ಬೆಂಗಳೂರು(ಡಿ.25): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್‌ ಪ್ರಕರಣದ ತನಿಖೆಗೆ ಹೈಕೋರ್ಟ್‌ ಆದೇಶಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಅಲ್ಲದೆ, ಯಡಿಯೂರಪ್ಪ ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡದಿದ್ದರೆ ಬಿಜೆಪಿ ಹೈಕಮಾಂಡ್‌ ರಾಜೀನಾಮೆಗೆ ಸೂಚಿಸಬೇಕು. ಭಂಡತನದಿಂದ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರೆದರೆ ಅವರ ವಿರುದ್ಧ ಬೀದಿಗಿಳಿಯುತ್ತೇವೆ. ರಾಜೀನಾಮೆ ಕೊಡಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದೂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯ ಹಲವು ಎಕರೆ ಜಮೀನು ಡಿನೋಟಿಫಿಕೇಷನ್‌ ಮಾಡಿರುವ ಗಂಭೀರ ಆರೋಪ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲಿದೆ. ಈ ಪ್ರಕರಣದ ವಿಚಾರಣೆಯನ್ನು ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್‌ ಲೋಕಾಯುಕ್ತ ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಸಲು ಆದೇಶಿಸಿದೆ. ಅದರಂತೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಯಬೇಕು. ಆದರೆ ಈ ತನಿಖಾ ಸಂಸ್ಥೆ ಮುಖ್ಯಮಂತ್ರಿಗಳ ಅಧೀನದಲ್ಲಿ ಇರುವುದರಿಂದ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲು ಈ ಸಂದರ್ಭದಲ್ಲಿ ಅಸಾಧ್ಯ. ಹಾಗಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬಾರದು ಎಂದರು.

ಬಿಜೆಪಿ ಜೊತೆ ಜೆಡಿಎಸ್ ವಿಲೀನ: ಬಿಎಸ್‌ವೈ ಬೆನ್ನಲ್ಲೇ ಕುಮಾರಸ್ವಾಮಿಯಿಂದ ಸ್ಪಷ್ಟನೆ

ದೇಶದ ಕಾನೂನು, ಪ್ರಜಾಪ್ರಭುತ್ವದ ಮೇಲೆ ಗೌರವ ಇದ್ದರೆ, ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಲಿ. ಒಂದು ವೇಳೆ ದೋಷಮುಕ್ತರಾದ ಬಳಿಕ ಅಧಿಕಾರಕ್ಕೆ ಬರಲಿ, ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಅವರು ಅಧಿಕಾರದಲ್ಲಿದ್ದುಕೊಂಡೇ ತನಿಖೆ ಎದುರಿಸುವುದು ಸರಿಯಲ್ಲ. ತನಿಖೆ ಮೇಲೆ ಪ್ರಭಾವ ಬೀರಬಹುದು. ಏಕೆಂದರೆ ಅವರು ಮುಖ್ಯಮಂತ್ರಿಯಾದ ಕೂಡಲೇ ಈ ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ಪಡೆದಿರುವುದೇ ಇದಕ್ಕೆ ಸಾಕ್ಷಿ. ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಕುಳಿತಿರುವ ಸಮಯದಲ್ಲೇ ತನಿಖೆ ನಡೆದರೆ ನ್ಯಾಯ ಸಿಗುವುದು ಅನುಮಾನ ಎಂದರು.

ಮತ್ತೆ ಬಿಎಸ್‌ವೈ ಬಂಧನವಾಗಬಹುದು: ಸಿದ್ದು ಭವಿಷ್ಯ

ಹೈಕೋರ್ಟ್‌ ತನಿಖೆಗೆ ಆದೇಶಿಸಿರುವ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾವುದೇ ಸಮಯದಲ್ಲಿ ವಾರೆಂಟ್‌ ಜಾರಿಯಾಗಿ, ಬಂಧನವೂ ಆಗಬಹುದು ಎಂದು ಇದೇ ವೇಳೆ ಸಿದ್ದರಾಮಯ್ಯ ಭವಿಷ್ಯ ನುಡಿದರು.

ಹೈಕೋರ್ಟ್‌ ತನ್ನ ಡಿ.22ರ ಆದೇಶದಲ್ಲಿ ಯಡಿಯೂರಪ್ಪ ವಿರುದ್ಧದ ಆರೋಪಗಳು ‘ಕಾಗ್ನಿಝೆಬಲ್‌ ಅಫೆನ್ಸ್‌’ (ಪ್ರಜ್ಞಾಪೂರ್ವಕ ಅಪರಾಧ ಕೃತ್ಯಗಳು) ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂಬುದಾಗಿ ಹೇಳಿದೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದ ಸಿದ್ದರಾಮಯ್ಯ ಅವರು, 2011ರಲ್ಲಿ ಇದೇ ರೀತಿಯ ಪ್ರಕರಣ ಯಡಿಯೂರಪ್ಪ ಅವರ ಮೇಲಿತ್ತು ಎಂದು ಪ್ರಸ್ತಾಪಿಸಿದರು.

ಪ್ರಸ್ತುತ ತನಿಖೆ ನಡೆಬೇಕಿರುವ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ಯಾವುದೇ ಸಮಯದಲ್ಲಿ ವಾರೆಂಟ್‌ ಜಾರಿಯಾಗಬಹುದು, ಅವರನ್ನು ಬಂಧಿಸಲೂ ಬಹುದು. ಆಗ ಮುಜುಗರಕ್ಕೀಡಾಗುವ ಬದಲು ಈಗಲೇ ರಾಜೀನಾಮೆ ನೀಡಬೇಕು. ತಾವು ಭ್ರಷ್ಟಾಚಾರ ಸಹಿಸುವುದಿಲ್ಲ ಎನ್ನುವ ಬಿಜೆಪಿಯವರು, ‘ನಾ ಕಾವೂಂಗಾ ನಾ ಕಾನೇ ದೂಂಗಾ’ ಎಂದು ಹೇಳುವ ಪ್ರಧಾನಿ ಮೋದಿ ಅವರು ಈಗಲೇ ಯಡಿಯೂರಪ್ಪ ಅವರ ರಾಜೀನಾಮೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಯಡಿಯೂರಪ್ಪ ಅವರಿಗೆ ಮರ್ಯಾದೆ ಇದ್ದರೆ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಭಂಡತನ ಪ್ರದರ್ಶಿಸಿದರೆ ಬಿಜೆಪಿ ಹೈಕಮಾಂಡ್‌ ಮಧ್ಯೆ ಪ್ರವೇಶಿಸಲಿ. ಎರಡೂ ಆಗದಿದ್ದರೆ ನಾವು ನಮ್ಮ ಪಕ್ಷದಲ್ಲಿ ಚರ್ಚೆ ಮಾಡಿ ಯಡಿಯೂರಪ್ಪ ವಿರುದ್ಧ ಮುಂದಿನ ಹೋರಾಟಕ್ಕೆ ರೂಪರೇಷೆ ರೂಪಿಸುತ್ತೇವೆ. ಯಡಿಯೂರಪ್ಪ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.