ಬೆಂಗಳೂರು(ಡಿ.11):  ರಾಜ್ಯ ಸರ್ಕಾರದ ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ಕಾರ್ಮಿಕ ಕಾನೂನು ತಿದ್ದುಪಡಿಗಳ ವಿರುದ್ಧ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದು ‘ನಾವು ಅಧಿಕಾರಕ್ಕೆ ಬಂದರೆ ಮೂರೂ ತಿದ್ದುಪಡಿ ವಿಧೇಯಕಗಳನ್ನು ಹಿಂಪಡೆಯಲಾಗುವುದು’ ಎಂದು ಘೋಷಿಸಿದ್ದಾರೆ.

ಇದೇ ವೇಳೆ ಸ್ವಾತಂತ್ರ್ಯ ಉದ್ಯಾನವನದ ಬಳಿ ಸಾವಿರಾರು ರೈತರ ಸಮ್ಮುಖದಲ್ಲೇ ‘ಭೂಸುಧಾರಣೆ ತಿದ್ದುಪಡಿ ಮಸೂದೆ ರೈತ ವಿರೋಧಿ ಹಾಗೂ ರೈತರ ಪಾಲಿನ ಮರಣ ಶಾಸನ’ ಎಂದು ಆರೋಪಿಸಿ ವಿಧೇಯಕದ ಪ್ರತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರೈತ ವಿರೋಧಿ ತಿದ್ದುಪಡಿ ಜಾರಿಗೆ ತಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ವಿಧಾನಪರಿಷತ್‌ನಲ್ಲಿ ಇದನ್ನು ಬೆಂಬಲಿಸಿರುವ ಜೆಡಿಎಸ್‌ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ಎಚ್‌.ಡಿ. ಕುಮಾರಸ್ವಾಮಿ ತಮ್ಮ ಬೇನಾಮಿ ಆಸ್ತಿಗಳನ್ನು ರಕ್ಷಿಸಿಕೊಳ್ಳಲು ರೈತ ವಿರೋಧಿ ಭೂ ಸುಧಾರಣೆ ತಿದ್ದುಪಡಿ ಕಾಯಿದೆ ಬೆಂಬಲಿಸಿದ್ದಾರೆ. ಮಣ್ಣಿನ ಮಕ್ಕಳು ಎಂದು ಹೇಳುವ ನಿಮಗೆ ಒಂದೇ ನಾಲಿಗೆ ಇರಬೇಕು. ಮಣ್ಣಿನ ಮಕ್ಕಳು ಎಂದು ಹೇಳಿ ರೈತರ ಬೆನ್ನಿಗೆ ಚೂರಿ ಹಾಕಲು ನಾಚಿಕೆ ಆಗಲ್ಲವೇ’ ಎಂದು ಕುಮಾರಸ್ವಾಮಿ ಅವರನ್ನು ಟೀಕಿಸಿದರು.

ರೈತರ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ

ರೈತರ ಹೋರಾಟ ಇಲ್ಲಿಗೆ ನಿಲ್ಲಬಾರದು. ರಾಜ್ಯಾದ್ಯಂತ ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ ನಡೆಸಬೇಕು. ಒಂದೋ ನಿಮ್ಮ ಜೊತೆಗೆ ನಾವು ಬರುತ್ತೇವೆ, ಇಲ್ಲದಿದ್ದರೆ ನಮ್ಮ ಜೊತೆ ನೀವು ಬನ್ನಿ. ಇಬ್ಬರೂ ಸೇರಿ ಹೋರಾಟ ಮಾಡೋಣ ಎಂದು ರೈತರಿಗೆ ಕರೆ ನೀಡಿದರು.

ಯಡಿಯೂರಪ್ಪ ಅವರೇ ನೀವು ಗುಲಾಮರಾ?:

ಮೂರು ಬಾರಿ ಮುಖ್ಯಮಂತ್ರಿಯಾದಾಗಲೂ ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಮಾಡಿದ ನೀವು ಕೇಂದ್ರದ ಮಾತು ಕೇಳಿಕೊಂಡು ರೈತರ ಹಿತ ಬಲಿ ಕೊಡುತ್ತಿದ್ದೀರಿ. ನೀವು ಗುಲಾಮರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಎಪಿಎಂಸಿ ತಿದ್ದುಪಡಿ, ಭೂ ಸುಧಾರಣೆ ಕಾಯಿದೆ ಸೇರಿದಂತೆ ಯಾವ ಕಾಯಿದೆಗಳೂ ರಾಜ್ಯ ಸರ್ಕಾರ ನೇರವಾಗಿ ತಿದ್ದುಪಡಿಗೆ ಮಂಡಿಸಿಲ್ಲ. ಇವೆಲ್ಲವೂ ರಾಜ್ಯ ಖಾತೆ ವ್ಯಾಪ್ತಿಗೆ ಬಂದರೂ ಕೇಂದ್ರ ಸರ್ಕಾರವು ಇವುಗಳಿಗೆ ತಿದ್ದುಪಡಿ ಮಾಡಿ ಕರಡು ಪ್ರತಿಯೊಂದಿಗೆ ಉತ್ತರ ಕಳುಹಿಸಿ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದರಂತೆ ರಾಜ್ಯ ಸರ್ಕಾರ ರೈತರ ಹಿತಾಸಕ್ತಿ ಮರೆತು ಕೇಂದ್ರದ ತಾಳಕ್ಕೆ ಕುಣಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಕಾಂಗ್ರೆಸ್‌ ನಾಯಕರಾದ ಡಾ.ಜಿ.ಪರಮೇಶ್ವರ್‌, ರಮೇಶ್‌ ಕುಮಾರ್‌, ದಿನೇಶ್‌ ಗುಂಡೂರಾವ್‌, ಯು.ಟಿ.ಖಾದರ್‌, ಜಮೀರ್‌ ಅಹ್ಮದ್‌ ಖಾನ್‌, ಬೈರತಿ ಸುರೇಶ್‌ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ನಾಚಿಕೆ ಆಗಲ್ವಾ ಕುಮಾರಸ್ವಾಮಿ? ನಾಲಿಗೆ ಒಂದೇ ರೀತಿ ಇರಬೇಕು

ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಬೇನಾಮಿ ಆಸ್ತಿಗಳನ್ನು ಉಳಿಸಿಕೊಳ್ಳಲು ರೈತರ ಬೆನ್ನಿಗೆ ಚೂರಿ ಹಾಕಿ ಭೂ ಸುಧಾರಣೆ ಕಾಯಿದೆ ತಿದ್ದುಪಡಿಗೆ ಬೆಂಬಲಿಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಇದೆಂಥಾ ರಾಜಕೀಯ ಎಚ್‌.ಡಿ. ಕುಮಾರಸ್ವಾಮಿ ಅವರೇ? ನಾವು ಮಣ್ಣಿನ ಮಕ್ಕಳು, ರೈತರ ಮಕ್ಕಳು ಅನ್ನೋರೇ ಈ ರೀತಿ ರೈತರ ಬೆನ್ನಿಗೆ ಚೂರಿ ಹಾಕೋದಾ? ನಿಮಗೆ ನಾಚಿಕೆ ಆಗಲ್ಲವೇ ಎಂದೂ ಅವರು ಕಿಡಿ ಕಾರಿದರು. ಕುಮಾರಸ್ವಾಮಿ ಅವರ ಬಳಿಯೇ ಸಾಕಷ್ಟುಬೇನಾಮಿ ಜಮೀನು ಇದೆ. ಜೊತೆಗೆ ಬಿಜೆಪಿ ಸರ್ಕಾರ ಅವರ ಮೇಲಿನ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿದೆ. ಹೀಗಾಗಿ ಬೆಂಬಲಿಸುತ್ತಿದ್ದಾರೆ ಎಂದು ದೂರಿದರು.