‘ಮೇಕ್ ಇನ್ ಇಂಡಿಯಾ’ ನಿಜವಾಗಿಯೂ ಯಶಸ್ವಿಯಾಗಿದ್ದರೆ ಬಿಜೆಪಿಯ ‘ಡಬಲ್-ಎಂಜಿನ್’ ರಾಜ್ಯಗಳು ಕರ್ನಾಟಕ ಸಾಧಿಸಿದ್ದನ್ನು ಸಾಧಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಡಿ.27): ‘ಮೇಕ್ ಇನ್ ಇಂಡಿಯಾ’ ನಿಜವಾಗಿಯೂ ಯಶಸ್ವಿಯಾಗಿದ್ದರೆ ಬಿಜೆಪಿಯ ‘ಡಬಲ್-ಎಂಜಿನ್’ ರಾಜ್ಯಗಳು ಕರ್ನಾಟಕ ಸಾಧಿಸಿದ್ದನ್ನು ಸಾಧಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಅಶ್ವಿನ್‌ ವೈಷ್ಣವ್‌ ಅವರಿಗೆ ತಿರುಗೇಟು ನೀಡಿದ್ದಾರೆ. ಬೆಂಗಳೂರು ಬಳಿ ಫಾಕ್ಸ್‌ಕಾನ್‌ ಕಂಪನಿ, ತನ್ನ ಘಟಕ ಸ್ಥಾಪಿಸುವ ಮೂಲಕ 30 ಸಾವಿರ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಇದಕ್ಕಾಗಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರವನ್ನು ಶ್ಲಾಘಿಸಿ ರಾಹುಲ್‌ಗಾಂಧಿ ಪೋಸ್ಟ್‌ ಮಾಡಿದ್ದರು.

ಇದಕ್ಕೆ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನ್‌ ವೈಷ್ಣವ್‌ ಪ್ರತಿಕ್ರಿಯಿಸಿ, ‘ಇದು ಮೇಕ್‌ ಇನ್‌ ಇಂಡಿಯಾ ಯಶಸ್ಸು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲ’ ಎಂಬಂತೆ ಟ್ವೀಟ್‌ ಮಾಡಿದ್ದರು. ಇದಕ್ಕೆ ಎಕ್ಸ್ ಖಾತೆಯಲ್ಲಿ ತಿರುಗೇಟು ನೀಡಿರುವ ಸಿದ್ದರಾಮಯ್ಯ, ‘ಮೇಕ್‌ ಇನ್‌ ಇಂಡಿಯಾ ನಿಜವಾಗಿಯೂ ಯಶಸ್ವಿಯಾಗಿದ್ದರೆ ಡಬಲ್‌ ಎಂಜಿನ್‌ ಸರ್ಕಾರದ ಬಿಜೆಪಿ ರಾಜ್ಯಗಳು ಕರ್ನಾಟಕ ರಾಜ್ಯ ಸಾಧಿಸಿದ್ದನ್ನು ಯಾಕೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ನಿಮಗೆ ತೋರಿಸಲು ಯಾವುದೇ ಸಾಧನೆಗಳಿಲ್ಲ. ಹೀಗಾಗಿ, ನೀವು ಇತರರ ಯಶಸ್ಸನ್ನು ಕದಿಯುತ್ತೀರಿ ಮತ್ತು ಅದರ ಶ್ರೇಯ ಪಡೆಯಲು ಪ್ರಯತ್ನಿಸುತ್ತಿದ್ದೀರಿ’ ಎಂದು ಟೀಕಿಸಿದ್ದಾರೆ.

ಅಶ್ವಿನ್‌ ವೈಷ್ಣವ್‌ ಚರ್ಚೆಗೆ ಬರಲಿ: ಪ್ರಿಯಾಂಕ್‌ ಖರ್ಗೆ

ಫಾಕ್ಸ್‌ಕಾನ್‌, ‘ಮೇಕ್‌ ಇನ್‌ ಇಂಡಿಯಾ’ದಿಂದ ರಾಜ್ಯಕ್ಕೆ ಬಂದಿದೆ ಎಂಬುದು ಸುಳ್ಳು. ಈ ಕುರಿತ ಎಲ್ಲಾ ಸಂಗತಿಯನ್ನು ಅಶ್ವಿನ್‌ ವೈಷ್ಣವ್‌ ಅವರಿಗೆ ಕಳುಹಿಸಿದ್ದು, ಅವರು ಚರ್ಚೆಗೆ ಕರೆದರೆ ಮಾತನಾಡಲು ಸಿದ್ಧವಿದ್ದೇವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಮಾತೆತ್ತಿದರೆ ಎಲ್ಲವೂ ಮೋದಿಯಿಂದಲೇ ಆಗಿದೆ ಎನ್ನುತ್ತಾರೆ. ಮೇಕ್ ಇನ್ ಇಂಡಿಯಾದಿಂದಲೇ ಫಾಕ್ಸ್‌ಕಾನ್‌ ಬಂದಿದೆ ಎಂಬುದು ಸುಳ್ಳು. ಅಮೆರಿಕದಲ್ಲಿ ಬಂದ ಲೇಖನಗಳನ್ನು ಓದಿ ನೋಡಲಿ. ನಾವು ಪ್ರಾತ್ಯಕ್ಷಿಕೆ ನೀಡಿದ ಮೇಲಷ್ಟೇ ಫಾಕ್ಸ್‌ಕಾನ್‌ ಬಂದಿದೆ. ಅದರ ಬಗ್ಗೆ ಎಲ್ಲವನ್ನೂ ಅಶ್ವಿನ್‌ ವೈಷ್ಣವ್‌ ಅವರಿಗೆ ಕಳುಹಿಸಿದ್ದೇನೆ ಎಂದರು.