SDPI, PFI ಬಿಜೆಪಿ B ಟೀಂ, ಎರಡೂ ಸಂಘಟನೆಗಳಿಗೂ ಹಣ ಸಂದಾಯ: ಗಂಭೀರ ಆರೋಪ
SDPI, PFI ಬಿಜೆಪಿ B ಟೀಂ ಆಗಿದ್ದು ಎರಡೂ ಸಂಘಟನೆಗಳಿಗೂ ಪಕ್ಷದಿಂದ ಹಣ ಸಂದಾಯವಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು, (ಜುಲೈ.28): ಹಿಂದೆ ಸಿದ್ದರಾಮಯ್ಯನವರ ಸರ್ಕಾರದ ಸಂದರ್ಭದಲ್ಲಿ SDPI, PFI ಬ್ಯಾನ್ ಮಾಡುವಂತೆ ಬಿಜೆಪಿ ಬೀದಿಗಳಿದ ಹೋರಾಟ ಮಾಡಿತ್ತು. ಅಲ್ಲದೇ ಮುಂದಿನ ಸಲ ಬಿಜೆಪಿ ಅಧಿಕಾರಕ್ಕೆ ಬಂದರೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನ ಬ್ಯಾನ್ ಮಾಡುತ್ತೇವೆ ಎಂದು ಹೇಳಿತ್ತು. ಆದ್ರೆ, ಬಿಜೆಪಿ ಅಧಿಕಾರಿ ಬಂದರೂ ಈ ಬಗ್ಗೆ ಯಾವುದೇ ಕ್ರಮಗೊಂಡಿಲ್ಲ.
ಇದೀಗ ಪ್ರವೀಣ್ ನಟ್ಟಾರು ಪ್ರಕರಣದಲ್ಲಿ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆ ಸದಸ್ಯರ ಕೈವಾಡ ವಿದೆ ಎಂದು ಶಂಕಿಸಲಾಗಿದೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಯಿಸಿದ್ದು, ರಾಜ್ಯದಲ್ಲಿ ಎಸ್ ಡಿ ಪಿ ಐ ಹಾಗೂ ಪಿಎಫ್ ಐ ಎರಡೂ ಸಂಘಟನೆಗಳು ಬಿಜೆಪಿ ಬಿ ಟೀಂ. ಈ ಸಂಘಟನೆಗಳಿಗೆ ಬಿಜೆಪಿಯಿಂದಲೇ ಹಣ ನೀಡಲಾಗುತ್ತಿದೆ ಎಂದು ಆರ್ ಎಸ್ ಎಸ್ ಮುಖಂಡರೇ ಹೇಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪ್ರವೀಣ್ ಹತ್ಯೆ: ಕೇರಳದ ಮತೀಯ ಸಂಘಟನೆಗಳಿಗೆ ಸ್ಥಳೀಯರ ಸಾಥ್...?
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಎಸ್ ಡಿ ಪಿ ಐ ಹಾಗೂ ಪಿ ಎಫ್ ಐ ಎರಡೂ ಸಂಘಟನೆಗಳಿಗೂ ಬಿಜೆಪಿ ಹಣ ಕೊಡುತ್ತಿರುವುದಾಗಿ ಆರ್ ಎಸ್ ಎಸ್ ಮುಖಂಡರೇ ಹೇಳುತ್ತಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಬಿಜೆಪಿ ಕಾರ್ಯಕರ್ತರೇ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಗೃಹ ಸಚಿವರನ್ನು ಆ ಊರಿಗೆ ಕಾಲಿಡಲು ಬಿಟ್ಟಿಲ್ಲ. ನಳೀನ್ ಕಟೀಲ್ ಕಾರನ್ನು ಮಾತ್ರ ಕಾರ್ಯಕರ್ತರು ಅಲ್ಲಾಡಿಸಿಲ್ಲ. ಸಿಎಂ ಬೊಮ್ಮಾಯಿ ಖುರ್ಚಿಯೂ ಅಲ್ಲಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿರುದ್ಧವೂ ಕಿಡಿಕಾರಿದ ಖರ್ಗೆ, ಎಲ್ಲರಿಗೂ ಭದ್ರತೆಗಾಗಿ ಸೆಕ್ಯೂರಿಟಿ ನೇಮಕ ಮಾಡಲು ಆಗುತ್ತಾ ಎಂದು ಕೇಳುತ್ತಿದ್ದಾರೆ. ಅವರ ಹೆಸರು ಮಾತ್ರ ತೇಜಸ್ವಿ ಸೂರ್ಯ, ಅವಿವೇಕ ತನದ ಪರಮಾವಧಿ ಅವರು. ಬರಿ ವಾಟ್ಸಪ್ ವಿಶ್ವವಿದ್ಯಾಲಯದಲ್ಲಿ ಓದಿದರೆ ಹೀಗೆ ಆಗೋದು. ಪೊಲೀಸರಿಗೆ ಗೌರವ ಕೊಡುತ್ತಿಲ್ಲ, ನೀವೇ ಕಳ್ಳರನ್ನು ಸಾಕುತ್ತಿದ್ದೀರಿ. ಒಬ್ಬ ಅಧಿಕಾರಿ ಕೂಡ ವರ್ಗಾವಣೆಗೆ ದುಡ್ಡು ಕೊಡಬೇಕು. ಇಂತವರಿಂದ ಇನ್ನೇನು ರಕ್ಷಣೆ ನಿರೀಕ್ಷಿಸಲು ಸಾಧ್ಯ? ಎಂದು ಕಿಡಿಕಾರಿದರು.
24 ಗಂಟಯೊಳಗೆ ಬ್ಯಾನ್
ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಬಿಜೆಪಿ ಹೇಳಿತ್ತು. ಅಲ್ಲದೇ ಈ ಎರಡು ಸಂಘಟನೆಗಳನ್ನು ಬ್ಯಾನ್ ಮಾಡುವಂತೆ ಅಂದಿನ ಕಾಂಗ್ರೆಸ್ ವಿರುದ್ಧ ಬೃಹತ್ ಪ್ರತಿಭಟನೆಗಳನ್ನ ಮಾಡಿದ್ದು ಉಂಟು. ಇನ್ನು ಪ್ರತಾಪ್ ಸಿಂಹ, ಈಶ್ವರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಬಿಜೆಪಿ ನಾಯಕರು ಎಸ್‌ಡಿಪಿಐ ಹಾಗೂ ಪಿಎಸ್‌ಐ ಕಾಂಗ್ರೆಸ್‌ನ ಬಿ ಟೀಮ್ ಎಂದು ಆರೋಪಿಸಿದ್ದರು.