ರಾಜ್ಯದ ಯಾವ ಮೂಲೆಯಲ್ಲಿ ಕೋಮುಘರ್ಷಣೆ, ಹತ್ಯೆಗಳು ನಡೆದರೂ ನಮ್ಮ ಸರ್ಕಾರದ ಅವಧಿಯನ್ನು ಉಲ್ಲೇಖಿಸಿ ಸುಳ್ಳು ಮಾಹಿತಿ ನೀಡುವುದು ರಾಜ್ಯ ಬಿಜೆಪಿ ನಾಯಕರಿಗೆ ಚಟವಾಗಿಬಿಟ್ಟಿದೆ. ನಮ್ಮ ಸರ್ಕಾರದ ಕಾಲದಲ್ಲಿ ನಡೆದ ಕೋಮುಹಿಂಸಾಚಾರ ಮತ್ತು ಕೈಗೊಂಡ ಕ್ರಮಗಳ ಪುಸ್ತಕವನ್ನೇ ಪ್ರಕಟಿಸಿದ್ದೇವೆ, ಓದಿಕೊಳ್ಳಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಜು.30): ರಾಜ್ಯದ ಯಾವ ಮೂಲೆಯಲ್ಲಿ ಕೋಮುಘರ್ಷಣೆ, ಹತ್ಯೆಗಳು ನಡೆದರೂ ನಮ್ಮ ಸರ್ಕಾರದ ಅವಧಿಯನ್ನು ಉಲ್ಲೇಖಿಸಿ ಸುಳ್ಳು ಮಾಹಿತಿ ನೀಡುವುದು ರಾಜ್ಯ ಬಿಜೆಪಿ ನಾಯಕರಿಗೆ ಚಟವಾಗಿಬಿಟ್ಟಿದೆ. ನಮ್ಮ ಸರ್ಕಾರದ ಕಾಲದಲ್ಲಿ ನಡೆದ ಕೋಮುಹಿಂಸಾಚಾರ ಮತ್ತು ಕೈಗೊಂಡ ಕ್ರಮಗಳ ಪುಸ್ತಕವನ್ನೇ ಪ್ರಕಟಿಸಿದ್ದೇವೆ, ಓದಿಕೊಳ್ಳಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ನಮ್ಮ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ರಾಜಕೀಯ ಘರ್ಷಣೆ ಅಥವಾ ಕೋಮುಗಲಭೆಗಳಿಗೆ ಸಂಬಂಧ ಪಟ್ಟಂತೆ ಒಟ್ಟು 23 ಹತ್ಯೆಗಳಾಗಿವೆ. ಇವುಗಳಲ್ಲಿ ಹನ್ನೆರಡು ಮೃತವ್ಯಕ್ತಿಗಳು ಹಿಂದೂಗಳು, ಉಳಿದ ಹನ್ನೊಂದು ಮಂದಿ ಮುಸ್ಲಿಮರು. ಹನ್ನೆರಡು ಹಿಂದೂಗಳ ಹತ್ಯೆಯ ಎಂಟು ಪ್ರಕರಣಗಳಲ್ಲಿ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಯ ಕಾರ್ಯಕರ್ತರು ಆರೋಪಿಗಳಾಗಿದ್ದಾರೆ. ಒಂದು ಪ್ರಕರಣದಲ್ಲಿ ಮಾತ್ರ ಕಾಂಗ್ರೆಸ್‌ ಕಾರ್ಯಕರ್ತ ಆರೋಪಿಯಾಗಿದ್ದು, ಒಟ್ಟು 99 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಸಿದ್ದರಾಮೋತ್ಸವ ಬ್ಯಾನರ್‌ನಲ್ಲಿ ಬಿಜೆಪಿ ಶಾಸಕ ರಾಜೂಗೌಡ ಭಾವಚಿತ್ರ: ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್

ಇನ್ನು 2013ರಿಂದ 2017ರ ವರೆಗೆ ಹನ್ನೊಂದು ಮುಸ್ಲಿಮರ ಹತ್ಯೆಯಾಗಿದ್ದು, ಈ ಪೈಕಿ ಎಂಟು ಪ್ರಕರಣಗಳಲ್ಲಿ ಭಜರಂಗದಳ, ತಲಾ ಒಂದು ಪ್ರಕರಣಗಳಲ್ಲಿ ಹಿಂದೂ ಜಾಗರಣಾ ವೇದಿಕೆ, ಶ್ರೀರಾಮ ಸೇನೆ ಮತ್ತು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ಆರೋಪಿಗಳಾಗಿದ್ದಾರೆ. 115 ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. 10 ಕೊಲೆ ವೈಯಕ್ತಿಕ ಕಾರಣಗಳಿಗೆ ಆಗಿದ್ದು, ಈ ಎಲ್ಲ ಪ್ರಕರಣಗಳ ಮೊಕದ್ದಮೆಗಳ ಸಂಖ್ಯೆ ಸಮೇತ ಪುಸ್ತಕ ಪ್ರಕಟಿಸಿದ್ದೇವೆ ಎಂದು ತಿಳಿಸಿದ್ದಾರೆ.

ರಾಜಕೀಯ ಜೀವನದ ಅಲ್ಬಂ ಸಾಂಗ್‌ ಬಿಡುಗಡೆ: ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವದ ಅಂಗವಾಗಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಅಲ್ಬಂ ಸಾಂಗ್‌ ಬಿಡುಗಡೆ ಕಾರ್ಯಕ್ರಮವೂ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಜು. 31ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಇದೇ ವೇಳೆ ಸಿದ್ದರಾಮಯ್ಯನವರ ಅಭಿಮಾನಿ ಬಳಗ ಸಂಘಟನೆಯ ಲೋಕಾರ್ಪಣೆ ಕಾರ್ಯಕ್ರಮವೂ ನಡೆಯಲಿದೆ. ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು ಅಲ್ಬಂ ಸಾಂಗ್‌ ಬಿಡುಗಡೆ ಹಾಗೂ ಸಂಘಟನೆಯ ಲೋಕಾರ್ಪಣೆಯನ್ನು ಮಾಜಿ ಸಚಿವ ಸಂತೋಷ ಲಾಡ್‌ ನೆರವೇರಿಸಲಿದ್ದಾರೆ. 

'ಸಿದ್ದರಾಮಯ್ಯ ಅಮೃತ ಮಹೋತ್ಸವ ಬಿಜೆಪಿಗೆ ನಡುಕ ಶುರುವಾಗಿದೆ'

ಅಧ್ಯಕ್ಷತೆಯನ್ನು ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಹುಡಾ ಮಾಜಿ ಅಧ್ಯಕ್ಷ ಅನ್ವರ ಮುಧೋಳ, ಪಾಲಿಕೆ ಮಾಜಿ ಸದಸ್ಯರಾದ ಪ್ರಫುಲಚಂದ್ರ ರಾಯನಗೌಡ್ರ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನೋದ ಅಸೂಟಿ ಆಗಮಿಸಲಿದ್ದಾರೆ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ಪ್ರಧಾನ ಕಾರ್ಯದರ್ಶಿ ವಿಜನಗೌಡ ಪಾಟೀಲ ತಿಳಿಸಿದ್ದಾರೆ.