ಅರ್ಜಿ ಸಲ್ಲಿಕೆ ವೇಳೆ ಕ್ಷೇತ್ರದ ಹೆಸರಿನ ಜಾಗದಲ್ಲಿ ‘ಹೈಕಮಾಂಡ್‌ ನಿರ್ಧರಿಸುವ ಕ್ಷೇತ್ರ’ ಎಂದು ಬರೆಯುವ ಮೂಲಕ ಅರ್ಜಿ ಸಲ್ಲಿಸಿದ ಬಳಿಕವೂ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದನ್ನು ನಿಗೂಢವಾಗಿಟ್ಟುಕೊಂಡ ಸಿದ್ದರಾಮಯ್ಯ 

ಬೆಂಗಳೂರು(ನ.22): ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆಯ ಕಡೆ ದಿನವಾಗಿದ್ದ ಸೋಮವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾವು ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಯಾವ ಕ್ಷೇತ್ರದ ಟಿಕೆಟ್‌ ಬೇಕು ಎಂಬುದನ್ನು ಮಾತ್ರ ನಿಗೂಢವಾಗಿಟ್ಟಿದ್ದಾರೆ. ಅರ್ಜಿ ಸಲ್ಲಿಕೆ ವೇಳೆ ಕ್ಷೇತ್ರದ ಹೆಸರಿನ ಜಾಗದಲ್ಲಿ ‘ಹೈಕಮಾಂಡ್‌ ನಿರ್ಧರಿಸುವ ಕ್ಷೇತ್ರ’ ಎಂದು ಬರೆಯುವ ಮೂಲಕ ಅರ್ಜಿ ಸಲ್ಲಿಸಿದ ಬಳಿಕವೂ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದನ್ನು ನಿಗೂಢವಾಗಿಟ್ಟುಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿತ್ತು. ಕೋಲಾರದಲ್ಲಿ ಕಣ ಪರೀಕ್ಷೆ ನಡೆಸಿರುವ ಅವರು ಕೋಲಾರದಿಂದ ಸ್ಪರ್ಧಿಸುತ್ತಾರೆಯೇ? ಬಾದಾಮಿಯಲ್ಲೇ ಮುಂದುವರೆಯುತ್ತಾರೆಯೇ? ವರುಣ ಕ್ಷೇತ್ರಕ್ಕೆ ವಾಪಸ್ಸು ಹೋಗುತ್ತಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಿತ್ತು. ಇದಕ್ಕೆ ಟಿಕೆಟ್‌ಗೆ ಅರ್ಜಿ ಸಲ್ಲಿಸುವ ವೇಳೆ ಉತ್ತರ ಸಿಗಲಿದೆ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಅವರ ಅರ್ಜಿ ಸಲ್ಲಿಕೆ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

Assembly Election: ಟಿಕೆಟ್‌ ಘೋಷಣೆ ಅಧಿಕಾರ ನಂಗೂ ಇಲ್ಲ, ಸಿದ್ದುಗೂ ಇಲ್ಲ: ಡಿಕೆಶಿ

ಆದರೆ, ಸೋಮವಾರ ಸಂಜೆ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ವೆಂಕಟೇಶ್‌ ಹಾಗೂ ಕೆ.ವಿ.ಪ್ರಭಾಕರ್‌ ಅವರು ಕೆಪಿಸಿಸಿಗೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕ್ಷೇತ್ರದ ವಿಚಾರದಲ್ಲಿನ ಕುತೂಹಲ ಮುಂದುವರೆದಿದೆ. ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ‘ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧಾರ ಮಾಡಲಿದೆ’ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾಂಗ್ರೆಸ್‌ ಟಿಕೆಟ್‌ಗೆ 1350 ಅರ್ಜಿ ಸಲ್ಲಿಕೆ, ಅರ್ಜಿ ಸಲ್ಲಿಕೆ ಮುಕ್ತಾಯ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ನ.21 ಕಡೆಯ ದಿನವಾಗಿತ್ತು. ಒಟ್ಟು 1,350 ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿಯ ಜೊತೆಗಿನ ಶುಲ್ಕದಿಂದ 20 ಕೋಟಿ ರು. ಪಕ್ಷಕ್ಕೆ ಬಂದಿದೆ. ಅರಸೀಕೆರೆ ಕ್ಷೇತ್ರಕ್ಕೆ ಅತಿ ಕಡಿಮೆ ಒಂದೇ ಅರ್ಜಿ ಬಂದಿದೆ. ಶಿವಮೊಗ್ಗ ಕ್ಷೇತ್ರಕ್ಕೆ ಅತಿಹೆಚ್ಚು 20 ಅರ್ಜಿ ಬಂದಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.