Asianet Suvarna News Asianet Suvarna News

ಸಿದ್ದರಾಮಯ್ಯಗೆ ಬೆಂಬಲ: ಕೆ.ಎಚ್‌.ಮುನಿಯಪ್ಪ ಮನವೊಲಿಕೆ ಯಶಸ್ವಿ

ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಮುನಿಸು ಶಮನ ಮಾಡುವಲ್ಲಿ ಸಿದ್ದರಾಮಯ್ಯಯಶಸ್ವಿಯಾಗಿದ್ದಾರೆ. ಸೋಮವಾರ ಬೆಳಗ್ಗೆ 11.30ಕ್ಕೆ ಕೆ.ಹೆಚ್‌ ಮುನಿಯಪ್ಪ ಅವರ ಬೆಂಗಳೂರಿನ ಮನೆಗೆ ಭೇಟಿ ನೀಡಿ, ಕೋಲಾರದ ಸಮಾವೇಶಕ್ಕೆ ಬರುವಂತೆ ಮನವಿ ಮಾಡಿದರು. 

Siddaramaiahs Kolar Contest Is Almost Fixed A Conversation With KH Muniyappa Who Aroused Curiosity gvd
Author
First Published Jan 10, 2023, 3:00 AM IST

ಕೋಲಾರ (ಜ.10): ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಮುನಿಸು ಶಮನ ಮಾಡುವಲ್ಲಿ ಸಿದ್ದರಾಮಯ್ಯಯಶಸ್ವಿಯಾಗಿದ್ದಾರೆ. ಸೋಮವಾರ ಬೆಳಗ್ಗೆ 11.30ಕ್ಕೆ ಕೆ.ಹೆಚ್‌ ಮುನಿಯಪ್ಪ ಅವರ ಬೆಂಗಳೂರಿನ ಮನೆಗೆ ಭೇಟಿ ನೀಡಿ, ಕೋಲಾರದ ಸಮಾವೇಶಕ್ಕೆ ಬರುವಂತೆ ಮನವಿ ಮಾಡಿದರು. ಸಮಾವೇಶಕ್ಕೆ ತಾವು ಬರದಿದ್ದರೆ ಜನತೆಗೆ ತಪ್ಪು ಸಂದೇಶ ಹೋಗುತ್ತದೆ. ಏನೇ ಗೊಂದಲಗಳಿದ್ದರೂ ಸರಿಪಡಿಸಿಕೊಳ್ಳೋಣ ಎಂದು ಆತ್ಮೀಯವಾಗಿ ಮನವಿ ಮಾಡಿದರು. ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದವರು ಮಾತ್ರ ಪಕ್ಷದ ಜವಾಬ್ದಾರಿ ಹೊರಬೇಕು.

ಮಿಕ್ಕವರು ಅವರವರ ಕ್ಷೇತ್ರಗಳ ಜವಾಬ್ದಾರಿ ನೋಡಿಕೊಳ್ಳಬೇಕು ಸೇರಿದಂತೆ ಕೆಲವು ಷರತ್ತುಗಳನ್ನು ಹಾಕಿದ ಮುನಿಯಪ್ಪ, ಸಮಾವೇಶಕ್ಕೆ ಬರಲು ಒಪ್ಪಿದರು. ಬಳಿಕ, ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ಕೋಲಾರಕ್ಕೆ ಪ್ರಯಾಣಿಸಿದರು. ನಂತರ, ಸಮಾವೇಶದಲ್ಲಿ ಮಾತನಾಡಿದ ಮುನಿಯಪ್ಪ, ಕೋಲಾರ ದಿಂದ ಸಿದ್ದರಾಮಯ್ಯ ಸ್ಪರ್ಧೆಗೆ ನನ್ನ ಅಭ್ಯಂತರ ಇಲ್ಲ. ಈ ಬಗ್ಗೆ ಕೆಪಿಸಿಸಿ ಹಾಗೂ ಎಐಸಿಸಿಯ ಸ್ಕ್ರೀನಿಂಗ್‌ ಕಮಿಟಿಯಲ್ಲಿ ತೀರ್ಮಾವಾಗಬೇಕು. ಸಿದ್ದರಾಮಯ್ಯ ಅಭ್ಯರ್ಥಿ ಆಗುವುದಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.

ಆರ್‌ಎಸ್‌ಎಸ್‌ ಬಗ್ಗೆ ಸಿದ್ದರಾಮಯ್ಯ ಕಪಿಚೇಷ್ಟೆ: ಕೆ.ಎಸ್‌.ಈಶ್ವರಪ್ಪ ಟೀಕೆ

ಕೋಲಾರದಿಂದಲೇ ಸ್ಪರ್ಧೆ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅಲ್ಲದೆ, ತಾವು ಒಂದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ, ಈ ಬಾರಿ ಸಿದ್ದರಾಮಯ್ಯ ಅವರ ಸ್ಪರ್ಧೆ ಎಲ್ಲಿಂದ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ನಗರದ ಜಿಲ್ಲಾ ಮಿನಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ‘ನನಗೆ ವರುಣದಿಂದ ಸ್ಪರ್ಧಿಸಲು ಒತ್ತಾಯವಿದೆ. 

ಬಾದಾಮಿ ಕ್ಷೇತ್ರದ ಜನರು ಬೆಂಗಳೂರು ನಿಮಗೆ ದೂರವಾದರೆ ನಾವೇ ಒಂದು ಹೆಲಿಕಾಪ್ಟರ್‌ ಕೊಡಿಸುತ್ತೇವೆ, ವಾರಕ್ಕೊಮ್ಮೆ ಬನ್ನಿ ಸಾಕು, ಇಲ್ಲಿಂದಲೇ ಸ್ಪರ್ಧೆ ಮಾಡಿ ಎನ್ನುತ್ತಿದ್ದಾರೆ. ಆದರೆ, ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ಮಾಜಿ ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಹಾಗೂ ಈ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಆಗ್ರಹದ ಮೇರೆಗೆ ಇಲ್ಲಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಆದಾಗ್ಯೂ, ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧನಾಗಿದ್ದು, ಹೈಕಮಾಂಡ್‌ ಸಮ್ಮತಿಸಿದರೆ ಕೋಲಾರದಿಂದಲೇ ಸ್ಪರ್ಧಿಸುತ್ತೇನೆ. ಅಲ್ಲದೆ, ಈ ಬಾರಿ ಒಂದೇ ಕ್ಷೇತ್ರದಿಂದ ನನ್ನ ಸ್ಪರ್ಧೆ’ ಎಂದರು.

ಕೆಲವರು, ‘ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ, ಗೊಂದಲದಲ್ಲಿದ್ದಾರೆ’ ಎಂದೆಲ್ಲಾ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ಕಳೆದ ಬಾರಿ ಇಲ್ಲಿಗೆ ಬಂದಾಗ ನನಗೆ ಇಲ್ಲಿಂದಲೇ ಸ್ಪರ್ಧಿಸಲು ತೀವ್ರ ಒತ್ತಡ ಬಂತು. ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಕೂಡ ನನಗೆ ಕ್ಷೇತ್ರ ಬಿಟ್ಟುಕೊಟ್ಟು, ನನ್ನ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ಇಲ್ಲಿನ ಜನರ ಆಗ್ರಹ, ಅಭಿಮಾನ ತಿರಸ್ಕರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಜ.23ರಂದು ಇಲ್ಲಿ ಸಮಾವೇಶ ನಡೆಸುತ್ತೇನೆ, ಆಗ ಈ ಬಗ್ಗೆ ಇನ್ನಷ್ಟುಮಾಹಿತಿ ನೀಡುತ್ತೇನೆ ಎಂದರು.

ಸೋನಿಯಾ ಮನೆ ಬಳಿ ಕಾದು ನಿಲ್ಲುತ್ತಿದ್ದ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ

ಕೋಲಾರಕ್ಕೆ ತೆರಳುವುದಕ್ಕೂ ಮೊದಲು ಅವರು ಬೆಳಗ್ಗೆ 11.30ಕ್ಕೆ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಬೆಂಗಳೂರಿನ ಮನೆಗೆ ಭೇಟಿ ನೀಡಿ, ಸಮಾವೇಶಕ್ಕೆ ಬರುವಂತೆ ಮನವಿ ಮಾಡಿದರು. ಬಳಿಕ, ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ಕೋಲಾರಕ್ಕೆ ತೆರಳಿದರು. ಸಮಾವೇಶದಲ್ಲಿ ಮಾತನಾಡಿದ ಮುನಿಯಪ್ಪ, ಸಿದ್ದು ಸ್ಪರ್ಧೆಗೆ ತಮ್ಮ ಬೆಂಬಲ ಘೋಷಿಸಿದರು.

Follow Us:
Download App:
  • android
  • ios