Asianet Suvarna News Asianet Suvarna News

'ಸಿಎಂ, ಆರೋಗ್ಯ ಸಚಿವ ಸುಧಾಕರ್ ಸುಳ್ಳುಗಳಿಗೆ ಈ ಸುತ್ತೋಲೆ ಸಾಕ್ಷಿ'

* ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ
*ಸೋಂಕು ಇಳಿಮುಖ ಬಗ್ಗೆ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ
* ಸುಳ್ಳು ಭರವಸೆ ಬಿತ್ತುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ

Siddaramaiah Hits out at CM BSY and Minister Sudhakar Over Corona testing rbj
Author
Bengaluru, First Published May 22, 2021, 3:05 PM IST

ಬೆಂಗಳೂರು, (ಮೇ.22): ಮಾಜಿ ಸಿಎಂ ​ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ. ಕೊರೋನಾ ಪರೀಕ್ಷೆ ಕಡಿಮೆ ಮಾಡುವ ಮೂಲಕ ಸರ್ಕಾರ ಜನರಲ್ಲಿ ಸುಳ್ಳು ಭರವಸೆ ಬಿತ್ತುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೊರೋನಾ ಪರೀಕ್ಷೆ ಕಡಿಮೆಮಾಡಿ, ಸೋಂಕು ಇಳಿಮುಖವಾಗುತ್ತಿದೆ ಎಂಬ ಸುಳ್ಳು ಭರವಸೆಯನ್ನು ಜನರಲ್ಲಿ ಬಿತ್ತುವ ರಾಜ್ಯ ಸರ್ಕಾರದ ನಿರ್ಧಾರ ಕೊಲೆಗಡುಕತನದ್ದು ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಬಾದಾಮಿ ಬಿಟ್ಟು ಮತ್ತೊಂದು ಮಹಾವಲಸೆಗೆ ಸಿದ್ಧತೆ ನಡೆಸಿದ್ದಾರಾ..? 

ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವ ಕೆ. ಸುಧಾಕರ್ ಸುಳ್ಳುಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರ ಈ ಸುತ್ತೋಲೆ ಸಾಕ್ಷಿ. ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸುಳ್ಳು ಪ್ರಚಾರಕ್ಕೆ ರೋಗ ಲಕ್ಷಣಗಳಿಲ್ಲದವರ (ಅಸಿಂಪ್ಟಾಮ್ಯಾಟಿಕ್ಸ್) ಸೋಂಕು ಪರೀಕ್ಷೆ ಮಾಡಲೇಬಾರದು ಎನ್ನುವ ರಾಜ್ಯ ಸರ್ಕಾರದ ಸುತ್ತೋಲೆ ಕಾರಣ. ಇದರಿಂದಾಗುವ ಅಪಾಯ ಗೊತ್ತೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ.

ರೋಗ ಲಕ್ಷಣಗಳಿಲ್ಲ ಎನ್ನುವ ಕಾರಣಕ್ಕೆ ಪರೀಕ್ಷೆ ಮಾಡದಿರುವ ಒಬ್ಬ ಸೋಂಕಿತ ವ್ಯಕ್ತಿ ತನ್ನ ಸಂಪರ್ಕಕ್ಕೆ ಬರುವ ನಾಲ್ಕಾರು ಮಂದಿಗೆ‌ ಕೊರೋನಾ ಸೋಂಕು ಹರಡುವ ಸಾಧ್ಯತೆ ಇದೆ. ಲಾಕ್ ಡೌನ್ ಹೊರತಾಗಿಯೂ ಕೊರೋನಾ ನಿಯಂತ್ರಣಕ್ಕೆ ಬರದೆ ಇರಲು ರಾಜ್ಯ ಸರ್ಕಾರದ ಈ ಮೂರ್ಖ ನಿರ್ಧಾರ ಕಾರಣ. ಮೇ ಮೊದಲ ವಾರದಲ್ಲಿ 49,000 ದಷ್ಟಿದ್ದ ಕೊರೊನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್ ಹೇರಿದ ಕೆಲವೇ ದಿನಗಳಲ್ಲಿ 38,000ಕ್ಕೆ ಇಳಿಯಿತು ಎಂದು ಮುಖ್ಯಮಂತ್ರಿಗಳು ಕೊಚ್ಚಿಕೊಂಡರು. ಆದರೆ, ಏಪ್ರಿಲ್ ಒಂದರಂದು
ನಡೆದಿದ್ದ 1,77,560 ಕೊರೋನಾ ಪರೀಕ್ಷೆ, ಮೇ 17ಕ್ಕೆ 97000ಕ್ಕೆ ಕುಸಿದಿರುವುದನ್ನು‌ ಮಾತ್ರ ಅವರು ಹೇಳಿಲ್ಲ ಎಂದರು.

ಸುಳ್ಳು ಲೆಕ್ಕದಿಂದ ಜನರ ದಾರಿತಪ್ಪಿಸುವ ಕೀಳುಬುದ್ದಿಯನ್ನು ಬಿಟ್ಟು, ತಕ್ಷಣ ಮುಖ್ಯಮಂತ್ರಿ ಅವರು ರೋಗಲಕ್ಷಣಗಳಿಲ್ಲದವರ ಕೊರೋನಾ ಪರೀಕ್ಷೆ‌ ಮಾಡುವ ಅಭಿಯಾನವನ್ನು ಪುನರಾರಂಭಿಸಬೇಕೆಂದು‌ ಒತ್ತಾಯಿಸುತ್ತೇನೆ. ಕೊರೋನಾವನ್ನು‌ ಔಷದಿ-ಚಿಕಿತ್ಸೆಯ ಮೂಲಕ ಎದುರಿಸಬೇಕೇ ಹೊರತು ಸುಳ್ಳು - ಮೋಸಗಳ ಫೇಕುಗಿರಿಯಿಂದ ಅಲ್ಲ ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. 

Follow Us:
Download App:
  • android
  • ios