ರಾಜ್ಯ ಕಾಂಗ್ರೆಸ್ಸಿನಲ್ಲಿ ಎರಡು ಬಣ, ಎರಡು ಯಾತ್ರೆ ಎಂಬಂತಾಗಿದೆ. ಒಂದೆಡೆ ಸಿದ್ದರಾಮಯ್ಯ ಬಣ ಸಿದ್ದರಾಮೋತ್ಸವ ತಯಾರಿಯಲ್ಲಿದ್ದರೆ. ಮತ್ತೊಂಡೆದೆ ಡಿಕೆಶಿ ಬಣ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಗೆ ಸಿದ್ಧತೆ ನಡೆಸುತ್ತಿದೆ.
ಬೆಂಗಳೂರು(ಜು.19): ರಾಜ್ಯ ಕಾಂಗ್ರೆಸ್ಸಿನಲ್ಲಿ ಎರಡು ಬಣ, ಎರಡು ಯಾತ್ರೆ ಎಂಬಂತಾಗಿದೆ. ಕಾರ್ಯಕ್ರಮಗಳ ರೂಪಿಸುವಲ್ಲಿ ಎರಡು ಬಣಗಳ ನಾಯಕರು ಬ್ಯುಸಿಯಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಣಗಳಿಂದ ಈ ಸಿದ್ಧತೆ ನಡೆದಿದೆ. ಈ ಬಣ ರಾಜಕೀಯ ಮೈಸೂರು ಭಾಗದ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಸಿದ್ದು ಬಣದಿಂದ ಸಿದ್ದರಾಮೋತ್ಸವಕ್ಕೆ ದಾವಣಗೆರೆಯಲ್ಲಿ ತಯಾರಿ ನಡೆಯುತ್ತಿದ್ದರೆ ಡಿಕೆಶಿ ಬಣದಿಂದ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಗೆ ಗುಂಡ್ಲುಪೇಟೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಯಾವ ನಾಯಕನ ಪರ ನಿಲ್ಲಬೇಕೋ ಎಂಬ ಗೊಂದಲದಲ್ಲಿ ಸ್ಥಳೀಯ ಕೈ ನಾಯಕರಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇಬ್ಬರು ನಾಯಕರೂ ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದು ತವರು ಜಿಲ್ಲೆಯಿಂದಲೇ ಟಕ್ಕರ್ ಕೊಡಲು ಡಿಕೆಶಿ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮೈಸೂರು ಭಾಗದ ಕಾಂಗ್ರೆಸ್ ನಾಯಕರ ಜೊತೆ ಡಿಕೆ ಶಿವಕುಮಾರ್ ಸಭೆ ನಡೆಸಲಿದ್ದಾರೆ. ಒಂದೆಡೆ ಸಿದ್ದರಾಮೋತ್ಸವ, ಇನ್ನೊಂದೆಡೆ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ಕಾಂಗ್ರೆಸ್ ಇದ್ದು. ಎರಡು ಕಾರ್ಯಕ್ರಮಗಳಿಗೆ ಜನ ಸೇರಿಸಬೇಕಾದ ಜವಾಬ್ದಾರಿ ಸ್ಥಳೀಯ ನಾಯಕರ ಹೆಗಲ ಮೇಲಿದೆ.
ಡಿಕೆಶಿ ಗುಂಡ್ಲುಪೇಟೆ ಭೇಟಿ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಸ್ಥಳ ವೀಕ್ಷಣೆಗೆ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜು.19 ರಂದು ಗುಂಡ್ಲುಪೇಟೆಗೆ ಭೇಟಿ ನೀಡಲಿದ್ದಾರೆ. ಜು.19 ರ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯಿಂದ ಗುಂಡ್ಲುಪೇಟೆ ಆಗಮಿಸಲಿದ್ದು, ಭಾರತ್ ಜೋಡೊ ಯಾತ್ರೆಯ ಸ್ಥಳ ಪರಿಶೀಲನೆ ಬಳಿಕ ಸಂಜೆ 4 ಗಂಟೆಗೆ ಗುಂಡ್ಲುಪೇಟೆಯಿಂದ ಮೈಸೂರಿಗೆ ತೆರಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರು ಕೇರಳ ಮಾರ್ಗವಾಗಿ ಚಾಮರಾಜನಗರ ಜಿಲ್ಲೆ ಮೂಲಕ ರಾಜ್ಯ ಪ್ರವೇಶ ಮಾಡಲಿದ್ದಾರೆ. ನಂತರ ಕನಿಷ್ಠ 22 ದಿನಗಳ ಕಾಲ ನಿತ್ಯ ಸುಮಾರು 20 ಕಿ.ಮೀ. ಸರಾಸರಿಯಂತೆ ಒಟ್ಟು 510 ಕಿ.ಮೀ.ನಷ್ಟುಮಾರ್ಗವನ್ನು ರಾಜ್ಯದಲ್ಲಿ ಸಂಚರಿಸಲಿದ್ದಾರೆ.
ರಾಹುಲ್ ಗಾಂಧಿ ಅವರು ಅ. 2ರಿಂದ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸುಮಾರು 3500 ಕಿಮೀ ಭಾರತ್ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದು, ರಾಜ್ಯದಲ್ಲಿ ಸುಮಾರು 22 ದಿನ ಪಾದಯಾತ್ರೆ ನಡೆಯಲಿದೆ. ಕೇರಳದಿಂದ ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ರಾಜ್ಯಪ್ರವೇಶಿಸಿದ ನಂತರ ಮೈಸೂರು, ಮಂಡ್ಯ ಜಿಲ್ಲೆ, ಕುಣಿಗಲ್ ಮೂಲಕ ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನ ಮೂಲಕ ಹೈದರಾಬಾದ್‌ಗೆ ಯಾತ್ರೆ ತೆರಳಲಿದೆ. ತನ್ಮೂಲಕ ರಾಜ್ಯದ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗವನ್ನು ರಾಹುಲ್ ಗಾಂಧಿ ಅವರು ಯಾತ್ರೆ ಮೂಲಕ ಹಾದು ಹೋಗಲಿದ್ದಾರೆ.
ಸಿದ್ದರಾಮೋತ್ಸವಕ್ಕೆ ಗುದ್ದಲಿ ಪೂಜೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಹಿನ್ನೆಲೆಯಲ್ಲಿ ಆ.3ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಸಿದ್ದರಾಮೋತ್ಸವ ನಿಮಿತ್ತ ಹೊರವಲಯದ ಕುಂದವಾಡದಲ್ಲಿ ವೇದಿಕೆ ನಿರ್ಮಿಸಲು ಸೋಮವಾರ ಭೂಮಿ ಪೂಜೆ ನೆರವೇರಿಸಲಾಗಿದೆ. ನಾಡಿನ ಕೇಂದ್ರ ಬಿಂದುವಾದ ದಾವಣಗೆರೆಯಲ್ಲೇ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಕನಿಷ್ಟ5 ಲಕ್ಷ ಜನ ಸೇರುವ ನಿರೀಕ್ಷೆ ಇತ್ತು. ಆದರೆ, ಈಗ ನೋಡಿದರೆ ಸುಮಾರು 8-10 ಲಕ್ಷ ಸೇರುವ ಸಾಧ್ಯತೆ ಇದ್ದು, ಇದಕ್ಕಾಗಿ ವಿಶಾಲ ವೇದಿಕೆ, ಪೆಂಡಾಲ್ ಅಳವಡಿಸಲಿದ್ದೇವೆ. ರಾಜ್ಯದ ಪ್ರತಿ ಮೂಲೆಯಿಂದಲೂ ಜನರು ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ, ಯಶಸ್ವಿಗೊಳಿಸಲು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮನವಿ ಮಾಡಿದರು.
