ಸಿದ್ದು ನನ್ನಣ್ಣ, ಆದ್ದರಿಂದಲೇ ನನಗೆ ಬೆಳೆಯಲು ಬಿಡಲಿಲ್ಲ!| ಮಾಜಿ ಸಿಎಂ ವಿರುದ್ಧ ವಿಶ್ವನಾಥ್‌ ತೀಕ್ಷ್ಣ ವಾಗ್ದಾಳಿ|  ನನಗೆ ಮಂತ್ರಿಗಿರಿ ಮೇಲೆ ಕಣ್ಣಿಲ್ಲ, ಬಿಎಸ್‌ವೈ ನಮ್ಮ ಹೈಕಮಾಂಡ್‌

ಬೆಂಗಳೂರು[ಡಿ.12]: ನಾನು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಣ್ಣ ತಮ್ಮ ಇದ್ದಂತೆ. ಯಾವತ್ತೂ ಅಣ್ಣನನ್ನು ಬೆಳೆಯುವುದಕ್ಕೆ ತಮ್ಮ ಬಿಡುವುದಿಲ್ಲ ಎಂದು ಹುಣಸೂರು ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎಚ್‌.ವಿಶ್ವನಾಥ್‌ ತೀಕ್ಷ$್ಣವಾಗಿ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವಿಬ್ಬರೂ ಕುರುಬ ಸಮುದಾಯದವರು. ಎಂದಿಗೂ ಅಣ್ಣನನ್ನು ತಮ್ಮ ಬೆಳೆಯಲು ಬಿಡುವುದಿಲ್ಲ. ಸಿದ್ದರಾಮಯ್ಯ ಜತೆ ದಾಯಾದಿ ಕಲಹ ಇದ್ದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಇದು ಅಣ್ಣ ತಮ್ಮನ ಕಿತ್ತಾಟ ಎಂದು ಹೇಳಿದರು.

ಚುನಾವಣೆಯಲ್ಲಿ ಸೋಲು ಅನುಭವಿಸಿರಬಹುದು. ಆದರೆ, ನಮ್ಮ ಉದ್ದೇಶ ಗೆದ್ದಿದೆ. ನಮಗೆ ಯಾವುದೇ ಸಚಿವ ಸ್ಥಾನದ ಮೇಲೆ ಕಣ್ಣಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಮಗೆ ಹೈಕಮಾಂಡ್‌ ಆಗಿದ್ದಾರೆ. ರಾಜಕಾರಣ ಮತ್ತು ರಾಜಕಾರಣಿಗಳಿಗೆ ಸಾವಿಲ್ಲ. ಮೂರು ವರ್ಷದಲ್ಲಿ ಮೂರು ಪಕ್ಷ ಬದಲಿಸಿದೆ ಎನ್ನುತ್ತಾರೆ. 40 ವರ್ಷ ಕಾಂಗ್ರೆಸ್‌ನಲ್ಲಿ ಸಕ್ರಿಯನಾಗಿದ್ದೆ. ಬಲವಾದ ಕಾರಣದಿಂದ ಅಯೋಗ್ಯ ಸರ್ಕಾರವನ್ನು ಕಿತ್ತೊಗೆಯಲು ಪಕ್ಷ ಬದಲಿಸಿದೆ. ಸಿದ್ದರಾಮಯ್ಯ ಅವರು ಆರು ಬಾರಿ ಮತ್ತು ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಒಂಭತ್ತು ಬಾರಿ ಪಕ್ಷ ಬದಲಿಸಿದ್ದಾರೆ. ಅವರದು ಪಕ್ಷಾಂತರವಲ್ಲದೇ ಮತ್ತೇನು ಎಂದು ಖಾರವಾಗಿ ಪ್ರಶ್ನಿಸಿದರು.

ಕಾಂಗ್ರೆಸ್‌ ಪಕ್ಷದ ಶಾಸಕಾಂಗ ನಾಯಕತ್ವ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್‌ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಒಳ್ಳೆಯದು. ಪಕ್ಷವನ್ನು ಮುಳುಗಿಸುವವರು ಮುಳುಗುವ ಮುನ್ನ ನಾಯಕತ್ವದಿಂದ ಹೊರಹೋಗಿದ್ದು ಕಾಂಗ್ರೆಸ್‌ನ ಭಾಗ್ಯ. ನನಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಬಗ್ಗೆ ಗೌರವ ಇದೆ. ಆದರೆ, ಆ ಪಕ್ಷದ ನಾಯಕತ್ವದ ಬಗ್ಗೆ ಬೇಸರವಿದೆ ಎಂದರು.