ಬೆಂಗಳೂರು, (ಡಿ.01): ಕುರುಬರ ಎಸ್‍ಟಿ ಹೋರಾಟದ ಹಿಂದೆ ಆರ್‍ಎಸ್‍ಎಸ್‍ನ ಕೈವಾಡವಿದೆ. ಇದು ಕುರುಬ ಸಮುದಾಯವನ್ನು ಒಡೆಯುವ ಹುನ್ನಾರ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ವಿಧಾನಸೌಧದಲ್ಲಿ  ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಟಿ ಹೋರಾಟದ ಹೆಸರಲ್ಲಿ ಕುರುಬ ಸಮುದಾಯವರನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಆರ್‍ಎಸ್‍ಎಸ್ ನ ದತ್ತಾತ್ರೇಯ ಹೊಸಬಾಳೆ ಹಾಗೂ ಸಂತೋಷ್ ಅವರು ಈಶ್ವರಪ್ಪ ಅವರನ್ನು ಬಳಸಿಕೊಂಡು ಕುರುಬ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ: ದೆಹಲಿ ಮಟ್ಟದಲ್ಲಿ ಈಶ್ವರಪ್ಪ ಬ್ಯಾಟಿಂಗ್

ನಾವು ಕರೆದರೂ ಕುರುಬರ ಎಸ್‍ಟಿ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸುತ್ತಿಲ್ಲ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ. ಅವರು ನನ್ನನ್ನು ಕರೆದಿಲ್ಲ. ಬರುತ್ತೇನೆ ಅಥವಾ ಬರುವುದಿಲ್ಲ ಎಂದು ನಾನೂ ಅವರಿಗೆ ಹೇಳಿಲ್ಲ. ಈಶ್ವರಪ್ಪ ಅವರು ಈ ವಿಚಾರದಲ್ಲಿ ಸುಳ್ಳು ಹೇಳಿದ್ದಾರೆ ಎಂದರು.

ಮೋದಿಯವರು ಪ್ರಧಾನಿಯಾಗಿ ಆರೂವರೆ ವರ್ಷಗಳಾದವು. ಗೊಂಡ, ರಾಜಗೊಂಡ ಸಮುದಾಯದವರು ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕುರುಬರು ಎಂದು ಕರೆದುಕೊಳ್ಳುವವರೂ ಅದರಲ್ಲಿ ಸೇರಿದ್ದಾರೆ. ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಆ ಬಗ್ಗೆ ಈಶ್ವರಪ್ಪ ಅವರು ಏಕೆ ಆದೇಶ ಮಾಡಿಸಿಲ್ಲ. ಕೋಲಿ, ಗೊಲ್ಲ ಸಮುದಾಯವನ್ನೂ ಎಸ್ಟಿ ಪಟ್ಟಿಗೆ ಸೇರಿಸುವಂತೆ ಮಾಡಿರುವ ಶಿಫಾರಸು ಸಹ ನೆನೆಗುದಿಗೆ ಬಿದ್ದಿದೆ ಎಂದು ಹೇಳಿದರು.

ಕುರುಬರ ಎಸ್‍ಟಿ ಹೋರಾಟದ ಹಿಂದೆ RSS
ಈಶ್ವರಪ್ಪ ಅವರನ್ನು ಮುಂದೆ ಬಿಟ್ಟು ಆರ್‍ಎಸ್‍ಎಸ್ ಕುರುಬರ ಎಸ್‍ಟಿ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತಿದೆ. ಇದು ಸಮುದಾಯವನ್ನು ದಾರಿ ತಪ್ಪಿಸುವ ಮತ್ತು ಗೊಂದಲ ನಿರ್ಮಾಣ ಮಾಡುವ ಪ್ರಯತ್ನ. ಹೋರಾಟ ತಪ್ಪು ಎಂದು ಹೇಳುವುದಿಲ್ಲ. 6 ವರ್ಷದಿಂದ ಸುಮ್ಮನಿದ್ದು ಈಗ ಹೋರಾಟಕ್ಕೆ ಕೈ ಹಾಕಿರುವುದರ ಉದ್ದೇಶ ಏನು. ಹೋರಾಟದ ಹಿಂದೆ ಆರ್‍ಎಸ್‍ಎಸ್ ಇರುವುದರ ಮರ್ಮವೇನು? ಆರ್‍ಎಸ್‍ಎಸ್ ನವರು ಎಂದೂ ಮೀಸಲಾತಿ ಪರ ಇಲ್ಲ. ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ಮತ್ತು ಮಂಡಲ್ ವರದಿಯನ್ನು ಅವರು ಸ್ವಾಗತ ಮಾಡಿದರೇ? ಎಲ್ಲ ಸಂದರ್ಭದಲ್ಲಿಯೂ ವಿರೋಧ ಮಾಡಿದ್ದಾರೆ. ಬಿಜೆಪಿ ಮತ್ತು ಆರ್‍ಎಸ್ ಎಸ್ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧ, ಹೆಗಡೇವಾರ್, ಗೋಲವಾಲಕರ್ ಅವರು ಆರ್‍ಎಸ್ ಎಸ್ ಸ್ಥಾಪಕರು. ಅವರು ಎಂದಾದರೂ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರ ಹೋರಾಟ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ಮೀಸಲು ಪ್ರಮಾಣವನ್ನು ಶೇ.3ರಿಂದ ಶೇ.20ಕ್ಕೆ ಹೆಚ್ಚಿಸಬೇಕು
ಕುರುಬರ ನಾಯಕ ನಾನೇ ಎಂದು ಈಶ್ವರಪ್ಪ ಅವರು ಹೇಳಿಕೊಳ್ಳಲಿ. ಅದಕ್ಕೆ ನನ್ನ ತಕರಾರು ಇಲ್ಲ. ಆದರೆ, ನಾಯಕ ಎಂದು ನಾವೇ ಹೇಳಿಕೊಳ್ಳುವುದಲ್ಲ. ಜನ ತೀರ್ಮಾನ ಮಾಡಬೇಕು. ಕುರುಬರನ್ನು ಎಸ್‍ಟಿಗೆ ಸೇರಿಸುವ ಮೊದಲು ಎಸ್‍ಟಿಗೆ ನೀಡುತ್ತಿರುವ ಮೀಸಲು ಪ್ರಮಾಣವನ್ನು ಶೇ.3ರಿಂದ ಶೇ.20ಕ್ಕೆ ಹೆಚ್ಚಿಸಬೇಕು. ಅದಕ್ಕೂ ಹೋರಾಟ ಮಾಡಬೇಕಿದೆ. ವಾಲ್ಮೀಕಿ ಸಮುದಾಯದವರು ಮೀಸಲು ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸುವಂತೆ ಈಗಾಗಲೇ ಹೋರಾಟ ಮಾಡುತ್ತಿದ್ದಾರೆ. ಮೀಸಲು ಪ್ರಮಾಣ ಶೇ.3ರಷ್ಟೇ ಇದ್ದರೆ ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸಿದರೂ ಪ್ರಯೋಜನವಿಲ್ಲ. ಕುರುಬ ಸಮುದಾಯದ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇದ್ದರೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಗಣತಿ ಆಧಾರಿದ ವರದಿಯನ್ನು ಸರ್ಕಾರ ಅಂಗೀಕಾರ ಮಾಡಲಿ ಆಗ್ರಹಿಸಿದರು.

ಕುರುಬರ ಬಗ್ಗೆ ಈಶ್ವರಪ್ಪ ಅವರಿಗೆ ಇದ್ದಕ್ಕಿದ್ದಂತೆ ಕಾಳಜಿ ಬಂದಿದೆ. ಕಾಗಿನೆಲೆ ಮಠ ಸ್ಥಾಪನೆ ಸಂದರ್ಭದಲ್ಲಿ ಈಶ್ವರಪ್ಪ ಅವರು ಎಲ್ಲಿದ್ದರು. ಆಗ ಅವರು ಪತ್ತೆಯೇ ಇರಲಿಲ್ಲ. ಈಗ ಸ್ವಾಮೀಜಿಗಳನ್ನು ಕರೆದುಕೊಂಡು ಹೋರಾಟ ನಡೆಸುತ್ತಿದ್ದಾರೆ. ಮಠದ ಉದ್ಘಾಟನಾ ಸಭೆಗೂ ಅವರು ಆಗ ಬಂದಿರಲಿಲ್ಲ. ಉಡುಪಿಯ ಕನಕ ಗೋಪುರ ಕೆಡವಿದಾಗ ಎಲ್ಲಿ ಹೋಗಿದ್ದರು. ಯಾವ ಮೀಸಲಾತಿ ಪರ ಅವರು ಹೋರಾಟ ಮಾಡಿದ್ದಾರೆ ಎಂದು ಕಿಡಿಕಾರಿದರು. 

ಈಶ್ವರಪ್ಪ ಆಗ ಎಲ್ಲಿದ್ದರು.?
ರಾಜ್ಯಸಭಾ ಸದಸ್ಯರಾಗಿದ್ದ ರಮಾ ಜೋಯಿಸರು ಹಿಂದುಳಿದ ವರ್ಗದವರ ಮೀಸಲು ವಿರೋಧಿಸಿದಾಗ ಎಲ್ಲಿದ್ದರು. ಬಿಜೆಪಿಯಲ್ಲಿ ಆಗ ಈಶ್ವರಪ್ಪ ಅವರು ಇದ್ದರಲ್ಲವೇ? ಏಕೆ ವಿರೋಧ ಮಾಡಲಿಲ್ಲ. ಈಗ ಇದ್ದಕ್ಕಿಂದ್ದರೆ ಪ್ರೀತಿ ಬಂದಿದೆ. ಅವರು ಹೋರಾಟ ಮಾಡಲಿ. ಬೇಡ ಎನ್ನುವುದಿಲ್ಲ. ಮೊದಲು ಬೀದರ್, ಕಲಬರಗಿ, ಯಾದಗಿರಿಯ ಗೊಂಡ, ರಾಜಗೊಂಡ ಸಮುದಾಯವನ್ನು ಎಸ್‍ಟಿಗೆ ಸೇರಿಸುವ ಕುರಿತು ಆದೇಶ ಜಾರಿ ಮಾಡಿಸಲಿ. ಎಸ್‍ಟಿ ಹೆಸರಲ್ಲಿ ಮುಗ್ಧ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಬೇಡ ಎಂಬುದು ನನ್ನ ಮನವಿ ಎಂದು ತಿಳಿಸಿದರು.