ಸಚಿವ ಸಂಪುಟ ಅನುಮೋದನೆ ನೀಡಿದ ಭಾಷಣವನ್ನು ಜಂಟಿ ಅಧಿವೇಶನದಲ್ಲಿ ಓದದ ರಾಜ್ಯಪಾಲರ ನಡೆ ಸಂವಿಧಾನ ವಿರೋಧಿಯಾಗಿದ್ದು, ಈ ಕುರಿತು ಸಚಿವರೊಂದಿಗೆ ಚರ್ಚಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರು : ಸಚಿವ ಸಂಪುಟ ಅನುಮೋದನೆ ನೀಡಿದ ಭಾಷಣವನ್ನು ಜಂಟಿ ಅಧಿವೇಶನದಲ್ಲಿ ಓದದ ರಾಜ್ಯಪಾಲರ ನಡೆ ಸಂವಿಧಾನ ವಿರೋಧಿಯಾಗಿದ್ದು, ಈ ಕುರಿತು ಸಚಿವರೊಂದಿಗೆ ಚರ್ಚಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಸರ್ಕಾರ ನೀಡಿದ ಭಾಷಣ ಓದದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಡೆಯನ್ನು ಗುರುವಾರ ತೀವ್ರವಾಗಿ ಖಂಡಿಸಿರುವ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವರ್ಷದ ಮೊದಲ ಅಧಿವೇಶನ ವಿಧಾನಮಂಡಲದ ಜಂಟಿ ಅಧಿವೇಶನವಾಗಿರಲಿದೆ. ಈ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣ ಓದಬೇಕು. ಆದರೆ, ರಾಜ್ಯಪಾಲರು ಭಾಷಣ ಓದದೇ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿದ್ದಾರೆ. ರಾಜ್ಯಪಾಲರ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾಷಣ ರಾಜ್ಯಪಾಲರ ಕರ್ತವ್ಯ:
ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವುದು ಸಂವಿಧಾನ ಅಡಿ ರಾಜ್ಯಪಾಲರ ಕರ್ತವ್ಯ. ಸಂವಿಧಾನದ ಕಲಂ 176 ಮತ್ತು 163 ಅಡಿ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿರುವ ಭಾಷಣ ಓದಲೇಬೇಕೆಂಬ ನಿಯಮವಿದ್ದು, ರಾಜ್ಯಪಾಲರು ಸಿದ್ಧಪಡಿಸಿಕೊಂಡ ಭಾಷಣ ಓದುವಂತಿಲ್ಲ. ಅದೇ ರೀತಿ ಈ ಬಾರಿಯ ಜಂಟಿ ಅಧಿವೇಶನದಲ್ಲೂ ರಾಜ್ಯಪಾಲರು ಭಾಷಣ ಮಾಡಬೇಕಿತ್ತು. ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದು ಮಾಡಿ, ವಿಬಿ ಜಿ ರಾಮ್ ಜಿ ಯೋಜನೆ ಜಾರಿ ಮಾಡಿರುವುದಕ್ಕೆ ಸರ್ಕಾರದ ತೀವ್ರ ವಿರೋಧವಿದೆ ಎಂದರು.
ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯವಿಲ್ಲ ಹಾಗೂ ಕೇಂದ್ರದ ಕಾಯ್ದೆಗಳನ್ನು ಸಹಕರಿಸಲೇಬೇಕೆಂಬ ನೀತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ, ಆಡಳಿತ ಪಕ್ಷವಾಗಿ ನಮಗೆ ಅದರ ಬಗ್ಗೆ ವಿರೋಧವಿದ್ದು, ಆ ವಿಚಾರಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು. ಆದರೆ, ಕೇಂದ್ರದ ತಪ್ಪು ಮರೆಮಾಚುವಂತೆ ರಾಜ್ಯಪಾಲರು ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯಪಾಲರ ನಡೆಗೆ ಪ್ರತಿಭಟನೆ:
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಅವರ ನಡೆ ವಿರುದ್ಧ ನಮ್ಮ ಪಕ್ಷ ಮತ್ತು ಸರ್ಕಾರ ಪ್ರತಿಭಟನೆ ಮಾಡುತ್ತದೆ. ಇಡೀ ರಾಜ್ಯದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ರಾಜ್ಯಪಾಲರು ಬೇರೆ ಭಾಷಣ ಓದಿರುವುದು ಸಂವಿಧಾನ ಬಾಹಿರ ಕೃತ್ಯ. ಅವರು ತಮ್ಮ ಕರ್ತವ್ಯ ಪಾಲನೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಚರ್ಚಿಸಿ ಕಾನೂನು ರೀತಿ ಕ್ರಮ:
ರಾಜ್ಯಪಾಲರ ನಡೆ ಕುರಿತು ಕಾನೂನು ಹೋರಾಟದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸರ್ಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯನ್ನು ಎಲ್ಲ ಶಾಸಕರಿಗೆ ವಿತರಿಸಲಾಗಿದೆ. ಅದನ್ನು ಓದದ ರಾಜ್ಯಪಾಲರ ನಡೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವ ಬಗ್ಗೆ ಚರ್ಚಿಸಲಾಗುವುದು. ನಂತರ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನರೇಗಾ ಮರುಸ್ಥಾಪನೆಗೆ ಹೋರಾಟ: ಸಿದ್ದು
ಮನರೇಗಾ ಕಾಯ್ದೆ ಮರುಸ್ಥಾಪನೆ ಮತ್ತು ವಿಬಿ ಜಿ ರಾಮ್ ಜಿ ಕಾಯ್ದೆ ರದ್ದು ಮಾಡಬೇಕೆನ್ನುವುದು ನಮ್ಮ ಉದ್ದೇಶ. ನಮ್ಮ ಪಕ್ಷ ಮತ್ತು ಸರ್ಕಾರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಮನರೇಗಾ ಮರುಸ್ಥಾಪನೆ ಮಾಡುವವರೆಗೆ ನಿರಂತರವಾಗಿ ಹೋರಾಟ ಮಾಡುತ್ತೇವೆ. ಈ ಹಿಂದೆ ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆದಂತೆ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೆ ಹೋರಾಟ ನಡೆಯಲಿದೆ. ಮನರೇಗಾ ರದ್ದು ಮಾಡಿ, ಹೊಸ ಕಾಯ್ದೆ ಜಾರಿ ಮಾಡಿರುವ ಮೂಲಕ ಗ್ರಾಮೀಣ ಜನರ, ಮಹಿಳೆಯರ ಉದ್ಯೋಗ ಹಕ್ಕು ಕೇಂದ್ರ ಸರ್ಕಾರ ಕಸಿದಿದೆ. ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಕೆಲಸದ ಭರವಸೆಯಿಲ್ಲ. ಇದು ಜನರ ಉದ್ಯೋಗದ ಹಕ್ಕಿಗೆ ಮಾರಕ ಎಂದು ಸಿದ್ದರಾಮಯ್ಯ ತಿಳಿಸಿದರು.
- ಕೇಂದ್ರದ ಗೊಂಬೆಯಂತೆ ಗೆಹಲೋತ್ ವರ್ತನೆ
- ಸಚಿವರ ಜೊತೆ ಚರ್ಚಿಸಿ ಕಾನೂನು ಹೋರಾಟ
- ರಾಜ್ಯ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನೇ ರಾಜ್ಯಪಾಲರಾದವರು ಸದನದಲ್ಲಿ ಓದಬೇಕು
- ರಾಜ್ಯ ಸರ್ಕಾರದ ಭಾಷಣವನ್ನು ರಾಜ್ಯಪಾಲರು ಓದದೇ ಇರುವುದು ಸಂವಿಧಾನಬಾಹಿರವಾದ ಕೃತ್ಯ
- ರಾಜ್ಯಪಾಲರು ತಮ್ಮ ಕರ್ತವ್ಯ ಪಾಲನೆ ಮಾಡದೆ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ
- ಅವರ ನಡೆಯ ವಿರುದ್ಧ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರಗಳು ಪ್ರತಿಭಟನೆ ಮಾಡುತ್ತವೆ: ಸಿದ್ದರಾಮಯ್ಯ


