ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಲು ವಿಳಂಬ ಮಾಡಿದ ಕೃಷ್ಣ ಬೈರೇಗೌಡರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ವಿಳಂಬವನ್ನು ಬೆಂಗಳೂರಿನ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್‌ಗೆ ಹೋಲಿಸಿರುವ ಅವರು, ಬಿಡಿಎ ಮತ್ತು ಬಿಎಂಆರ್‌ಡಿಎ ಇಲ್ಲದೆ ನಗರವನ್ನು ಅಭಿವೃದ್ಧಿಪಡಿಸುವ ಸವಾಲನ್ನು ಎತ್ತಿ ತೋರಿಸಿದ್ದಾರೆ.
ಬೆಂಗಳೂರು: ಸಚಿವರಾಗಿ ಪ್ರಮಾಣವಚನ ತೆಗೆದುಕೊಂಡ್ರೂ ಅಧಿಕಾರ ಸ್ವೀಕಾರ ತೆಗೆದುಕೊಳ್ಳಲು ವಿಳಂಬ ಮಾಡಿರುವ ಸಚಿವ ಕೃಷ್ಣ ಬೈರೇಗೌಡರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. ಬಿಡಿಎ ಮತ್ತು ಬಿಎಂಆರ್‌ಸಿಎಲ್ ಹೊರತುಪಡಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿದ್ದರಿಂದ ಅಸಮಾಧಾನಗೊಂಡಿದ್ದ ಸಚಿವ ಕೃಷ್ಣ ಬೈರೇಗೌಡ ಅವರು ಎರಡು ವಾರಗಳ ಬಳಿಕ ಇಲಾಖೆ ಜವಾಬ್ದಾರಿಯನ್ನು ಮಂಗಳವಾರ ವಹಿಸಿಕೊಂಡಿದ್ದಾರೆ. ಅಧಿಕಾರ ಸ್ವೀಕರಿಸಲು ವಿಳಂಬ ಮಾಡಿರೋದನ್ನು ನಿಖಿಲ್ ಕುಮಾರಸ್ವಾಮಿ ಅವರು, ಬೆಂಗಳೂರಿನ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್‌ಗೆ ಹೋಲಿಕೆ ಮಾಡಿದ್ದು, ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶ್ರೀ ಕೃಷ್ಣ ಬೈರೇಗೌಡ ಅವರಿಗೆ ಅಭಿನಂದನೆಗಳು. ಆದ್ರೆ ಅಧಿಕಾರ ವಹಿಸಿಕೊಳ್ಳೋಕೆ 12 ದಿನ ಕಾಯಿಸಿದ್ದು ನೋಡಿದ್ರೆ, ನಮ್ಮ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನೆನಪಾಗುತ್ತೆ. ನಿಮ್ಮ ಮುಂದೆ ಒಂದು ವಿಶಿಷ್ಟ ಸವಾಲಿದೆ. ನಿಮ್ಮ ಖಾತೆಗೆ 'ನಗರಾಭಿವೃದ್ಧಿ' ಅಂತ ಹೆಸರೇನೋ ಇದೆ, ಆದ್ರೆ ಟೌನ್ ಪ್ಲಾನಿಂಗ್ ಸಂಸ್ಥೆಗಳಾದ BDA ಮತ್ತು BMRDA ಮಾತ್ರ ಮುಖ್ಯಮಂತ್ರಿಗಳ ಬಳಿಯೇ ಇವೆ. ಬ್ಲೂಪ್ರಿಂಟ್ ಇಲ್ಲದೆ ನಗರವನ್ನು ಅಭಿವೃದ್ಧಿ ಮಾಡುವುದು ನಿಜಕ್ಕೂ ದೊಡ್ಡ ಸವಾಲು ಎಂದು ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತ್ರಿಮೂರ್ತಿಗಳ ಸಮಸ್ಯೆ
ನಿಮ್ಮ ಹಳೇ ಟ್ರ್ಯಾಕ್ ರೆಕಾರ್ಡ್ ನಮಗೆ ಗೊತ್ತು. ಹಿಂದೆ ಕಂದಾಯ ಇಲಾಖೆಯಲ್ಲಿ ತಂತ್ರಜ್ಞಾನ ಬಳಸಿ ನೀವು ತಂದ ವ್ಯವಸ್ಥಿತ ಸುಧಾರಣೆಗಳು ಜನರ ಮನಸ್ಸಿನಲ್ಲಿದೆ. ಎಷ್ಟೇ ಗೊಂದಲಮಯ ವ್ಯವಸ್ಥೆ ಇದ್ದರೂ ಅದನ್ನು ಸರಿಪಡಿಸುವ ಸಾಮರ್ಥ್ಯ ನಿಮಗಿದೆ. ಸದ್ಯಕ್ಕೆ ನಿಮ್ಮ ಮುಖ್ಯ ಜವಾಬ್ದಾರಿ ಬೆಂಗಳೂರಿನ 'ತ್ರಿಮೂರ್ತಿ' ಸಮಸ್ಯೆಗಳ ಮೇಲೆ ನಿಂತಿದೆ: ಕಸ (Garbage), ಒಳಚರಂಡಿ (Sewage) ಮತ್ತು ರಾಜಕಾಲುವೆ (Drainage)
ಬದಲಾವಣೆ ನಿರೀಕ್ಷೆ
ಈಗಷ್ಟೇ ಮುಂಗಾರು ಶುರುವಾಗಿರೋದ್ರಿಂದ ಬೆಂಗಳೂರಿಗರಿಗೆ ಈಗ ದೊಡ್ಡ ದೊಡ್ಡ ಸ್ಕೈವಾಕ್‌ಗಳು ಬೇಡ; ಮಳೆ ನೀರು ಸರಾಗವಾಗಿ ಹರಿದು ಹೋಗುವ ಚರಂಡಿಗಳು, ಉಕ್ಕಿ ಹರಿಯದ ಒಳಚರಂಡಿ ಹಾಗೂ ಸ್ವಚ್ಛ ರಸ್ತೆಗಳು ಬೇಕು. ಈ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿದರೆ ಸಾಕು, ಬೆಂಗಳೂರಿಗರು ನೆಮ್ಮದಿಯ ಜೀವನ ನಡೆಸಬಹುದು. ಹೊಣೆಗಾರಿಕೆ ನಿಮ್ಮದು, ಬದಲಾವಣೆಯ ನಿರೀಕ್ಷೆಯಲ್ಲಿ ನಾವಿದ್ದೇವೆ ಮಿನಿಸ್ಟರ್ ಸರ್ ಎಂದು ಎಕ್ಸ್ ಖಾತೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.


