ಸಚಿವ ಸುಧಾಕರ್ಗೆ ಮುಖಭಂಗ: ಎಲ್ಲ ಜವಾಬ್ದಾರಿ ಕಿತ್ತುಕೊಂಡ ಸಿಎಂ
ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣದ ಹಿನ್ನೆಲೆ ಸಿಎಂ ಫುಲ್ ಗರಂ ಆಗಿದ್ದು, ಆರೋಗ್ಯ ಸಚಿವ ಸುಧಾಕರ್ ನೀಡಿದ್ದ ಎಲ್ಲ ಜವಾಬ್ದಾರಿಯನ್ನೂ ಸಿಎಂ ಬಿ.ಎಸ್ ಯಡಿಯೂರಪ್ಪ ಕಿತ್ತುಕೊಂಡಿದ್ದಾರೆ.
ಬೆಂಗಳೂರು, (ಮೇ.04): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಬೆಡ್, ಆಕ್ಸಿಜನ್ ಹಾಗೂ ಔಷಧಿಗಳ ಕೊರತೆ ಎದುರಾಗಿದೆ.
ಅದರಲ್ಲೂ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಒಂದೇ ದಿನದಲ್ಲಿ 24 ಸೊಂಕಿತರ ಸಾವನ್ನಪ್ಪಿದ್ದು, ಸರ್ಕಾರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಈ ಹಿನ್ನೆಲೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧ ಆಕ್ರೋಶಗಳ ವ್ಯಕ್ತವಾಗುತ್ತಿವೆ. ಇದರಿಂದ ಎಚ್ಚೆತ್ತುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಆರೋಗ್ಯ ಸಚಿವ ಡಾ. ಸುಧಾಕರ್ಗೆ ನೀಡಿದ್ದ ಎಲ್ಲ ಜವಾಬ್ದಾರಿಯನ್ನೂ ಕಿತ್ತುಕೊಂಡಿದ್ದಾರೆ.
ಚಾಮರಾಜನಗರ ಆಸ್ಪತ್ರೆ ದುರಂತ: ಆಕ್ಸಿಜನ್‌ನಿಂದ ಸತ್ತಿಲ್ಲ ಎಂದು ಸರ್ಟಿಫಿಕೇಟ್ ಕೊಟ್ಟ ಸಚಿವರು
ಯೆಸ್.. ಸುಧಾಕರ್ಗೆ ಕೇವಲ ಆರೋಗ್ಯ ಖಾತೆ ಮಾತ್ರ ಉಳಿಸಿರುವ ಸಿಎಂ, ಕೊರೋನಾಗೆ ಸಂಬಂಧಿಸಿದಂತೆ ಎಲ್ಲಾ ಜವಾಬ್ದಾರಿಯನ್ನೂ ಬೇರೆ-ಬೇರೆ ಸಚಿವರುಗಳಿಗೆ ಹಂಚಿಕೆ ಮಾಡಿದ್ದಾರೆ. ಇಂದು (ಮಂಗಳವಾರ) ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಚಿವ ಜಗದೀಶ್ ಶೆಟ್ಟರ್‌ಗೆ ಆಕ್ಸಿಜನ್ ಜವಾಬ್ದಾರಿಯನ್ನು ನೀಡಿದ್ದರೆ, ಡಾ.ಸಿ.ಎನ್. ಅಶ್ವತ್ಥ್ನಾರಾಯಣ್ಗೆ ಯಾವುದೇ ಔಷಧದ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಿದ್ದಾರೆ.
ಇನ್ನು ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಬೆಡ್‌ಗಳ ವ್ಯವಸ್ಥೆ ಜವಾಬ್ದಾರಿಯನ್ನು ಆರ್.ಅಶೋಕ್ ಹಾಗೂ ಬೊಮ್ಮಾಯಿ ಹೆಗೆಲಿಗೆ ಹಾಕಿದ್ದಾರೆ. ಅಲ್ಲದೇ ಮಹತ್ವದ ವಾರ್ ರೂಂ ಜವಾಬ್ದಾರಿಯನ್ನು ಸಚಿವ ಅರವಿಂದ್ ಲಿಂಬಾವಳಿಗೆ ನೀಡಿದ್ದಾರೆ.
ಕೊರೋನಾ ನಿಯಂತ್ರಣದ ಎಲ್ಲಾ ಕೆಲಸಗಳನ್ನು ಸಚಿವರುಗಳಿಗೆ ಹಂಚಿಕೆ ಮಾಡಿದ್ದರಿಂದ ಸುಧಾಕರ್ ಹಲ್ಲು ಕಿತ್ತಿದ ಹಾವಿನಂತಾಗಿದ್ದಾರೆ. ಕೇವಲ ಅವರು ಈಗ ಆರೋಗ್ಯ ಸಚಿವರಷ್ಟೇ. ಅವರ ಬಳಿ ಕೊರೋನಾ ನಿಯಂತ್ರಣ ಜವಾಬ್ದಾರಿಗಳು ಯಾವುದು ಇಲ್ಲ.