ಕುಮಟಾ: ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೇ ತೊಡೆ ತಟ್ಟಿದ ಶಾರದಾ ಶೆಟ್ಟಿ..!
ರಾಜ್ಯ ರಾಜಕಾರಣದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ವಿವಿಧ ಬಣ್ಣವನ್ನು ಪಡೆಯುತ್ತಿದೆ. ಇದರ ಜತೆ ಉತ್ತರಕನ್ನಡ ಜಿಲ್ಲೆಯಲ್ಲೂ ಸಾಕಷ್ಟು ರಾಜಕೀಯ ಬದಲಾವಣೆಗಳು ನಡೆಯುತ್ತಿದ್ದು, ಕುಮಟಾ ಕ್ಷೇತ್ರವಂತೂ ದಿನದಿಂದ ದಿನಕ್ಕೆ ಕಾಂಗ್ರೆಸ್ ಪಾಲಿಗೆ ತಲೆನೋವಾಗಿ ಪರಿಣಮಿಸುತ್ತಿದೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಏ.21): ಉತ್ತರಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರ ಇದೀಗ ಮತ್ತೆ ಜಿಲ್ಲೆಯಲ್ಲಿ ಚರ್ಚಾಗ್ರಾಸವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆಯೇ ಸಾಕಷ್ಟು ಕಗ್ಗಂಟಾಗಿದ್ದರಿಂದ ಕಾರ್ಯಕರ್ತರ ವಿರೋಧದ ನಡುವೆಯೇ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾಗೆ ಟಿಕೆಟ್ ಕೊಡಲಾಗಿದೆ. ಇದರಿಂದ ಬೇಸರಗೊಂಡಿರುವ ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್ ವಿರುದ್ಧವೇ ತೊಡೆ ತಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ....
ಹೌದು, ರಾಜ್ಯ ರಾಜಕಾರಣದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ವಿವಿಧ ಬಣ್ಣವನ್ನು ಪಡೆಯುತ್ತಿದೆ. ಇದರ ಜತೆ ಉತ್ತರಕನ್ನಡ ಜಿಲ್ಲೆಯಲ್ಲೂ ಸಾಕಷ್ಟು ರಾಜಕೀಯ ಬದಲಾವಣೆಗಳು ನಡೆಯುತ್ತಿದ್ದು, ಕುಮಟಾ ಕ್ಷೇತ್ರವಂತೂ ದಿನದಿಂದ ದಿನಕ್ಕೆ ಕಾಂಗ್ರೆಸ್ ಪಾಲಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಕುಮಟಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಗಾಗಿ ಹದಿನಾರು ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಕ್ಷೇತ್ರದವರಲ್ಲದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾಗೆ ಟಿಕೆಟ್ ನೀಡಲಾಗಿತ್ತು. ಇದು ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತ ಸೃಷ್ಠಿಸಿದ್ದು, ನಿವೇದಿತ್ ಆಳ್ವಾ ವಿರುದ್ಧ ಪಕ್ಷದೊಳಗೆ ಧ್ವನಿಗಳು ಏಳಲಾರಂಭಿಸಿದ್ದವು. ಡಿ.ಕೆ.ಶಿವಕುಮಾರ್ ಸೂಚನೆ ಹಿನ್ನೆಲೆ ಆರ್.ವಿ.ದೇಶ್‌ಪಾಂಡೆ ಸೇರಿದಂತೆ ಪಕ್ಷದ ವಿವಿಧ ನಾಯಕರು ಭಿನ್ನಮತ ಶಮನ ಮಾಡುವ ಪ್ರಯತ್ನ ನಡೆಸಿದ್ದರು. ಆದರೆ, ಇದ್ಯಾವುದಕ್ಕೂ ಬಗ್ಗದ ಮಾಜಿ ಶಾಸಕಿ ಶಾರದಾ ಶೆಟ್ಟಿ ಪಕ್ಷೇತರವಾಗಿ ಈ ಬಾರಿ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಯ ವಿರುದ್ಧವೇ ತೊಡೆ ತಟ್ಟಿದ್ದಾರೆ.
ವಿಧಾನಸಭಾ ಚುನಾವಣೆ: ನಗರದ ಬೀದಿಯಲ್ಲೇ ಓಡಾಡುತ್ತಾರೆ ಬಂದೂಕುಧಾರಿಗಳು!
ಕಾಂಗ್ರೆಸ್ ಪಕ್ಷ ನನಗೆ ಅನ್ಯಾಯ ಮಾಡಿದೆ. ಪಕ್ಷ ಅನ್ಯಾಯ ಮಾಡಿದ್ರೂ ಜನಬೆಂಬಲ ಇರೋದ್ರಿಂದ ಕಣಕ್ಕಿಳಿದಿದ್ದೇನೆ. ನಾನು ಹಾಗೂ ಶಿವಾನಂದ ಹೆಗಡೆ ಕಡತೋಕ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆವು. ಶಿವಾನಂದ ಹೆಗಡೆ ಕಡತೋಕ ಅವರಿಗೆ ಟಿಕೆಟ್ ನೀಡಿದ್ದರೂ ನಾನು ಅವರಿಗೆ ಬೆಂಬಲ ನೀಡ್ತಿದ್ದೆ. ಪಕ್ಷ ಸಂಘಟನೆಗಾಗಿ 10-15ವರ್ಷಗಳ ಕಾಲ ದುಡಿದರೂ ಪಕ್ಷ ಅನ್ಯಾಯ ಮಾಡಿದೆ. ಜನರ ಒತ್ತಾಯದ ಹಿನ್ನೆಲೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಹೇಳಿದ್ದಾರೆ.
ಶಾರದಾ ಶೆಟ್ಟಿ, ಮಾಜಿ ಶಾಸಕರು
ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಇಡೀ ಜಿಲ್ಲೆಯಲ್ಲಿ ಕುಮಟಾ ಕ್ಷೇತ್ರದಲ್ಲೇ ಅತೀ ಹೆಚ್ಚು ಅರ್ಜಿ ಸಲ್ಲಿಸಲಾಗಿತ್ತು. ಸ್ಥಳೀಯ ನಾಯಕರಿಂದ ಅವಕಾಶ ನೀಡಿದಲ್ಲಿ ಗೆಲ್ಲುವ ಅವಕಾಶ ಹೆಚ್ಚಿದ್ದರಿಂದ ಹಲವರು ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದರು. ಆದರೆ, ಮಾರ್ಗರೇಟ್ ಆಳ್ವಾರ ಪ್ರಭಾವದಿಂದಾಗಿ ಅಂತಿಮವಾಗಿ ನಿವೇದಿತ್ ಆಳ್ವಾಗೆ ಟಿಕೆಟ್ ಸಿಕ್ಕಿದ್ದು, ಮೊನ್ನೆಯಷ್ಟೇ ನಾಮಪತ್ರ ಕೂಡಾ ಸಲ್ಲಿಸಿದ್ದಾರೆ. ಶಾರದಾ ಶೆಟ್ಟಿ ಬಂಡಾಯದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ತಾಯಿ ಮಾರ್ಗರೇಟ್ ಆಳ್ವಾ, ಮನೆಯಲ್ಲಿದ್ದ ಶಾರದಾ ಶೆಟ್ಟಿ ಅವರನ್ನು ತಂದು ಎರಡು ಬಾರಿ ಟಿಕೆಟ್ ಕೊಟ್ಟು ಶಾಸಕಿ ಮಾಡಿದ್ದು ನಾನು. ಅವರು ಚುನಾವಣೆಗೆ ನಿಲ್ಲಲಿ. ಅವರು ಗೆದ್ದರೆ ಖುಷಿ ಪಡುತ್ತೇವೆ. ಪಕ್ಷ ಬಿಟ್ಟು ಹೋದಲ್ಲಿ ಮುಂದಾಗುವ ಪರಿಣಾಮವನ್ನು ಅವರೇ ಎದುರಿಸಬೇಕಾಗುತ್ತದೆ ಅಂತಾ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ ಮಾರ್ಗರೇಟ್ ಆಳ್ವಾ. ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ಮಾಜಿ ಸಚಿವ ಆರ್.ವಿ. ದೇಶ್‌ಪಾಂಡೆ, ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಪಕ್ಷ ಸಂಘಟನೆ ಮಾಡುವ ಕೆಲಸ ನಾನು ನಡೆಸಿದ್ದೇನೆ. ಪಕ್ಷದ ನಿರ್ಧಾರಕ್ಕೆ ಎಲ್ಲರೂ ಶಿಸ್ತುಬದ್ಧವಾಗಿ ಹೆಜ್ಜೆ ಹಾಕ್ತಾರೆ ಅನ್ನೋ ವಿಶ್ವಾಸ ನನಗಿದೆ ಅಂದಿದ್ದಾರೆ.
ಉತ್ತರ ಕನ್ನಡ: ಚುನಾವಣೆ ನಾಮಪತ್ರ, ರೂಪಾಲಿ ನಾಯ್ಕ್ ಭರ್ಜರಿ ಬಲ ಪ್ರದರ್ಶನ
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧವೇ ತೊಡೆ ತಟ್ಟಿರುವ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ಮನವೊಲಿಸುವ ಪ್ರಯತ್ನಗಳು ಪಕ್ಷದಲ್ಲಿ ನಡೆಯುತ್ತಿದೆ. ಶಾರದಾ ಶೆಟ್ಟಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂಪಡೆಯಲು ಎರಡು ದಿನಗಳ ಅವಕಾಶವಿರೋದ್ರಿಂದ ಮುಖಂಡರ ಒತ್ತಾಯದ ಮೇರೆಗೆ ಮಾಜಿ ಶಾಸಕಿ ನಾಮಪತ್ರ ವಾಪಾಸ್ ಪಡೆಯುತ್ತಾರೋ ಅಥವಾ ಚುನಾವಣಾ ಕಣದಲ್ಲಿ ಮುಂದುವರಿಯುತ್ತಾರೋ ಅನ್ನೋದನ್ನು ಕಾದು ನೋಡಬೇಕಾಗಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.