Asianet Suvarna News Asianet Suvarna News

Bitcoin: ಮೋದಿ ಜತೆ ಬ್ಯಾಂಕ್ ಲೂಟಿಕೋರ ಫೋಟೋ ಹೇಗೆ ವ್ಯಾಖ್ಯಾನಿಸುವುದು? ಸಿದ್ದು ಗುದ್ದು

* ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರೋ ಬಿಟ್ ಕಾಯಿನ್
* ಆರೋಪಿ ಗೆಳೆಯನ ಜತೆಗಿರುವ ಸಿದ್ದರಾಮಯ್ಯ ಪುತ್ರನ ಫೋಟೋ ಬಿಡುಗಡೆ
* ಬಿಜೆಪಿಯ ಫೋಟೋಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ

Siddaramaiah hits back at BJP Over Rakesh Photo Revel With Bitcoin accused friend rbj
Author
Bengaluru, First Published Nov 18, 2021, 5:54 PM IST

ಬೆಂಗಳೂರು, (ನ.18): ಬಿಟ್ ಕಾಯಿನ್ ಹಗರಣ (Bitcoin Scam) ರಾಜ್ಯದಲ್ಲಿ ಅನೇಕ ಗೊಂದಲ, ತಿರುವುಗಳನ್ನು ನೀಡುತ್ತಿದೆ. ದಿನದಿಂದ ದಿನಕ್ಕೆ ಈ ಪ್ರಕರಣದಲ್ಲಿ ರಾಜಕಾರಣಿಗಳು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಸದ್ಯ ಬಿಟ್ ಕಾಯಿನ್ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಬಿಜೆಪಿ (BJP) ಟಾರ್ಗೆಟ್ ಮಾಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್(Tweet) ಮಾಡಿದೆ. 

ಒಂದಷ್ಟು ಚಿತ್ರಗಳಿವೆ, ಅದನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ' ಎಂದಿರುವ ಬಿಜೆಪಿ ಸಿದ್ದರಾಮಯ್ಯ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ (Rakesh Siddaramaiah) ಅವರು ಕೆಲವರ ಜೊತೆಗೆ ಇದ್ದ ಫೋಟೋಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ಇದೀಗ ಸಿದ್ದರಾಮಯ್ಯ ಸಹ ಪ್ರತಿಕ್ರಿಯಿಸಿದ್ದು, ಅವರು ಸಹ ಒಂದು ಫೋಟೋ ಬಿಟ್ಟು ತಿರುಗೇಟು ಕೊಟ್ಟಿದ್ದಾರೆ. 

ಬಿಟ್‌ ಕಾಯಿನ್ ಹಗರಣ ಆರೋಪಿ ಜತೆ ರಾಕೇಶ್ ಸಿದ್ದರಾಮಯ್ಯ: ಫೋಟೋ ಬಿಡುಗಡೆ ಮಾಡಿದ ಬಿಜೆಪಿ

ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ (facebook) ನರೇಂದ್ರ ಮೋದಿ (Narendra Modi) ಜತೆಗಿರೋ ಒಬ್ಬ ವ್ಯಕ್ತಿಯ ಫೋಟೋವನ್ನು ಮಾರ್ಕ್‌ ಮಾಡಿ ಹಂಚಿಕೊಂಡು, ಕೆಲ ಅಂಶಗಳನ್ನ ಹಂಚಿಕೊಂಡಿದ್ದಾರೆ. ಅದು ಈ ಕೆಳಗಿನಂತಿದೆ.

ರಾಕೇಶ್ ಫೋಟೋ ಬಿಟ್ಟ ಬಿಜೆಪಿಗೆ ಸಿದ್ದು ಗುದ್ದು 
ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಬಿಜೆಪಿ ಪಕ್ಷ ಅಗಲಿ ಹೋಗಿರುವ ನನ್ನ‌ ಮಗನ ಹೆಸರನ್ನು ಎಳೆದು ತಂದಿದೆ. ಸರಿ.. 

ನಮ್ಮ ಸರ್ಕಾರದ ಅವಧಿಯನ್ನೂ ಸೇರಿಸಿ ಬಿಟ್ ಕಾಯಿನ್ ಹಗರಣವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ‌ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಬಿಜೆಪಿಯವರೇ ತನಿಖೆಗೆ ಒಪ್ಪಿಸಬೇಕು. ನಾವು ತಪ್ಪಿತಸ್ಥರೋ? ಬಿಜೆಪಿಯವರು ತಪ್ಪತಸ್ಥರೋ? ಎಂದು ತನಿಖೆಯಾಗಿ, ಸತ್ಯ ಗೊತ್ತಾಗಲಿ.

ನನ್ನ ಮಗ ರಾಕೇಶ್ ನಮ್ಮನಗಲಿ ಐದು ವರ್ಷಗಳಾಗಿವೆ, ಪುತ್ರಶೋಕ ನಿರಂತರ. ತನ್ನ ಮೇಲಿನ ಆರೋಪಕ್ಕೆ  ಆತ ಪ್ರತಿಕ್ರಿಯಿಸಲೂ ಸಾಧ್ಯವಿಲ್ಲ.
ಇಂತಹ ಸಮಯದಲ್ಲಿ ಬಿಜೆಪಿ ಪಕ್ಷ ನನ್ನ ದಿವಂಗತ ಮಗನ ಹೆಸರನ್ನು ಎಳೆದು ರಾಜಕೀಯ ಮಾಡಲು  ಹೊರಟಿರುವುದು  "ಅತ್ಯಂತ ವೈಯಕ್ತಿಕ‌ ಮತ್ತು ಕ್ಷುಲಕತನದ' ರಾಜಕಾರಣ. 

ರಾಕೇಶ್ ಜೊತೆಗೆ ಬಿಟ್‌ಕಾಯಿನ್ ಹಗರಣದ ಆರೋಪಿ ಶ್ರೀಕೃಷ್ಣನ ಗೆಳೆಯ ಹೇಮಂತ್ ಮುದ್ದಪ್ಪ ಇದ್ದಾನೆ ಎಂದು ಬಿಜೆಪಿ ಆರೋಪಿಸಿದೆ.
ಹಾಗಿದ್ದರೆ 2018ರಲ್ಲಿ ದಾವೋಸ್ ನಲ್ಲಿ‌ ನಡೆದ ವಿಶ್ವ ಆರ್ಥಿಕ‌ ಶೃಂಗ ಸಭೆಯಲ್ಲಿ‌ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿರುವ ಬ್ಯಾಂಕ್ ಲೂಟಿಕೋರ ನೀರವ್ ಮೋದಿಯ ಪೋಟೊವನ್ನು ಹೇಗೆ ವ್ಯಾಖ್ಯಾನಿಸುವುದು? 

ಶ್ರೀಕೃಷ್ಣನ ಜೊತೆ ಬಂಧನಕ್ಕೊಳಗಾದ ಹೇಮಂತ್ ಮುದ್ದಪ್ಪನ ಬಿಡುಗಡೆಗಾಗಿ ಪೊಲೀಸರ ಜೊತೆ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಸಂಧಾನ ಮಾಡಿದ್ದು,ಆ ಸೇವೆಗಾಗಿ ಆರೋಪಿಯಿಂದ ಆ ಬಿಜೆಪಿ ನಾಯಕ ಬಿಟ್ ಕಾಯಿನ್ ಪಡೆದಿದ್ದ ಎಂಬ ಆರೋಪ ಇದೆ. ಆ ನಾಯಕ ಯಾರೆಂದು‌ ನಳಿನ್ ಕುಮಾರ್ ಕಟೀಲ್ ಅವರಿಗೆ ಗೊತ್ತಿರಬಹುದೇನೋ? 

ನನ್ನ ಕೈಯಲ್ಲಿ ಪುರಾವೆಗಳಿಲ್ಲದ ಕಾರಣ ನಾನು ಇಲ್ಲಿಯ ವರೆಗೆ ಯಾರ ವಿರುದ್ಧವೂ ನೇರ ಆರೋಪ ಮಾಡಿಲ್ಲ. ಬಿಜೆಪಿ ಸರ್ಕಾರವೇ ಸಲ್ಲಿಸಿರುವ ಆರೋಪ‌ ಪಟ್ಟಿಯಲ್ಲಿರುವ ವಿಷಯವನ್ನಷ್ಟೇ ಹೇಳುತ್ತಿದ್ದೇನೆ. ಈ ವರೆಗಿನ ಪೊಲೀಸರ ತನಿಖೆ ಯಾರೋ ಪ್ರಭಾವಿಗಳನ್ನು ರಕ್ಷಿಸಲು ನಡೆಸಿರುವ ನಾಟಕದಂತಿದೆ. ನಮ್ಮ ಬುಟ್ಟಿಯಲ್ಲಿ ಹಾವು ಇಲ್ಲ‌ ಎಂದಾದರೆ ಬಿಜೆಪಿ ನಾಯಕರು ಯಾಕೆ ಹಾವು ಕಂಡ ಹಾಗೆ ಬೆಚ್ಚಿ ಬೀಳುತ್ತಿದ್ದಾರೆ?

ಯಾಕೆ ಸರತಿ‌ ಸಾಲಲ್ಲಿ ನಿಂತು ಹೆಗಲು‌ ಮುಟ್ಟಿ ನೋಡಿಕೊಂಡು " ಸರ್ಕಾರ ತಪ್ಪು‌ ಮಾಡಿಲ್ಲ, ನಾವೆಲ್ಲ ನಿರಪರಾಧಿಗಳು' ಎಂದು ಎದೆ ಬಡಿದು ಕೊಳ್ಳುತ್ತಿದ್ದಾರೆ?

ಬಿಟ್ ಕಾಯಿನ್ ಹಗರಣದಲ್ಲಿ‌ ಬಿಜೆಪಿ  ನಾಯಕರ ಮಕ್ಕಳ ಹೆಸರೂ ಕೇಳಿ ಬರುತ್ತಿವೆ. ಪುರಾವೆಗಳಿಲ್ಲದೆ‌ ಕುಟುಂಬದ ಸದಸ್ಯರ ಹೆಸರು ಎಳೆದು ತರಬಾರದೆಂದು ಸುಮ್ಮನಿದ್ದೇನೆ. ಬಿಜೆಪಿ ನಾಯಕರು ಜೇನು ಗೂಡಿಗೆ ಕಲ್ಲೆಸೆಯುತ್ತಿದ್ದಾರೆ. ಕೆರಳಿದ ಜೇನು ನೊಣಗಳು ಯಾರಿಗೆಲ್ಲ‌ ಕಚ್ಚಲಿದೆಯೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

Follow Us:
Download App:
  • android
  • ios