ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿರುವ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ‘ಡಿಕೆಶಿ ದೆಹಲಿಗೆ ಹೋದರೆ ಹೋಗಲಿ. ಬೇಡ ಅಂದವರು ಯಾರು’ ಎಂದಿದ್ದಾರೆ.
ಮಂಗಳೂರು (ಡಿ.04): ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿರುವ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ‘ಡಿಕೆಶಿ ದೆಹಲಿಗೆ ಹೋದರೆ ಹೋಗಲಿ. ಬೇಡ ಅಂದವರು ಯಾರು’ ಎಂದಿದ್ದಾರೆ. ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಗುರು- ಗಾಂಧಿ ಸಂವಾದ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೆಹಲಿಗೆ ಹೋಗಲ್ಲ. ನಾನು ಕರೆದರೆ ಮಾತ್ರ ಹೋಗೋದು. ಆದರೆ ನನ್ನನ್ನು ಈವರೆಗೆ ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದು- ಕೆಸಿವಿ ಮಾತುಕತೆ: ಕಾರ್ಯಕ್ರಮಕ್ಕೂ ಮೊದಲು ಮಂಗಳೂರು ವಿವಿಯ ಕಾವೇರಿ ಗೆಸ್ಟ್ ಹೌಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತುಕತೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ವೇಣುಗೋಪಾಲ್ ಜತೆ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮ ಮುಗಿಸಿ ಕಾವೇರಿ ಗೆಸ್ಟ್ ಹೌಸ್‌ನಲ್ಲಿ ಸಿಎಂ, ಸಚಿವರು, ವೇಣುಗೋಪಾಲ್ ಅವರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಪ್ರವೇಶವಿರಲಿಲ್ಲ. ರಾಜ್ಯ ರಾಜಕಾರಣ, ಸಂಬಂಧಿಸಿದ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು ಎಂದು ತಿಳಿದುಬಂದಿದೆ. ಊಟ ಮುಗಿಸಿ ಕೆ.ಸಿ. ವೇಣುಗೋಪಾಲ್ ಅವರು ಕಾಸರಗೋಡಿಗೆ ಪ್ರಯಾಣಿಸಿದರೆ, ಸಿಎಂ ಹಾಗೂ ಇತರ ಸಚಿವರು ಸ್ಥಳೀಯ ಇನ್ನೊಂದು ಕಾರ್ಯಕ್ರಮಕ್ಕೆ ಹಾಜರಾದರು.
ಅಧಿಕಾರ ಹೈಕಮಾಂಡ್ ತೀರ್ಮಾನ: ಜಾರಕಿಹೊಳಿ
ಸಿಎಂ ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಕಾರ್ಯಕ್ರಮಕ್ಕೆ ಬಂದಿದ್ದಾರಷ್ಟೇ. ಯಾವುದೇ ರಾಜಕೀಯ ಮಾತುಕತೆ ಆಗಿಲ್ಲ. ಯಾವತ್ತಿದ್ದರೂ ಅಧಿಕಾರ ಬಿಡಬೇಕು. ಹತ್ತು ವರ್ಷದ ನಂತರವಾದರೂ ಬಿಡಬೇಕು. ಅಧಿಕಾರ ಶಾಶ್ವತ ಅಲ್ಲ. ಯಾವಾಗ ಅಧಿಕಾರ ಬಿಡಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.


