತ್ತು. ಈಗ ಅವರದೇ ಹಾನಗಲ್‌ನಲ್ಲಿ ಚುನಾವಣೆ ನಡೆಯುತ್ತಿದೆ. ಆದರೆ ಗಾಳಿ ಎತ್ತ ಕಡೆ ಇದೆ ಇನ್ನೂ ಗೊತ್ತಾಗುತ್ತಿಲ್ಲ.
ಮಾನೆ ಪೊಲಿಟಿಕಲ್ ಟಿಪ್ಸ್
ಹಾನಗಲ್ ನಲ್ಲಿ 2018ರಲ್ಲಿ ಸೋತು ಈಗ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಶ್ರೀನಿವಾಸ ಮಾನೆಗೆ ಬಿಜೆಪಿಗೆ ಬರುವಂತೆ 2018ರಲ್ಲಿಯೇ ಬಿಜೆಪಿ ಆಫರ್ ನೀಡಿತ್ತು. ನೀವು ಬಂದರೆ ಕಲಘಟಗಿಗೆ ಟಿಕೆಟ್ ಕೊಡುತ್ತೇವೆ ಎಂದು ದಿಲ್ಲಿ ನಾಯಕರಿಂದಲೇ ಹೇಳಿಸಲಾಗಿತ್ತು. ಧಾರವಾಡದ ಕಲಘಟಗಿಯಲ್ಲಿ ಮರಾಠ ಸಮುದಾಯ ಇರುವುದು ಅದಕ್ಕೆ ಕಾರಣ. ಆದರೆ ಶ್ರೀನಿವಾಸ ಮಾನೆ ಬಿಜೆಪಿಯಿಂದ ಲಿಂಗಾಯತ ಬಾಹುಳ್ಯದ ಕ್ಷೇತ್ರಗಳಲ್ಲಿ ನಾವು ಗೆಲ್ಲಲು ಆಗುವುದಿಲ್ಲ. ಕಾಂಗ್ರೆಸ್‌ನಿಂದ ನಿಂತರೆ ಮರಾಠರ ಜೊತೆ ಕುರುಬರು ಹಾಗೂ ಮುಸ್ಲಿಮರು ಜೊತೆಯಲ್ಲಿ ನಿಲ್ಲುತ್ತಾರೆ. ಆದರೆ ಬಿಜೆಪಿಯಿಂದ ನಿಂತರೆ, ಎದುರುಗಡೆ ಕಾಂಗ್ರೆಸ್‌ನವರು ಲಿಂಗಾಯತರಿಗೆ ಟಿಕೆಟ್ ಕೊಟ್ಟರೆ ಮರಾಠ ಬಿಟ್ಟರೆ ನಮಗೆ ವೋಟು ಯಾರೂ ಹಾಕುವುದಿಲ್ಲ ಎಂದು ದಿಲ್ಲಿ ಬಿಜೆಪಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಮಾನೆ ನೀಡಿದ ಉತ್ತರ ನಮ್ಮ ರಾಜ್ಯದ ರಾಜಕಾರಣದ ಜಾತಿ ಸಮೀಕರಣದ ಸೂಕ್ಷ್ಮತೆಗಳನ್ನು ಮುಂದಿಡುತ್ತದೆ.
ಪಂಜಾಬ್, ಉತ್ತರ ಪ್ರದೇಶ, ಗುಜರಾತ್, ಉತ್ತರಾಖಂಡ ಚುನಾವಣೆಯಲ್ಲಿ ಸಿದ್ದರಾಮಯ್ಯ ಪಾತ್ರವೇನು?
ಗೋಖಲೆ ಜೀವನ್ಮರಣ ಹೋರಾಟ
ಸಾರ್ವಜನಿಕ ಜೀವನ ಮತ್ತು ರಾಜಕಾರಣದಲ್ಲಿ ಉದಯಿಸುತ್ತಿರುವ ಸೂರ್ಯನಿಗೆ ಮಾತ್ರ ಕಿಮ್ಮತ್ತು. ನೀವು ಉಪಯೋಗಕ್ಕೆ ಬಾರದೇ ಇದ್ದರೆ ಕೇಳುವವರಿಗೂ ದಿಕ್ಕು ಇರುವುದಿಲ್ಲ. 1991ರಿಂದ 2004ರ ವರೆಗೆ ಕರ್ನಾಟಕದ ಬಿಜೆಪಿಯ ಸಂಘಟನೆಯಲ್ಲಿ ಮಹತ್ವದ ವ್ಯಕ್ತಿ ಆಗಿದ್ದ ರಾಜೇಂದ್ರ ಗೋಖಲೆ ಪುಣೆ ಆಸ್ಪತ್ರೆಯಲ್ಲಿ ಕಿಡ್ನಿ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಆದರೆ ಅಧಿಕಾರದಲ್ಲಿರುವ ಕರ್ನಾಟಕದ ಬಿಜೆಪಿಗೆ ಅವರ ನೆನಪೇ ಇಲ್ಲ.
ಪ್ರಮೋದ ಮಹಾಜನ್, ಉಮಾ ಭಾರತಿ, ಅಡ್ವಾಣಿ, ಯಡಿಯೂರಪ್ಪ, ಅನಂತಕುಮಾರರಿಗೆಲ್ಲ ಬೇಕಾದ ವ್ಯಕ್ತಿ ಆಗಿದ್ದ ಗೋಖಲೆ 99ರ ಬಳ್ಳಾರಿ ಸುಷ್ಮಾ ಸ್ವರಾಜ್ ವರ್ಸಸ್ ಸೋನಿಯಾ ಗಾಂಧಿ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿ ಆಗಿದ್ದರು. 50ರ ದಶಕದಲ್ಲಿ ಕರ್ನಾಟಕಕ್ಕೆ ಆರ್‌ಎಸ್‌ಎಸ್ ಕಾಲಿಟ್ಟಾಗ ಇದ್ದ ಕೆಲವೇ ಕಟ್ಟಾಸಂಘದ ಮನೆಗಳಲ್ಲಿ ಧಾರವಾಡದ ಗೋಖಲೆ ಮನೆಯೂ ಒಂದಾಗಿತ್ತಂತೆ. ಇದರ ತಾತ್ಪರ್ಯ ಇಷ್ಟೇ; ರಾಜಕಾರಣ ಎಂದರೆ ಹೊಳೆಯುವ ಬೆರಳು ಎಣಿಕೆಯ ನಕ್ಷತ್ರಗಳಷ್ಟೇ ಅಲ್ಲ, ಅದರಾಚೆಗೆ ಒಂದು ಕತ್ತಲ ಲೋಕವಿದೆ. ಅಲ್ಲಿ ಯೋಗ್ಯತೆ, ಅರ್ಹತೆ ಇದ್ದರೂ ಹೊಳೆಯದ ಸಾವಿರಾರು ನಕ್ಷತ್ರಗಳಿವೆ. ಹೋಗಿ ನೋಡಲು ಯಾರಿಗೂ ಪುರುಸೊತ್ತು ಇರೋದಿಲ್ಲ ಅಷ್ಟೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ದೆಹಲಿಯಿಂದ ಕಂಡ ರಾಜಕಾರಣ