ಬೆಂಗಳೂರು [ಡಿ.16]:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಆರೋಗ್ಯ ಸಂಪೂರ್ಣ ಸುಧಾರಿಸಿದ ಬಳಿಕ ದೆಹಲಿಗೆ ಬರುವಂತೆ ತಿಳಿಸಿದ್ದಾರೆ. ಇದೇ ವೇಳೆ ನೀವು ನೀಡಿರುವ ರಾಜೀನಾಮೆ ವಾಪಸ್‌ ಪಡೆಯಬೇಕು. ಈ ಬಗ್ಗೆ ದೆಹಲಿಗೆ ಬಂದಾಗ ಮಾತನಾಡುತ್ತೇನೆ ಎಂದೂ ರಾಹುಲ್‌ ಅವರು ಸಿದ್ದರಾಮಯ್ಯಗೆ ಹೇಳಿದ್ದಾರೆನ್ನಲಾಗಿದೆ.

ಹೃದಯ ಸಂಬಂಧಿ ಸಮಸ್ಯೆಗೆ ಆ್ಯಂಜಿಯೋಪ್ಲಾಸ್ಟಿಶಸ್ತ್ರಚಿಕಿತ್ಸೆಗೊಳಗಾಗಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಿದ್ದರಾಮಯ್ಯ ಅವರಿಗೆ ಶನಿವಾರ ರಾತ್ರಿ ದೂರವಾಣಿ ಕರೆ ಮಾಡಿ ರಾಹುಲ್‌ ಗಾಂಧಿ ಅವರು ಮಾತನಾಡಿದ್ದಾರೆ. ಈ ವೇಳೆ ಉಪಚುನಾವಣೆಯಲ್ಲಿ ಪಕ್ಷಕ್ಕಾದ ನೀರಸ ಸೋಲು, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ಸೇರಿದಂತೆ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಸುದೀರ್ಘವಾಗಿ ಮಾತನಾಡಿದ್ದಾರೆ. ಈ ವೇಳೆ ತಮಗೆ ಉಂಟಾಗಿದ್ದ ಸಮಸ್ಯೆ, ನೀಡಿದ ಚಿಕಿತ್ಸೆ ಬಗ್ಗೆ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಅವರಿಗೆ ತಿಳಿಸಿದ್ದಾರೆ.

ನಾನು, ಸಿದ್ದು ಭಾರತ-ಪಾಕ್‌ ಅಲ್ಲ; ನಮ್ಮನ್ನು ಶತ್ರುಗಳೆಂದು ಕರೆಯಬೇಡಿ...

ನಂತರ ರಾಹುಲ್‌ ಗಾಂಧಿ ಅವರು, ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ಪ್ರಸ್ತಾಪಿಸಿ, ಎಲ್ಲ ಚುನಾವಣೆಗಳಲ್ಲೂ ಸೋಲು ಗೆಲುವು ಸಹಜ. ಸೋಲು ಗೆಲುವಿಗೆ ಯಾರೋ ಒಬ್ಬರು ಕಾರಣರಾಗುವುದಿಲ್ಲ. ಸಾಮೂಹಿಕವಾಗಿ ಎಲ್ಲರೂ ಹೊಣೆ ಹೊರಬೇಕು. ನೀವು ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ. ಈಗ ಆರೋಗ್ಯದ ಕಡೆ ಗಮನ ಕೊಡಿ. ಸಂಪೂರ್ಣ ಆರೋಗ್ಯ ಸುಧಾರಿಸಿದ ಬಳಿಕ ದೆಹಲಿಗೆ ಬನ್ನಿ. ನೀವು ನೀಡಿರುವ ರಾಜೀನಾಮೆ ವಾಪಸ್‌ ಪಡೆಯಬೇಕು. ಈ ಬಗ್ಗೆ ದೆಹಲಿಗೆ ಬಂದಾಗ ಮಾತನಾಡುತ್ತೇನೆ. ಜತೆಗೆ ರಾಜ್ಯ ರಾಜಕಾರಣದ ಸಾಕಷ್ಟುಬೆಳವಣಿಗೆಗಳ ಬಗ್ಗೆಯೂ ಮಾತನಾಡುವುದಿದೆ ಎಂದು ಹೇಳಿದ್ದಾರೆ.

ಅದಕ್ಕೆ, ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ವೈದ್ಯರು 15 ದಿನ ಎಲ್ಲೂ ಪ್ರವಾಸ ಮಾಡದ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ವಿಶ್ರಾಂತಿ ಪಡೆದು ಸಂಪೂರ್ಣ ಸುಧಾರಿಸಿದ ಬಳಿಕ ದೆಹಲಿಗೆ ಬರುತ್ತೇನೆ. ತಮ್ಮೊಂದಿಗೆ ಚರ್ಚಿಸಿದ ಬಳಿಕವೇ ರಾಜೀನಾಮೆ ವಾಪಸ್‌ ಪಡೆಯಬೇಕೆ, ಬೇಡವೇ ಎಂಬುದನ್ನು ತೀರ್ಮಾನಿಸುವುದಾಗಿ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.