Asianet Suvarna News Asianet Suvarna News

ಎಸ್‌ಸಿ, ಎಸ್‌ಟಿ ಮೀಸಲಾತಿ ವಿಚಾರ; ಅ.7ರಂದು ಸಿಎಂ ಸರ್ವಪಕ್ಷಗಳ ಸಭೆ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅ.7ರಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.

SC ST reservation issue  CM All Parties Meeting on 7th
Author
First Published Oct 5, 2022, 3:22 PM IST

ಬೆಳಗಾವಿ (ಅ.5) : ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅ.7ರಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.

‘‘ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋಗ್ತೀವಿ; ಇದು ನಮ್ಮ, ಸತೀಶ್ ಜಾರಕಿಹೊಳಿ ಗುರಿ’’: Nalin Kumar Kateel

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಜಾರಕಿಹೊಳಿ, ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ಭಾಗವಹಿಸಲಿದ್ದಾರೆ. ಸಭೆ ಬಳಿಕ ಸಿಎಂ ಮೀಸಲಾತಿ ಸಂಬಂಧ ಕೆಲ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು. ಅದ್ಯಾಗೂ ಅವರು ನಮಗೆ ಪೂರ್ಣವಾಗಿ ನ್ಯಾಯ ಕೊಡಿಸಲ್ಲ ಎಂಬ ಆತಂಕವಿದೆ. ಬಿಜೆಪಿಯವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡ್ತಾರೆ. ಮೀಸಲಾತಿ ಹೆಚ್ಚಳ ಮಾಡಿದಂತೆ ಮಾಡಿ ಬಳಿಕ ಕಾನೂನಿನ ತೊಡಕಿನಲ್ಲಿ ಸಿಕ್ಕಿಹಾಕಿಕೊಳ್ತಾರೆ ಎಂಬ ಆತಂಕವಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಸರ್ವಪಕ್ಷ ಸಭೆಗೂ ಮುನ್ನ ಸಿದ್ದರಾಮಯ್ಯ ಸಭೆ:

ಸಿಎಂ ಸರ್ವಪಕ್ಷ ಸಭೆಗೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಎಸ್‌ಸಿ, ಎಸ್‌ಟಿ ಶಾಸಕರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಸಿದ್ದರಾಮಯ್ಯಗೆ ಮೀಸಲಾತಿ ಯಾವ ರೀತಿ ಇರಬೇಕು ಅನ್ನೋದನ್ನ ಹೇಳುತ್ತೇನೆ. ವಾಲ್ಮೀಕಿ ಜಯಂತಿ ಪೂರ್ವದಲ್ಲಿ ಮೀಸಲಾತಿ ನೀಡಲು ಸಮುದಾಯದ ಬೇಡಿಕೆ ಇದೆ. ಈಗಾಗಲೇ 240ದಿನಗಳಿಂದ ವಾಲ್ಮೀಕಿ ಶ್ರೀಗಳು ಧರಣಿ ಕುಳಿತಿದ್ದರೂ, ಸರ್ಕಾರ ಸ್ಪಂದಿಸದಿರುವುದು ಸಮುದಾಯದವರು ಉಗ್ರ ಹೋರಾಟಕ್ಕೆ ಸಜ್ಜಾಗಿದ್ದಾರೆ. ವಾಲ್ಮೀಕಿ ಜಯಂತಿಗೆ ಮೊದಲೇ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ವಾಲ್ಮೀಕಿ ಜಯಂತಿಯ ಪೂರ್ವ ಸಭೆಗಳನ್ನು ಬಹಿಷ್ಕರಿಸಿದ್ದಾರೆ ಎಂದು ತಿಳಿಸಿದರು.

ಮುಂದಿನ ಚುನಾವಣೆಗೆ ಬೆಳಗಾವಿ ಜಿಲ್ಲೆಗೆ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುತ್ತದೆ ಎಂಬ ಕಟೀಲು ಹೇಳಿಕೆ ವಿಚಾರ ಪ್ರಸ್ತಾಪಿಸಿದ ಸತೀಶ್ ಜಾರಕಿಹೊಳಿ ಅವರು, ಯಡಿಯೂರಪ್ಪನವರಿಗೆ ಕೊಡ್ತಿಲ್ಲ, ಇನ್ನೂ ರಮೇಶ ಜಾರಕಿಹೊಳಿ ಯಾವ ಲೆಕ್ಕ? ಎಂದು ಪ್ರಶ್ನಿಸಿದರು.

ಪಕ್ಷ ಕಟ್ಟಿದ ಯಡಿಯೂರಪ್ಪನವರನ್ನೇ ಬಿಜೆಪಿ ಮುಖಂಡರು ಸೈಡ್‌ಲೈನ್  ಮಾಡಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಾ? ಇದೆಲ್ಲ ರಮೇಶ್ ಜಾರಕಿಹೊಳಿ ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಲೇವಡಿ ಮಾಡಿದರು. ಮುಂದುವರಿದು, ಮಂತ್ರಿ ಪದವಿಗೆ ಕಾದು ಕುಳಿತಿರುವ ರಮೇಶ್ ಗೆ ಕಲ್ಲು ಎಸೆಯಬಾರದು ಅಂತಾ ಚಾಕಲೇಟ್ ತಿನ್ನಿಸುವ ಕೆಲಸ ಮಾಡುತ್ತಿದ್ದಾರೆ. ರಮೇಶ ಜಾರಕಿಹೊಳಿ ಸಿಟ್ಟಾದ್ರೆ ಏನಾದರೂ ಮಾಡಬಹುದು ಅನ್ನೋ ಭಯ ಬಿಜೆಪಿ ನಾಯಕರಿಗೆ ಇದೆ. ಹಿಂದಿನ ಸರ್ಕಾರ ಕೆಡವಿದ ರಮೇಶ ಜಾರಕಿಹೊಳಿಗೆ ಈ ಸರ್ಕಾರ ಕೆಡುವುದು ದೊಡ್ಡ ಮಾತಲ್ಲ ಎಂದರು.

ಒಂದು ಬಾರಿ ಬೈಪಾಸ್ ಸರ್ಜರಿ ಮಾಡಿದವನಿಗೆ ಎರಡನೇ ಬೈಪಾಸ್ ಸರ್ಜರಿ ಮಾಡೊದು ದೊಡ್ಡ ಕೆಲಸವಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿಗೆ ತಿಂಗಳಿಗೊಮ್ಮೆ ಚಾಕಲೇಟ್ ನೀಡುವ ಕೆಲಸ ಮಾಡ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಬಿಜೆಪಿ ಹೈಕಮಾಂಡ್ ಗುಜರಾತ್ ಚುನಾವಣೆಯಲ್ಲಿ ಬ್ಯುಸಿ:

ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಮೂರು ಭಾರಿ ಮಾತನಾಡಿದ್ದಾರೆ. ಈಗ ಮತ್ತೆ ಈ ಕುರಿತಂತೆ ಬಿಜೆಪಿ ಹೈಕಮಾಂಡ್ ಭೇಟಿ ಗೆ ದೆಹಲಿಗೆ ಹೊರಟಿದ್ದಾರೆ. ಆದ್ರೆ ಬಿಜೆಪಿ ಹೈಕಮಾಂಡ್ ಗುಜರಾತ್ ಚುನಾವಣೆಯಲ್ಲಿ ಬ್ಯುಸಿ ಆಗಿದೆ. ಇಂಥ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ಚುನಾವಣಾ ನಡೆಸುವ ಪ್ರಶ್ನೆಯೇ ಇಲ್ಲ ಎಂದರು.

Belagavi: ಸ್ವಪಕ್ಷದಲ್ಲಾದ ಪಿತೂರಿ ಗುಟ್ಟು ಬಿಚ್ಚಿಟ್ಟ ಜಾರಕಿಹೊಳಿ ಸಂದೇಶ ರವಾನಿಸಿದ್ದು ಯಾರಿಗೆ?

ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪನವರನ್ನೇ ನಮ್ಮ ನಾಯಕ ಅಂತಾ ಒಪ್ಪಿಕೊಂಡಿಲ್ಲ, ಇನ್ನೂ ರಮೇಶ ಜಾರಕಿಹೊಳಿ ಯಾವ ಲೆಕ್ಕ? ರಮೇಶ ಜಾರಕಿಹೊಳಿಗೆ ಆಗಾಗ ಏನಿದ್ದರೂ ಸಮಾಧಾನಕರ ಬಹುಮಾನ ಕೊಡ್ತಾರೆ ಅಷ್ಟೇ. ಹೀಗಾಗಿ ರಮೇಶಗೆ ಬಂದಾಗೊಮ್ಮೆ ಚಾಕಲೇಟ್ ಕೊಟ್ಟು ಕಳಿಸ್ತಾರೆ ಅಷ್ಟೇ ಎಂದು  ಮಂತ್ರಿ ಪದವಿ ಹಗಲುಗನಸು ಎಂದು ಲೇವಡಿ ಮಾಡಿದರು.

Follow Us:
Download App:
  • android
  • ios