ಉತ್ತರ ಕನ್ನಡ ಜಿಲ್ಲೆಯಲ್ಲಿ ಕಣಕ್ಕಿಳಿಯಲು ಎಸ್‌ಡಿಪಿಐ ಸಿದ್ಧತೆ..!
ತಳಭಾಗದಿಂದ ಬೆಳೆದು ಬರುತ್ತಿರುವ ಎಸ್‌ಡಿಪಿಐ ಅಭಿವೃದ್ಧಿಯ ಮಂತ್ರದೊಂದಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ಹಾಕುವ ಮೂಲಕ ತನ್ನ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗಿದೆ
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ(ಮಾ.11): ಬಿಜೆಪಿ ಭದ್ರಕೋಟೆ ಕರಾವಳಿ ಕ್ಷೇತ್ರಗಳನ್ನು ತನ್ನ ಹತೋಟಿಗೆ ತರಲು ಕಾಂಗ್ರೆಸ್ ಶತಪ್ರಯತ್ನಗಳನ್ನು ನಡೆಸುತ್ತಿದೆ. ಈ ಮಧ್ಯೆ ಎಸ್‌ಡಿಪಿಐ ಮುಸ್ಲಿಂ ಸಮುದಾಯ ಪ್ರಾಬಲ್ಯ ಇರುವ ಕ್ಷೇತ್ರಗಳನ್ನ ಆಯ್ಕೆ ಮಾಡಿಕೊಂಡು, ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾದರೆ, ಬಿಜೆಪಿಗೆ ವರವಾಗುತ್ತಾ ಅನ್ನೋ ಲೆಕ್ಕಾಚಾರ ಕ್ಷೇತ್ರಗಳಲ್ಲಿ ಪ್ರಾರಂಭವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ...
ಉತ್ತರಕನ್ನಡ ಜಿಲ್ಲೆಯಲ್ಲಿ ಹಿಂದುತ್ವದ ಬುನಾದಿಯನ್ನು ಇಟ್ಟುಕೊಂಡು ಕಳೆದ ಬಾರಿ ಬಿಜೆಪಿ ಹಲವು ಸ್ಥಾನಗಳನ್ನು ಗೆದ್ದಿತ್ತು. ಆದರೆ, ಕಳೆದ 5 ವರ್ಷಗಳಲ್ಲಿ ರಾಜ್ಯ ಹಾಗೂ ಜಿಲ್ಲೆಯಲ್ಲಿ ನಡೆದ ಕೆಲವು ಬೆಳವಣಿಗೆಗಳನ್ನು ಬಳಸಿಕೊಂಡು ಆಡಳಿತ ವಿರೋಧಿ ಅಲೆಗಳನ್ನು ಸೃಷ್ಠಿಸುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತೆ ತಮ್ಮ ಖಾತೆಗಳನ್ನು ತೆರೆಯಲು ಶತಪ್ರಯತ್ನ ಮುಂದುವರಿಸಿದೆ.
ಬಿಜೆಪಿ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರು ಮುಂಚೂಣಿ: ದ್ವಾರಕಾಪುರ ಆಶ್ರಮದ ಪರಮಾತ್ಮಜೀ ಮಹಾರಾಜ ಹೊಸ ಬಾಂಬ್!
ಈ ನಡುವೆ ತಳಭಾಗದಿಂದ ಬೆಳೆದು ಬರುತ್ತಿರುವ ಎಸ್‌ಡಿಪಿಐ ಅಭಿವೃದ್ಧಿಯ ಮಂತ್ರದೊಂದಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ಹಾಕುವ ಮೂಲಕ ತನ್ನ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗಿದೆ. ಈಗಾಗಲೇ ಗ್ರಾಮ ಪಂಚಾಯತ್ ಹಾಗೂ ಪುರಸಭೆಗಳಲ್ಲಿ ಎಸ್.ಡಿ.ಪಿ.ಐ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಒಟ್ಟು 9 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಈ ಯಶಸ್ವಿನ ನಂತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾನ ಗೆಲ್ಲಬೇಕೆಂಬ ಉದ್ದೇಶದಿಂದ ಮೊದಲಬಾರಿಗೆ ಜಿಲ್ಲೆಯ ಭಟ್ಕಳ ಹಾಗೂ ಶಿರಸಿ ವಿಧಾನಸಭಾ ಕ್ಷೇತ್ರಕ್ಕೆ ಎಸ್.ಡಿ.ಪಿ.ಐ ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ದವಾಗಿದೆ. ಭಟ್ಕಳದಿಂದ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ತೌಫಿಕ್ ಬ್ಯಾರಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದ್ರೆ, ಶಿರಸಿಯಲ್ಲಿ ಹಿಂದೂ ಮುಖಂಡರೋರ್ವರನ್ನು ಕಣಕ್ಕಿಳಿಸಲು ಪ್ಲ್ಯಾನಿಂಗ್ ನಡೆಸಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿರುವ ಎಸ್‌ಡಿಪಿಐ ಮುಖಂಡರು, ಆಡಳಿತ ಪಕ್ಷ ಬಿಜೆಪಿಯನ್ನು ಕಟುವಾಗಿ ಟೀಕಿಸಿದ್ದಲ್ಲದೇ, ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ನಾಲಗೆ ಹರಿಯ ಬಿಟ್ಟಿದ್ದಾರೆ. ಸಂಸದ ಅನಂತ ಕುಮಾರ್ ಹೆಗಡೆ ನಾವು ಬಂದಿರೋದೇ ಸಂವಿಧಾನ ಬದಲಾವಣೆಗೆ ಅಂದಿದ್ರು. ಸಂವಿಧಾನದ ಬಗ್ಗೆ ಮಾತನಾಡಿದ ಸಂಸದರು ಎಲ್ಲಿದ್ದಾರೆ ಇವತ್ತು..?ಸಂವಿಧಾನದ ವಿರುದ್ಧ ಮಾತನಾಡಿದ ವ್ಯಕ್ತಿ ಇವತ್ತು ಅನಾರೋಗ್ಯದಲ್ಲಿದ್ದಾರೆ. ಸಂವಿಧಾನ ಬದಲಾವಣೆ ಮಾಡ್ತೇನೆ ಅಂದಿದ್ದ ವ್ಯಕ್ತಿಗೆ ಇಂದು ಸಂವಿಧಾನ ಓದಲು ಕೂಡಾ ಶಕ್ತಿಯಿಲ್ಲ. ಇದು ಆ ಸೃಷ್ಠಿಕರ್ತ ಅನಂತಕುಮಾರ್ ಹೆಗಡೆಗೆ ಕೊಟ್ಟ ಶಿಕ್ಷೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕ್ಷಣ ಸಚಿವರ ವಿರುದ್ಧ ಟೀಕಿಸಿರುವ ಎಸ್.ಡಿ.ಪಿ.ಐ ರಾಜ್ಯಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಅಭಿವೃದ್ಧಿ ವಿಚಾರದ ಬದಲು ಲವ್ ಜಿಹಾದ್ ಹೆಸರಿನಲ್ಲಿ ಚುನಾವಣೆ ಎದುರಿಸಬೇಕೆಂದು ಬಿಜೆಪಿ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ರು. ಮತ್ತೊಬ್ರು ಈ ಚುನಾವಣೆ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ನಡುವೆ ಅಂತಾರೆ. ಟಿಪ್ಪು ಸುಲ್ತಾನ್ ಹೆಸರು ಹೇಳೋಕೆ ಕೂಡಾ ನೀವು ನಾಲಾಯಕ್... 25,000 ಕೆರೆ ಕಟ್ಟೆಗಳನ್ನು ಅಭಿವೃದ್ಧಿ ಮಾಡಿದ ಮಹಾನ್ ರಾಜ ಟಿಪ್ಪು ಸುಲ್ತಾನ್, ಉತ್ತಮ ಆಡಳಿತಗಾರ. ಅವರ ಕಾಲದಲ್ಲಿ ಮಾಡಿದ ಕೆರೆಗಳ ಹೂಳೆತ್ತಲು ಕೂಡಾ ನಾಲಾಯಕ್ ನೀವು. ಹಿಜಾಬ್ ವಿಚಾರವಿಟ್ಟುಕೊಂಡು ಇಡೀ ರಾಜ್ಯದಾದ್ಯಂತ ಕೇಸರಿ ಶಾಲು ವಿವಾದ ಹರಿಬಿಡೋದ್ರಲ್ಲಿ ಬಿಜೆಪಿ, ಸಂಘ ಪರಿವಾರದ ನಾಯಕರ ಕೈವಾಡವಿದೆ. ಇಂದು ಶಾಲೆಗಳಲ್ಲಿ ಮೂಲಭೂತ ವ್ಯವಸ್ಥೆ, ಶಿಕ್ಷಕರ ಶೌಚಾಲಯ ವ್ಯವಸ್ಥೆ, ಮಕ್ಕಳಿಗೆ ಶೂ, ಯೂನಿಫಾರ್ಮ್ ನೀಡಲಾಗ್ತಿಲ್ಲ. ಇಂತಹ ಅಯೋಗ್ಯ ಶಿಕ್ಷಣ ಮಂತ್ರಿಗಳು ಮುಸ್ಲಿಂ ವಿದ್ಯಾರ್ಥಿನಿಯರು ತಲೆಗವಸು ಹಾಕಿಕೊಂಡು ಶಾಲೆಗೆ ಹೋದ್ರೆ ನಿಷೇಧ ಮಾಡ್ತಾರೆ. ಇಂತಹ ಅವಿವೇಕಿಗಳಿದ್ರೆ ರಾಜ್ಯ ಯಾವ ರೀತಿಯಲ್ಲಿ ಅಭಿವೃದ್ಧಿಯತ್ತ ಸಾಗಲು ಸಾಧ್ಯ..? ಬಿಜೆಪಿ ಅಧಿಕಾರದಲ್ಲಿ ಜನರು ಪಿಎಸ್‌ಐ ಅಗಬೇಕಂದ್ರೆ 50ಲಕ್ಷ ರೂ. ಹಣವಿದ್ರೆ ಸಾಕು. 80 ಲಕ್ಷ ರೂ.ಇದ್ರೆ ಪರೀಕ್ಷೆ ಬರೆಯೋ ಅವಶ್ಯಕತೆಯಿಲ್ಲ. ರಾಜ್ಯ ಅಧೋಗತಿಗೆ ಸಾಗುತ್ತಿದ್ರೂ ನರಸತ್ತ ವಿರೋಧ ಪಕ್ಷಗಳು ಯಾವುದೇ ಚಕರಾವೆತ್ತಲ್ಲ. ವಿರೋಧ ಪಕ್ಷದ ಪಾಲು ಕೂಡಾ ಭ್ರಷ್ಟಾಚಾರದಲ್ಲಿ ಇರೋದ್ರಿಂದ ಅವುಗಳು ಮೌನವಾಗಿವೆ. 2023ರಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಎಸ್‌ಡಿಪಿಐ ಹೋಗುತ್ತಿದೆ. ಬಿಜೆಪಿಗೆ ಮತ್ತೆ ಅಧಿಕಾರ ನೀಡಿದ್ರೆ ಇಡೀ ರಾಜ್ಯವನ್ನು ಮಾರಲು ಇವರು ಹಿಂದೆ ಹೇಸುವವರಲ್ಲ ಎಂದು ಕಿಡಿ ಕಾರಿದರು. ಜ್ಯಾತ್ಯಾತೀತ, ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುವ ದೃಷ್ಠಿಯಿಂದ ಎಸ್‌ಡಿಪಿಐ ಈ ಬಾರಿ ರಾಜ್ಯದಲ್ಲಿ 54 ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, 19ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದರು. ಜಿಲ್ಲಾಧ್ಯಕ್ಷ ತೌಫೀಕ್ ಮಾತನಾಡಿ, ಭಟ್ಕಳ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳ ಲಿಸ್ಟ್ ಕಳಿಸಲಾಗಿದೆ. ನನಗೆ ಪಕ್ಷ ಅವಕಾಶ ಕೊಟ್ಟರೆ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು SDPI ಜಿಲ್ಲಾಧ್ಯಕ್ಷ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ತೌಫಿಕ್ ಬ್ಯಾರಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಶಿರಸಿ ಕ್ಷೇತ್ರಗಳಿಗೆ ಇದೇ ಮೊದಲ ಬಾರಿಗೆ ಎಸ್.ಡಿ.ಪಿ.ಐ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದು, ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನರಿಗಿರುವ ಅಸಮಾಧಾನ ಹಾಗೂ ಪಕ್ಷಗಳ ಕಚ್ಚಾಟವನ್ನು ಬಳಸಲು ಮುಂದಾಗಿದೆ. ಅಭಿವೃದ್ಧಿ ಮಂತ್ರವನ್ನು ಪಠಿಸುತ್ತಿರುವ ಎಸ್‌ಡಿಪಿಐನತ್ತ ಜನರು ಒಲವು ತೋರಿಸ್ತಾರಾ ಅನ್ನೋದನ್ನು ಕಾದು ನೋಡಬೇಕಷ್ಟೇ.