ಬೆಳಗಾವಿ ಬೈ ಎಲೆಕ್ಷನ್: ಕೊನೆಗೂ ಪ್ರಬಲವಾಗಿ ಕೇಳಿಬಂತು ಒಬ್ಬರ ಹೆಸರು ..!
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಅಭ್ಯರ್ಥಿ ಆಯ್ಕೆ ಸಂಬಂಧ ಈಗಾಗಲೇ ಸಭೆ, ಚರ್ಚೆಗಳು ಸಹ ನಡೆದಿವೆ. ಅಂತಿಮವಾಗಿ ಒಂದು ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಬೆಳಗಾವಿ, (ಡಿ.08): ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಕಾಂಗ್ರೆಸ್ ವೇಗ ನೀಡಿದೆ.
ಈಗಾಗಲೇ ಅಭ್ಯರ್ಥಿ ಆಯ್ಕೆ ಸಂಬಂಧ ಹಿರಿಯ ನಾಯಕ ಎಂ.ಬಿ. ಪಾಟೀಲ್ ನೇತೃತ್ವದ ಸಮಿತಿ ರಚಿಸಿದೆ. ಈ ಸಮಿತಿಯು ಸಹ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದು, ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪವಾಗಿದೆ.
ಕಾಂಗ್ರೆಸ್ ಮಹತ್ವದ ಸಭೆ: ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್‌ಗೆ ಕೈ ಅಭ್ಯರ್ಥಿ ಯಾರು..?
ಈ ಸಂಬಂಧ ಈ ಬಗ್ಗೆ ಎಂಬಿ ಪಾಟೀಲ್ ನೇತೃತ್ವದ ತಂಡ ಕೆಪಿಸಿಸಿ ಅಧ್ಯಕ್ಷ ಹಾಗೂ ಸಿದ್ದರಾಮಯ್ಯನವರನ್ನ ಭೇಟಿ ಮಾಡಿ ಬೆಳಗಾವಿ ಜಿಲ್ಲೆಯ ನಾಯಕರ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ನಾನು ಕಣಕ್ಕಿಳಿಯಬೇಕೆಂಬ ಒತ್ತಡ ಇದೆ. ಅಂತಿಮವಾಗಿ ಬೆಳಗಾವಿಯಲ್ಲಿ ಸಭೆ ನಡೆಯಬೇಕಿದ್ದು, ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ ತಲೆಬಾಗಲೇಬೇಕು ಎಂದು ಹೇಳುವ ಮೂಲಕ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದರು.
ಈ ಹಿಂದೆಯೂ ಸಹ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸತೀಶ್ ಜಾರಕಿಹೊಳಿ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದರು. ಇದೀಗ ಅದನ್ನೇ ಪುನರುಚ್ಚರಿಸಿದ್ದು, ಪರೋಕ್ಷವಾಗಿ ಸ್ಪರ್ಧೆ ರೆಡಿ ಎಂದು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಬಿಟ್ಟರೇ ಬೆಳಗಾವಿ ಬೈ ಎಲೆಕ್ಷನ್‌ಗೆ ನಿಲ್ಲುವ ಪ್ರಭಾವಿ ಅಭ್ಯರ್ಥಿ ಅಂದ್ರೆ ಅದು ಪ್ರಕಾಶ್ ಹುಕ್ಕೇರಿ. ಆದ್ರೆ, ಸಂಸದ ಸುರೇಶ್ ಅಂಗಡಿ ಅವರ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಿದರೇ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಈಗಾಗಲೇ ಬಹಿರಂಗವಾಗಿಯೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂತಿಮವಾಗಿ ಸತೀಶ್ ಜಾರಕಿಹೊಳಿ ಅವರನ್ನೇ ಅಂತಿಮಗೊಳಿಸುವ ಸಾಧ್ಯತೆಗಳು ಹೆಚ್ಚಿವೆ.
ಇನ್ನು ಬಿಜೆಪಿಯಿಂದ ಅಭ್ಯರ್ಥಿ ಆಯ್ಕೆ ಚರ್ಚೆಗಳು ನಡೆದಿದ್ದು, ಮೊದಲಿಗೆ ಸಚಿವ ಜಗದೀಶ್ ಶೆಟ್ಟರ್ ಹೆಸರು ಬಲವಾಗಿ ಕೇಳಿಬಂದಿದೆ. ಆದ್ರೆ, ಅಂತಿಮವಾಗಿ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ.