ಪಂಚ ರಾಜ್ಯಗಳ ಚುನಾವಣೆ ಮೇಲೆ ಪರಿಣಾಮ| ಅಧಿವೇಶನದಲ್ಲಿ ಮುಜುಗರ ಆಗಲಿದೆ| ನಿನ್ನ ಸ್ಥಾನ ನಿಮ್ಮ ಸಹೋದರನಿಗೆ ನೀಡಲಾಗುವುದು| ಪಕ್ಷದ ಒಳಗೇ ನಿಮ್ಮ ಸ್ಥಾನಕ್ಕೆ ತೊಂದರೆ ಆಗಲ್ಲ| ಸಚಿವ ರಮೇಶ್ ಜಾರಕಿಹೊಳಿ‌ ಗೆ ಸ್ಪಷ್ಟ ಸೂಚನೆ ಕೊಟ್ಟ ಬಿಜೆಪಿ ನಾಯಕರು| ನಾಯಕರ ಸೂಚನೆಗೆ ಮನ್ನಣೆ ನೀಡಿ ರಾಜೀನಾಮೆ ಕೊಟ್ಟಿರುವ ರಮೇಶ್ ಜಾರಕಿಹೊ

ಬೆಂಗಳೂರು(ಮಾ.03): ಕೆಲಸ ಕೇಳಿ ಬಂದಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದಡಿ ಸಿಡಿ ವಿವಾದದಲ್ಲಿ ಸಿಲುಕಿದ್ದ ಸಚಿವ ರಮೇಶ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಪಂಚ ರಾಜ್ಯಗಳ ಚುನಾವಣೆ ಮೇಲೆ ಪರಿಣಾಮ ಹಾಗೂ ಅಧಿವೇಶನದಲ್ಲಿ ಮುಜುಗರಕ್ಕೀಡಾಗುವುದನ್ನು ತಪ್ಪಿಸುವ ಸಲುವಾಗಿ ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿಯನ್ನು ರಾಜೀನಾಮೆ ನೀಡಲು ಮನವೊಲಿಸಿದ್ದಾರೆ. ನಿನ್ನ ಸ್ಥಾನ ನಿಮ್ಮ ಸಹೋದರನಿಗೆ ನೀಡಲಾಗುವುದು ಹಾಗೂ ಪಕ್ಷದ ಒಳಗೇ ನಿಮ್ಮ ಸ್ಥಾನಕ್ಕೆ ತೊಂದರೆ ಆಗುವುದಿಲ್ಲ ಎಂದು ಜಾರಕಿಹೊಳಿಗೆ ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ. ನಾಯಕರ ಸೂಚನೆಗೆ ಮನ್ನಣೆ ನೀಡಿ ಸದ್ಯ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. 

ರಾಜೀನಾಮೆ ಪತ್ರದಲ್ಲೇನಿದೆ?

ನನ್ನ ಮೇಲೆ ಬಂದಿರುವ ಆರೋಪಗಳು ಸತ್ಯಕ್ಕೆ ದೂರ. ಇದ್ರ ಬಗ್ಗೆ ಶೀಘ್ರವೇ ತನಿಖೆ ಆಗಬೇಕು. ನಾನು ನಿರ್ದೋಷಿಯಾಗುವ ವಿಶ್ವಾಸವಿದ್ದರೂ, ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಇದನ್ನು ಅಂಗೀಕರಿಸುವಂತೆ ರಾಜೀನಾಮೆ ಪತ್ರದಲ್ಲಿ ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ.

"

ಏನಿದು ವಿವಾದ?

ಡಾಕ್ಯುಮೆಂಟರಿ ಮಾಡುವ ಪ್ರಸ್ತಾಪದೊಂದಿಗೆ ತಮ್ಮನ್ನು ಸಂಪರ್ಕಿಸಿದ್ದ ಯುವತಿಯೊಬ್ಬಳಿಗೆ ಇಂಧನ ಇಲಾಖೆಯ ಕೆಪಿಟಿಸಿಎಲ್‌ನಲ್ಲಿ ಉದ್ಯೋಗದಾಸೆ ತೋರಿಸಿ ಸಚಿವರು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ, ಆ ಯುವತಿಯೊಂದಿಗೆ ಕಳೆದ ಏಕಾಂತದ ಕ್ಷಣಗಳು, ದೆಹಲಿಯ ಕರ್ನಾಟಕ ಭವನದಲ್ಲಿ ತಂಗಿದ್ದ ವೇಳೆ ಸಚಿವರು ಬೆಂಗಳೂರಿನಲ್ಲಿದ್ದ ಯುವತಿಗೆ ವಿಡಿಯೋ ಕಾಲ್‌ ಮಾಡಿದ ದೃಶ್ಯಾವಳಿ ಹಾಗೂ ಯುವತಿಯೊಂದಿಗೆ ರಾಜ್ಯ ರಾಜಕಾರಣದ ಬಗ್ಗೆ ಸಚಿವರು ಆಡಿದ್ದಾರೆ ಎನ್ನಲಾದ ಖಾಸಗಿ ಸಂಭಾಷಣೆಯೂ ಬಹಿರಂಗಗೊಂಡಿದೆ.

ಈ ಸಂಭಾಷಣೆ ವೇಳೆ ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭ್ರಷ್ಟರೆಂದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಸ್ಟ್‌ ಎಂದು ಹೇಳಿರುವುದು ಹಾಗೂ ತಾವು ಮುಖ್ಯಮಂತ್ರಿಯಾಗಬೇಕು, ಉಪ ಮುಖ್ಯಮಂತ್ರಿ ಹುದ್ದೆ ಕೇವಲ ಸ್ಟೇಟಸ್‌ಗೆ ಎಂಬಂತಹ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ.

ಈ ಸಿ.ಡಿ.ಯು ಮಾಧ್ಯಮಗಳ ಮೂಲಕ ಬಹಿರಂಗಗೊಳ್ಳುತ್ತಿದ್ದಂತೆಯೇ ಸಚಿವ ರಮೇಶ್‌ ಜಾರಕಿಹೊಳಿ ರಾಜೀನಾಮೆಗೆ ಪ್ರತಿಪಕ್ಷ ಕಾಂಗ್ರೆಸ್‌ನಿಂದ ಆಗ್ರಹ ಕೇಳಿಬಂದಿದೆ. ಜತೆಗೆ, ಸಚಿವರ ಲೈಂಗಿಕ ಹಗರಣವು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿದೆ. 

ದೂರು ನೀಡಿದ ದಿನೇಶ್‌ ಕಲ್ಲಹಳ್ಳಿ:

ಈ ಪ್ರಕರಣದ ಬಗ್ಗೆ ನಾಗರಿಕ ಹಕ್ಕು ಹೋರಾಟ ಸಮಿತಿ ಎಂಬ ಸಂಘಟನೆಯ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ ಎಂಬುವರು ಮಂಗಳವಾರ ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ದೂರು ನೀಡಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.

‘ನನಗೆ ಸಂತ್ರಸ್ತೆ ಕುಟುಂಬದ ಸದಸ್ಯರಿಂದಲೇ ಸಿ.ಡಿ. ಲಭ್ಯವಾಗಿದೆ. ಜೀವ ಭೀತಿ ಕಾರಣಕ್ಕೆ ಆಕೆ ಬಹಿರಂಗವಾಗಿ ಕಾಣಿಸಿಕೊಳ್ಳಲು ಹೆದರಿದ್ದಾರೆ. ಹೀಗಾಗಿ ಆಕೆಯ ಪರವಾಗಿ ಪೊಲೀಸರಿಗೆ ನಾನು ದೂರು ಕೊಟ್ಟಿದ್ದೇನೆ’ ಎಂದು ಕಲ್ಲಹಳ್ಳಿ ಸ್ಪಷ್ಟಪಡಿಸಿದ್ದಾರೆ. ಈ ದೂರು ದಾಖಲಾದ ಬೆನ್ನಲ್ಲೇ ಪ್ರಕರಣದ ತನಿಖೆಗೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌ ನೇತೃತ್ವದ ತಂಡವನ್ನು ಆಯುಕ್ತ ಕಮಲ್‌ ಪಂತ್‌ ರಚಿಸಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಬಂದಾಗ ಪರಿಚಯ:

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದ ಬಳಿಕ ಕೆಲ ದಿನಗಳಲ್ಲೇ ರಮೇಶ್‌ ಜಾರಕಿಹೊಳಿ ಅವರಿಗೆ ಬೆಂಗಳೂರಿನ ಆರ್‌.ಟಿ.ನಗರದ ಪಿ.ಜಿ.ಯೊಂದರಲ್ಲಿ ನೆಲೆಸಿದ್ದ ಉತ್ತರ ಕರ್ನಾಟಕ ಮೂಲದ ಸಂತ್ರಸ್ತೆಯ ಪರಿಚಯವಾಗಿದೆ. ‘ನಾಡಿನ ಜಲಾಶಯಗಳು ಹಾಗೂ ಜಾರಕಿಹೊಳಿ’ ಎಂಬ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಯೋಜಿಸಿದ್ದ ಆಕೆ, ಈ ಯೋಜನೆಗೆ ನೆರವು ಕೋರಿ ಸಚಿವ ರಮೇಶ್‌ ಜಾರಕಿಹೊಳಿಯನ್ನು ಭೇಟಿಯಾಗಿದ್ದಳು. ಎರಡ್ಮೂರು ಬಾರಿ ಸಚಿವರ ಮನೆಗೂ ತೆರಳಿ ಭೇಟಿ ಮಾಡಿದ್ದಳು ಎನ್ನಲಾಗಿದೆ.

ಹೀಗೆ ಪದೇ ಪದೇ ಭೇಟಿಯಾದ ಬಳಿಕ ಯುವತಿ ಜತೆ ಸಚಿವರಿಗೆ ಆತ್ಮೀಯತೆ ಮೂಡಿದೆ. ಆಗ ‘ಸಾಕ್ಷ್ಯಚಿತ್ರವೆಲ್ಲ ಬೇಡ. ನಿನಗೆ ಕೆಪಿಟಿಸಿಎಲ್‌ನಲ್ಲಿ ಸರ್ಕಾರಿ ಉದ್ಯೋಗ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದ್ದ ಸಚಿವರು, ಬಳಿಕ ಆಕೆಗೆ ತಮ್ಮ ಪರ್ಸನಲ್‌ ಮೊಬೈಲ್‌ ಸಂಖ್ಯೆಯನ್ನು ನೀಡಿದ್ದರು. ಹೀಗೆ ಮೊಬೈಲ್‌ ಸಂಖ್ಯೆಗಳು ಪರಸ್ಪರ ವಿನಿಮಯವಾದ ನಂತರ ವಾಟ್ಸ್‌ ಆ್ಯಪ್‌ನಲ್ಲಿ ವಿಡಿಯೋ ಕಾಲ್‌ ಶುರುವಾಗಿದೆ. ನಂತರ ಇತ್ತೀಚೆಗೆ ಸರ್ಕಾರಿ ನೌಕರಿ ಬಗ್ಗೆ ಯುವತಿ ಪ್ರಸ್ತಾಪಿಸಿದರೆ ಸಚಿವರು ಸಬೂಬು ಹೇಳಿ ತಪ್ಪಿಸಿಕೊಳ್ಳಲಾರಂಭಿಸಿದ್ದರು. ಈ ವರ್ತನೆಗೆ ಬೇಸರಗೊಂಡ ಆಕೆ, ಸರ್ಕಾರಿ ನೌಕರಿ ಕೊಡಿಸುವ ಹೆಸರಿನಲ್ಲಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಳು. ಆಗ ಯುವತಿಗೆ ಸಚಿವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಕೊನೆಗೆ ಸಾಮಾಜಿಕ ಕಾರ್ಯಕರ್ತ, ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್‌ ಕಲ್ಲಹಳ್ಳಿ ಅವರನ್ನು ಸಂತ್ರಸ್ತೆಯ ಕುಟುಂಬದ ಸದಸ್ಯರು ಭೇಟಿಯಾಗಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು.

ಅಲ್ಲದೆ, ಕಲ್ಲಹಳ್ಳಿ ಅವರಿಗೆ ಸಚಿವರ ರಾಸಲೀಲೆ ಸಿ.ಡಿ. ಹಾಗೂ ಕೆಲವು ದಾಖಲೆಗಳನ್ನು ಕೂಡಾ ಅವರು ಕೊಟ್ಟಿದ್ದರು. ಇವುಗಳನ್ನು ಆಧರಿಸಿ ದಿನೇಶ್‌ ಕಲ್ಲಹಳ್ಳಿ, ಸಚಿವರ ವಿರುದ್ಧ ನಗರ ಪೊಲೀಸ್‌ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.