ಪ್ರಶ್ನೆ ಮಾಡಿದ್ದು RSS ಎಂಬ ಸಂಸ್ಥೆಯನ್ನ, ಬಿಜೆಪಿ ನಾಯಕರು ಏಕೆ ಎದೆ ಬಡಿದುಕೊಳ್ಳುತ್ತಿದ್ದಾರೆ?

* ಪ್ರಶ್ನೆ ಮಾಡಿದ್ದು RSS ಎಂಬ ಸಂಸ್ಥೆಯನ್ನು
* ಬಿಜೆಪಿ ನಾಯಕರು ಏಕೆ  ಎದೆ ಬಡಿದುಕೊಳ್ಳುತ್ತಿದ್ದಾರೆ? 
* ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಗುದ್ದು

Siddaramaiah Hits Back at BJP Leaders Over RSS Statements rbj

ಬೆಂಗಳೂರು, (ಮೇ.28): ರಾಷ್ಟ್ರೀಯ ಸ್ವಯಂ ಸೇವಕ ಸಂಘ ( ಆರ್‌ಎಸ್‌ಎಸ್‌) ಮೂಲವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆದಕಿದ್ದು, ಇದೀಗ ಬಿಜೆಪಿ ಮುಖಂಡರ ಕೆಂಗಣ್ಣಿಗೆ ಕಾರಣವಾಗಿದೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡರು ಮುಗಿಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವಾಗ್ದಾಳಿ ನಡೆಸುತ್ತಿದ್ದಾರೆ. 

ಇದಕ್ಕೆ ಸಿದ್ದರಾಮಯ್ಯ ಸಹ ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ ನಾಯಕರಿಗೆ ಗುದ್ದು ಕೊಟ್ಟಿದ್ದಾರೆ. ನಾನು ಪ್ರಶ್ನೆ ಮಾಡಿದ್ದು ಆರ್.ಎಸ್.ಎಸ್ ಎಂಬ ಸಂಸ್ಥೆಯನ್ನು, ಬಿಜೆಪಿ ನಾಯಕರು ಯಾಕೆ ಎದೆ ಬಡಿದುಕೊಳ್ಳುತ್ತಿದ್ದಾರೆ? ಅಂತೆಲ್ಲಾ ಪ್ರಶ್ನೆ ಮೂಲಕ ಗುದ್ದು ಕೊಟ್ಟಿದ್ದಾರೆ.

ಸಿದ್ದರಾಮಯ್ಯ ತಿರುಗೇಟು
ನಾನು ಪ್ರಶ್ನೆ ಮಾಡಿದ್ದು ಆರ್.ಎಸ್.ಎಸ್ ಎಂಬ ಸಂಸ್ಥೆಯನ್ನು, ಉತ್ತರಿಸುತ್ತಿರುವವರು ಬಿಜೆಪಿ ನಾಯಕರು. ಇವರು ಯಾಕೆ ಎದೆ ಬಡಿದುಕೊಳ್ಳುತ್ತಿದ್ದಾರೆ?  ಆರ್.ಎಸ್.ಎಸ್ ನಾಯಕರು ಓದು-ಬರಹ ಗೊತ್ತಿಲ್ಲದವರೇ? ಅವರೇ ಉತ್ತರಿಸಲಿ.

ಹಿಂದೂ ಧರ್ಮದ ರಕ್ಷಣೆಗಾಗಿಯೇ ಅವತಾರ ಎತ್ತಿ ಬಂದಂತೆ ಮಾತನಾಡುತ್ತಿರುವ ಆರ್.ಎಸ್.ಎಸ್ ನಾಯಕರು ಬೆಂಬಲಿಸುತ್ತಿರುವುದು ಮಾತ್ರ ಬಿಜೆಪಿ ಎಂಬ ರಾಜಕೀಯ ಪಕ್ಷವನ್ನು. ಯಾಕೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ? ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೆಂದು ಯಾವ ಆಧಾರದಲ್ಲಿ ಆರ್.ಎಸ್.ಎಸ್ ತೀರ್ಮಾನಿಸಿದೆ? ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಆಗಲು ಹೊಂದಿರಬೇಕಾದ ಅರ್ಹತೆಗಳೇನು? ಎಂದು ಪ್ರಶ್ನಿಸಿದರು.

'ಹೊರಗಿನಿಂದ ಬಂದವರು... 'ಆರೆಸ್ಸೆಸ್‌ ಮೂಲ ಕೆದಕಿದ ಸಿದ್ದರಾಮಯ್ಯ

ಆರ್.ಎಸ್.ಎಸ್ ಪ್ರತಿಪಾದಿಸುವ ಹಿಂದೂ ಧರ್ಮದಲ್ಲಿ ದಲಿತರು, ಹಿಂದುಳಿದ ಜಾತಿಗಳ ಸ್ಥಾನಮಾನ ಏನು? ಆರ್.ಎಸ್.ಎಸ್ ಯಾಕೆ ಮೀಸಲಾತಿ, ಭೂಸುಧಾರಣೆಯನ್ನು ವಿರೋಧಿಸುತ್ತಾ ಬಂದಿದೆ? ಇದರ ಫಲಾನುಭವಿಗಳು ಹಿಂದುಗಳು ಅಲ್ಲವೇ?
ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಆಗಲೂ 40% ಕಮಿಷನ್ ಹೊಡೆಯಬೇಕಾ? ಬ್ಲೂ ಫಿಲ್ಮ್ ನೋಡಬೇಕಾ? ಗಣಿ ಲೂಟಿ ಮಾಡಬೇಕಾ? ಚೆಕ್ ನಲ್ಲಿ ದುಡ್ಡು ಪಡೆದು ಜೈಲಿಗೆ ಹೋಗಬೇಕಾ? ರೇಪ್ ಮಾಡಬೇಕಾ? ಏನು ಮಾಡಬೇಕು? ಹೇಳಿಬಿಡಿ.

ಹಸಿದ ಹೊಟ್ಟೆಗೆ ಅನ್ನ, ಎಳೆಯ ಮಕ್ಕಳಿಗೆ ಹಾಲು, ರೈತರ ಬೆಳೆಗೆ ನ್ಯಾಯದ ಬೆಲೆ, ಯುವಜನರಿಗೆ ಉದ್ಯೋಗ, ಅವಕಾಶ ವಂಚಿತರಿಗೆ ಸಮಾನ ಅವಕಾಶ, ಜಾತಿ ತಾರತಮ್ಯದಿಂದ ಅನ್ಯಾಯಕ್ಕೀಡಾದವರಿಗೆ ಸಾಮಾಜಿಕ ನ್ಯಾಯ.. ಹಿಂದೂ ಆಗಲು ಇಷ್ಟು ಅರ್ಹತೆ ಸಾಲದೇ?
ಹಿಂದೂಗಳೆಲ್ಲ ಒಂದು ಎಂದು ಕಂಠಶೋಷಣೆ ಮಾಡುತ್ತಿರುವ ಆರ್.ಎಸ್.ಎಸ್ ತನ್ನ ಸಂಘಟನೆಯ ಪದಾಧಿಕಾರಗಳನ್ನೆಲ್ಲಾ ಯಾಕೆ ಒಂದು ಜಾತಿಗೆ ಮೀಸಲಿಟ್ಟಿದೆ? ಆರ್.ಎಸ್.ಎಸ್ ನ ಪದಾಧಿಕಾರಿಗಳಲ್ಲಿ ಎಷ್ಟು ಮಂದಿ ದಲಿತರು, ಹಿಂದುಳಿದ ಜಾತಿಯವರಿದ್ದಾರೆ? ಎಂದು ಟಾಂಗ್ ಕೊಟ್ಟರು.

ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಧರ್ಮದ ವ್ಯಾಖ್ಯಾನ ಏನು? ಹಿಂದೂ ಆಗಲು ಹಿಂದೂ ತಂದೆ-ತಾಯಿ ಹೊಟ್ಟೆಯಲ್ಲಿ ಹುಟ್ಟಿದರೆ ಸಾಕಾ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷದ ಸದಸ್ಯರಾಗಬೇಕಾ? ಹಿಂದೂಗಳೆಲ್ಲ ಒಂದು ಎಂದು ಕಂಠ ಶೋಷಣೆ ಮಾಡುತ್ತಿರುವ ಆರ್.ಎಸ್.ಎಸ್ ಯಾಕೆ ಹಿಂದೂ ಧರ್ಮದ ಅನಿಷ್ಠಗಳಾದ ಅಸ್ಪೃಶ್ಯತೆ, ಅಸಮಾನತೆ, ಮೂಢ ನಂಬಿಕೆ, ಕಂದಾಚಾರಗಳ ಬಗ್ಗೆ ಮಾತನಾಡುತ್ತಿಲ್ಲ? ಹಿಂದೂ ಧರ್ಮದೊಳಗಿನ ಅನಿಷ‍್ಠಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ನನ್ನಂತಹವರು ಹಿಂದೂ ವಿರೋಧಿ ಆಗುವುದಾದರೆ? ಇದೇ ಕೆಲಸ ಮಾಡಿರುವ ಸ್ವಾಮಿ ವಿವೇಕಾನಂದ, ಕನಕದಾಸ, ನಾರಾಯಣ ಗುರುಗಳನ್ನು ಏನೆಂದು ಕರೆಯುತ್ತೀರಿ? ಎಂದಿದ್ದಾರೆ.

ಆರ್.ಎಸ್.ಎಸ್ ನಾಯಕರೇ ನಿಮ್ಮ ಆತ್ಮವನ್ನು ಸಾಕ್ಷಿಯಾಗಿಟ್ಟುಕೊಂಡು ಹೇಳಿಬಿಡಿ. ನಿಮ್ಮ ನಿಷ್ಠೆ ರಾಷ್ಟ್ರಧ್ವಜಕ್ಕೋ? ಭಗವಾ ಧ್ವಜಕ್ಕೋ? ನಿಮ್ಮ ನಿಷ್ಠೆ ಸಂವಿಧಾನಕ್ಕೋ ? ಮನುಸ್ಮೃತಿಗೋ? ನಿಮ್ಮ ನಿಷ್ಠೆ ಗಾಂಧೀಜಿಗೋ? ಗೋಡ್ಸೆಗೋ? ಆರ್.ಎಸ್.ಎಸ್ ನಾಯಕರೇ, ಈ ರಿಮೋಟ್ ಕಂಟ್ರೋಲ್ ರಾಜಕೀಯ ಬಿಟ್ಟು ಬಿಡಿ. ನಿಮ್ಮ ತತ್ವ-ಸಿದ್ದಾಂತದ ಬಗ್ಗೆ ಅಷ್ಟೊಂದು ವಿಶ್ವಾಸ ನಿಮಗಿದ್ದರೆ ಈ ಹಿಂಬಾಗಿಲ ರಾಜಕೀಯ ಮಾಡದೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಡಿ, ಗೆಲುವು ಕೋಮುವಾದದ್ದೋ? ಜಾತ್ಯತೀತತೆಯದ್ದೋ? ನೋಡಿಯೇ ಬಿಡೋಣ ಎಂದು ಸವಾಲು ಹಾಕಿದ್ದಾರೆ.

Latest Videos
Follow Us:
Download App:
  • android
  • ios