ದಲಿತ ಮುಖ್ಯಮಂತ್ರಿ ಮಾಡಿ ಎಂದು ಹೇಳಲು ಬಿಜೆಪಿಯವರು ಯಾರು? ಅವರು ಮೊದಲು ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಿಸಲಿ, ನಂತರ ಇನ್ನೊಬ್ಬರಿಗೆ ಸಲಹೆ ನೀಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಕೊಪ್ಪಳ (ಜೂ.28): ದಲಿತ ಮುಖ್ಯಮಂತ್ರಿ ಮಾಡಿ ಎಂದು ಹೇಳಲು ಬಿಜೆಪಿಯವರು ಯಾರು? ಅವರು ಮೊದಲು ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಿಸಲಿ, ನಂತರ ಇನ್ನೊಬ್ಬರಿಗೆ ಸಲಹೆ ನೀಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿ ಕುರಿತು ಬಿಜೆಪಿ ಟ್ವೀಟ್ ಮಾಡುತ್ತಿದೆ. ಅವರು ಇಂಥದ್ದನ್ನೆಲ್ಲ ಏಕೆ ಮಾಡುತ್ತಿದ್ದಾರೆ? ಬೇಕಿದ್ದರೆ ತಾವೇ ದಲಿತ ಮುಖ್ಯಮಂತ್ರಿ ಘೋಷಿಸಲಿ, ಯಡಿಯೂರಪ್ಪ ಅವರನ್ನು ಬದಲಾಯಿಸಿದಾಗ ಗೋವಿಂದ ಕಾರಜೋಳ ಅವರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಇತ್ತಲ್ವ, ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಇದೇ ವೇಳೆ ಕಾಂಗ್ರೆಸ್‌ನಿಂದ ಮಾತ್ರ ದಲಿತ ಮುಖ್ಯಮಂತ್ರಿ ಮಾಡಲು ಸಾಧ್ಯ ಎಂದು ಹೇಳಿದ ಸಿದ್ದರಾಮಯ್ಯ, ಇಂದಲ್ಲ, ನಾಳೆ ನಮ್ಮ ಪಕ್ಷವೇ ದಲಿತರೊಬ್ಬರನ್ನು ಸಿಎಂ ಮಾಡುತ್ತದೆಯೇ ಹೊರತು ಬಿಜೆಪಿಯಲ್ಲ ಎಂದರು. ಎಚ್‌ಡಿಕೆ, ಆರೆಸ್ಸೆಸ್‌ಗೆ ಭಯ: ಆರೆಸ್ಸೆಸ್ ನಾಯಕರಿಗೆ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನನ್ನನ್ನು ಕಂಡರೆ ಭಯ. ಅದಕ್ಕೆ ಪದೇ ಪದೆ ನನ್ನ ವಿರುದ್ಧ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸಿದ್ದರಾಮಯ್ಯ ಸಾಮರ್ಥ್ಯ ಡಬಲ್ ಎಂಜಿನ್‌ಗಿಲ್ಲ: ಡಿ.ಕೆ.ಶಿವಕುಮಾರ್
ಇದೇ ವೇಳೆ ಮುಂದಿನ ಸಿಎಂ ಆಗುವುದಾಗಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರು ಮುಖ್ಯಮಂತ್ರಿ ಆಗಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ. ನಾನೇ ಸಿಎಂ ಆಗುತ್ತೇನೆ ಎಂದು ಸಿಎಂ ಕುರ್ಚಿಯಲ್ಲಿ ಕೂರಲು ಆಗುತ್ತಾ? ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸಾಧನೆ ಏನು? ಇಂಥ ಪಕ್ಷ ಅಧಿಕಾರಕ್ಕೆ ಬರುವುದಾದರು ಹೇಗೆ ಎಂದು ಪ್ರಶ್ನಿಸಿದರು.
ಬಿಜೆಪಿ ಆಟ: ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನ ಮಾಡಲು ಬಿಜೆಪಿಯೇ ಆಟವಾಡುತ್ತಿದೆ. ಆಪರೇಷನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ. ಪಾಪದ ಹಣ, ಲೂಟಿ ಹೊಡೆದ ಹಣ ಇದೆ. ಅದನ್ನೇ ಬಳಸಿಕೊಂಡು ಈ ರೀತಿ ಸರ್ಕಾರ ಬೀಳಿಸುತ್ತಿದ್ದಾರೆ. ಒಬ್ಬೊಬ್ಬ ಶಾಸಕರಿಗೆ .25-.30 ಕೋಟಿ ಕೊಟ್ಟು ಖರೀದಿಸುತ್ತಿದ್ದಾರೆ ಎಂದರು.
ದಲಿತ ಸಿಎಂ ಚರ್ಚೆ ಇರುವುದು ಬಿಜೆಪಿಯಲ್ಲಲ್ಲ: ದಲಿತ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಇರುವುದು ಬಿಜೆಪಿಯಲ್ಲಿ ಅಲ್ಲ; ಕಾಂಗ್ರೆಸ್ ಅಂಗಳದಲ್ಲಿ. ಹಾಗಾಗಿ ಕಾಂಗ್ರೆಸ್ಸಿನವರು ಮೊದಲು ಚರ್ಚೆ ಮಾಡಿಕೊಂಡು ಆರೋಪ ಮಾಡಲಿ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸವಾಲು ಹಾಕಿದರು. ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಅಂಕಿ-ಅಂಶಗಳನ್ನು ಗಮನಿಸಿದರೆ ಅತಿಹೆಚ್ಚು ಪರಿಶಿಷ್ಟಜಾತಿ, ಪಂಗಡದ ಎಂಪಿಗಳು, ಕರ್ನಾಟಕದಲ್ಲಿರುವ ಮೀಸಲು ಕ್ಷೇತ್ರದಲ್ಲಿ ಹೆಚ್ಚು ಗೆದ್ದವರು ಬಿಜೆಪಿಯವರು.
ಪಕ್ಷಾಂತರಿಗಳು 10 ವರ್ಷ ಚುನಾವಣೆಗೆ ನಿಲ್ಲಬಾರದು: ಸಿದ್ದು
ಇದನ್ನು ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಪರಮೇಶ್ವರ ದಲಿತ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಅವರನ್ನು ಯಾರು ಮಂತ್ರಿ ಮಾಡಿದ್ದಾರೆ. ಯಾರು ಮಾಡಬೇಕಿತ್ತು ಎನ್ನುವ ಚರ್ಚೆ ಇದೆ. ಹಾಗಾಗಿ ಚರ್ಚೆ ಇರುವುದು ಬಿಜೆಪಿ ಅಂಗಳದಲ್ಲಿ ಅಲ್ಲ; ಕಾಂಗ್ರೆಸ್‌ನ ಅಂಗಳದಲ್ಲಿ ಚೆಂಡು ಅಡಗಿದೆ ಎಂದರು. ಕಳೆದ ಬಾರಿ ಪರಮೇಶ್ವರ ಅವರನ್ನು ಯಾರು ಸೋಲಿಸಿದರು ಎಂದು ಪರಮೇಶ್ವರ ಅವರೇ ಹೇಳಲಿ. ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಜಿ. ಪರಮೇಶ್ವರ ಅವರಿಗೆ ಅಭಿಲಾಷೆ ಇತ್ತು. ಅವರು ಸೋಲಲು ಯಾವ ಕಾರಣ ಎಂಬುದು ಹೇಳಲಿ. ಬಿಜೆಪಿಯಲ್ಲಿ ನಿಲುವು ಸ್ಪಷ್ಟವಾಗಿದೆ. ಗೊಂದಲ ಕಾಂಗ್ರೆಸ್‌ನಲ್ಲಿದೆ ಎಂದರು.
