ಯಡಿಯೂರಪ್ಪಗೆ ಪ್ರಶಸ್ತಿ ಕೊಟ್ಟಿದ್ದು ಯಾವ ಸಾಧನೆಗೆ: ಸಿದ್ದು
* ಇಂದಿರಾ ಕ್ಯಾಂಟೀನ್ ಮುಚ್ಚಿದ ಸಾಧನೆಗಾ ಬಿಎಸ್‌ವೈಗೆ ಈ ಪ್ರಶಸ್ತಿ ನೀಡಿದ್ದು
* ಲೂಟಿ ಹೊಡೆದಿದ್ದು ಬಿಟ್ಟರೆ ಬಿಜೆಪಿ ಯಾವ ಜನಪರ ಯೋಜನೆ ಮಾಡಿಲ್ಲ
* ಜೆಡಿಎಸ್‌ನಲ್ಲಿ ಜಾತ್ಯಾತೀತ ಎನ್ನುವುದು ಬರೀ ಹೆಸರಿನಲ್ಲಷ್ಟೇ
ಬೆಂಗಳೂರು(ಸೆ.27): ರಾಜ್ಯ ಸರ್ಕಾರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿದ್ದು ಯಾವ ಸಾಧನೆಗೆ? ಬಡವರಿಗೆ ಕಡಿಮೆ ದರದಲ್ಲಿ ಆಹಾರ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ ಮುಚ್ಚಿದ್ದಕ್ಕಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಪ್ರಶ್ನಿಸಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಮುಖಂಡ ಹನುಮಂತೇಗೌಡ, ಮಾಜಿ ಉಪಮೇಯರ್ ಆನಂದ್ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪಕ್ಷದ ಬಾವುಟ ನೀಡಿ ಅವರನ್ನು ಬರಮಾಡಿಕೊಂಡರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಮೂರು ಸಾವಿರ ಕೋಟಿ ರು. ಅನುದಾನ ನೀಡಿದ್ದೆ. ಬಡವರಿಗೆ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೆ. ಆದರೆ, ನಂತರ ಬಂದ ಯಡಿಯೂರಪ್ಪ(BS Yediyurappa) ಸರ್ಕಾರ ಈ ಕ್ಯಾಂಟೀನ್‌ಗೆ ಹಣ ನೀಡಲಿಲ್ಲ. ಇವರೆಲ್ಲಾ ರಾಜಾ ಹುಲಿ ಅಂತೆ, ಅತ್ಯುತ್ತಮ ಶಾಸಕ ಎಂಬ ಪ್ರಶಸ್ತಿ ಬೇರೆ ಸಿಕ್ಕಿದೆ. ಇಂದಿರಾ ಕ್ಯಾಂಟೀನ್ ಮುಚ್ಚಿದ ಸಾಧನೆಗಾ ಅವರಿಗೆ ಈ ಪ್ರಶಸ್ತಿ ನೀಡಿದ್ದು, ಲೂಟಿ ಹೊಡೆದಿದ್ದು ಬಿಟ್ಟರೆ ಬಿಜೆಪಿಯವರು ಯಾವ ಜನಪರ ಯೋಜನೆಗಳನ್ನು ಮಾಡಲಿಲ್ಲ ಎಂದರು.
ಒಂದೇ ಕುಟುಂಬಕ್ಕೆ ಎಷ್ಟು ಅಂತ ಅವಕಾಶ ಕೊಡ್ಬೇಕು? ಬಿಎಸ್‌ವೈಗೆ ಯತ್ನಾಳ್ ಟಾಂಗ್
ಹೆಬ್ಬಾಳ ಶಾಸಕ ಬೈರತಿ ಸುರೇಶ್ ಸದಾ ಕ್ಷೇತ್ರದ ಜನರ ಅಭಿವೃದ್ಧಿಯ ಬಗ್ಗೆ ಚಿಂತಿಸುವ ರಾಜಕಾರಣಿ. ಒಂದು ವೇಳೆ ನಾನು ಮುಖ್ಯಮಂತ್ರಿ ಆಗಿದ್ದಾಗ ಬೈರತಿ ಸುರೇಶ್ ಈ ಕ್ಷೇತ್ರದ ಶಾಸಕರಾಗಿದ್ದರೆ ಸಾಕಷ್ಟುಅನುದಾನ ನೀಡುತ್ತಿದ್ದೆ. ಬಿಜೆಪಿ ಸರ್ಕಾರ ಇಂದು ಬೆಂಗಳೂರಿನ ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡುತ್ತಿಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದು ಇಂದಿರಾ ಕ್ಯಾಂಟೀನ್ ಮತ್ತೆ ತೆರೆಯುತ್ತೇವೆ ಎಂದರು.
ರಕ್ತಕುಡಿವ ರಾಕ್ಷಸರು:
ನಾನು ಮುಖ್ಯಮಂತ್ರಿ ಆಗಿದ್ದಾಗ ನಿರಾಶ್ರಿತರಿಗೆ ವಾರ್ಷಿಕ 3 ಲಕ್ಷ ಮನೆಗಳಂತೆ ಒಟ್ಟು ಐದು ವರ್ಷದಲ್ಲಿ 15 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಬಡವರಿಗೆ ಕಟ್ಟಿಸಿಕೊಟ್ಟಿದ್ದೆ. ಬೆಂಗಳೂರಿನಲ್ಲಿ(Bengaluru) ನಿರಾಶ್ರಿತರಿಗೆ 1 ಲಕ್ಷ ಮನೆ ಕಟ್ಟಿಕೊಡಲು ಆದೇಶ ಮಾಡಿ ಜಮೀನು ನೀಡಿದ್ದೆ. ಆದರೆ, ಈಗಿನ ಸರ್ಕಾರದ ವಸತಿ ಸಚಿವ ಸೋಮಣ್ಣ ಬರೀ ಮಾತು ಬಿಟ್ರೆ ಕೆಲಸವನ್ನೇ ಮಾಡಲ್ಲ. ಎರಡು ವರ್ಷದಲ್ಲಿ ಒಂದಾದ್ರೂ ಮನೆ ಕಟ್ಟಿಸಿದ್ರಾ? ನಾವು ನೀಡಿದ್ದ ಮನೆಯನ್ನೂ ರದ್ದು ಮಾಡಿದ ಜನರ ರಕ್ತ ಕುಡಿಯುವ ರಾಕ್ಷಸರಿವರು ಎಂದರು.
ಜೆಡಿಎಸ್‌ನಲ್ಲಿ(JDS) ಜಾತ್ಯಾತೀತ ಎನ್ನುವುದು ಬರೀ ಹೆಸರಿನಲ್ಲಷ್ಟೇ. ಸಿದ್ಧಾಂತವಾಗಿ ಅಲ್ಲ. ಇದೇ ಕಾರಣಕ್ಕೆ ಹನುಮಂತೇಗೌಡ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್‌ನದು ಅವಕಾಶವಾದಿ ರಾಜಕಾರಣ. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ನಾವು 80 ಶಾಸಕರಿದ್ದರೂ ಅವರಿಗೆ ಬೆಂಬಲ ಕೊಟ್ಟು, ಅವರನ್ನೇ ಮುಖ್ಯಮಂತ್ರಿ ಮಾಡಿದೆವು. ಆದರೂ ಅವರು ತಮ್ಮ ಬುದ್ದಿ ತೋರಿಸಿದರು ಎಂದರು. ಮಾಜಿ ಸಚಿವ ಕೃಷ್ಣಬೈರೇಗೌಡ, ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮೊದಲಾದವರು ಇದ್ದರು.