ಶಿವಾಜಿನಗರದಲ್ಲಿ ಕಳೆದ ಬಾರಿ 13 ಸಾವಿರ ಮತಗಳ ಅಂತರದಿಂದ ಸೋತಿದ್ದೇವೆ. ಈ ಬಾರಿ 13 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಎಲ್ಲರೂ ತಮ್ಮ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಪ್ರತಿ ಮನೆ ಮನೆಗೂ ಬಿಜೆಪಿ ಬಾವುಟ ಕಟ್ಟುವ ಅಭಿಯಾನ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು (ಜ.02): ಶಿವಾಜಿನಗರದಲ್ಲಿ ಕಳೆದ ಬಾರಿ 13 ಸಾವಿರ ಮತಗಳ ಅಂತರದಿಂದ ಸೋತಿದ್ದೇವೆ. ಈ ಬಾರಿ 13 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಎಲ್ಲರೂ ತಮ್ಮ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಪ್ರತಿ ಮನೆ ಮನೆಗೂ ಬಿಜೆಪಿ ಬಾವುಟ ಕಟ್ಟುವ ಅಭಿಯಾನ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು ಬಹಳ ಸಂತೋಷ ಆಗಿದೆ. ಶಿವಾಜಿನಗರ ವಸಂತನಗರದ ವಾರ್ಡ್ ನಿಂದ ನಮ್ಮ ವಿಜಯ ಸಂಕಲ್ಪ ಶುರುವಾಗುತ್ತದೆ. ನನಗೆ, ನಮ್ಮ ಅಧ್ಯಕ್ಷರು ನೀವು ಎಲ್ಲಿಂದ ಅಭಿಯಾನಕ್ಕೆ ಚಾಲನೆ ಕೊಡ್ತೀರಾ ಅಂತ ಕೇಳಿದ್ದರು. ಆಗ ಅತ್ಯಂತ ಕಷ್ಟ ಇರುವ ಕ್ಷೇತ್ರ ಎಲ್ಲಿದೆ ಅಲ್ಲಿ ಕೊಡಿ ಎಂದು ಹೇಳಿದೆ. ಆಮೇಲೆ ನಾನೇ ಶಿವಾಜಿನಗರ ಕೊಡುವಂತೆ ತಿಳಿಸಿದೆ. ಶಿವಾಜಿನಗರದಲ್ಲಿ ಬಿಜೆಪಿ ಗೆದ್ದಾಗ ಮಾತ್ರವೇ ಭಾರತ ಮಾತಾಕೀ ಜೈ ಆಗುತ್ತದೆ. ನಮಗೆ ಶಿವಾಜಿನಗರ ಗೆಲುವು ಕಷ್ಟ ಇಲ್ಲ. ಯಾಕೆಂದರೆ ಈ ಮೊದಲು ಬಿಜೆಪಿ ಅಭ್ಯರ್ಥಿ ಇಲ್ಲಿಂದ ಗೆದ್ದಿದ್ದರು ಎಂದು ತಿಳಿಸಿದರು.
ಅಮುಲ್ ಸಂಸ್ಥೆಯಲ್ಲಿ ಕೆಎಂಎಫ್ ವಿಲೀನ ಇಲ್ಲ: ಸಿಎಂ, ಜೋಶಿ
ಕಷ್ಟದ ಕ್ಷೇತ್ರ ಶಿವಾಜಿನಗರ ಗೆಲುವು ನಮ್ಮ ಗುರಿ: ಶಿವಾಜಿನಗರ ದ ಬಗ್ಗೆ ನನಗೆ ಗೊತ್ತಿದೆ. ಇಲ್ಲಿ ಬಿಜೆಪಿ ಗೆದ್ದಿರುವ ಕ್ಷೇತ್ರವಾಗಿತ್ತು. ಈಗಲೂ ಗೆಲ್ಲಲು ಶಕ್ತಿ ಇದೆ, ಆದರೆ ಸ್ವಲ್ಪ ಕಷ್ಟ ಪಡಬೇಕು. ನಾನು ವಿಜಯ ಅಭಿಯಾನಕ್ಕೆ ಬಂದಿಲ್ಲ, ಕ್ಷೇತ್ರ ಗೆಲ್ಲಲು ಬಂದಿದ್ದೇನೆ. ಯಾವಾಗಲೇ ಕರೆದರೂ ನಾನು ಇಲ್ಲಿಗೆ ಬರುತ್ತೇನೆ. ಈ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ. ಶಿವಾಜಿನಗರ ಕ್ಷೇತ್ರದಂತಹ ಕ್ಷೇತ್ರ ಗೆಲ್ಲುತ್ತೇವೆ ಎಂದಾದರೆ ರಾಜ್ಯದಲ್ಲಿ ನೂರ ನೂರಕ್ಕೆ ಗೆಲ್ಲುತ್ತೇವೆ ಎಂದರ್ಥವಾಗಲಿದೆ. ಪ್ರತಿಯೊಂದು ಬೂತ್ ನಲ್ಲಿ ಎಸ್ಸಿಎಸ್ಟಿ, ಮಹಿಳೆ, ಯುವ, ಮೋರ್ಚಾದವರನ್ನು ಸೇರಿಸಿಕೊಂಡು ಸ್ಥಾಪನೆ ಮಾಡಿ, ಪೇಜ್‌ಕಮಿಟಿ ರಚಿಸಿ ಮೂರು ತಿಂಗಳಲ್ಲಿ ಅಭಿಯಾನ ಮಾಡಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗೆಳನ್ನು ಅಭಿಯಾನ ಮಾಡಿ ಕಾಂಗ್ರೆಸ್ ಜನ ವಿರೋಧಿ ನೀತಿಯನ್ನು ಜನರಿಗೆ ತಿಳಿಸಸಲಾಗುತ್ತದೆ ಎಂದರು.
ಸ್ಮಾರ್ಟ್ ಸಿಟಿ ಕೆಲಸದಲ್ಲಿ ಶಾಸಕರ ಕ್ರೆಡಿಟ್ ಇಲ್ಲ: ಸ್ಮಾರ್ಟ್ ಸಿಟಿ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಮೋದಿ ಕೊಟ್ಟಿದ್ದಾರೆ. ಶಿವಾಜಿ ನಗರದ ಬಹುತೇಕ ಭಾಗದಲ್ಲಿ ಸ್ಮಾರ್ಟ್ ಸಿಟಿ ಕೆಲಸ ಆಗಿದೆ. ಆದರೆ, ಇಲ್ಲಿ ಶಾಸಕರು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಜನರಿಗೆ ತಿಳಿಸಿ, ಮೋದಿಯಿಂದ ಅಭಿವೃದ್ಧಿ ಆಗಿದ್ದು. 8 ಸಾವಿರ ಕೋಟಿ ಅನುದಾನ ನಾವು ಕೊಟ್ಟಿದ್ದೇವೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ವಿಪರೀತ ಮಳೆ ಬಂದ್ರು ನಾವು ರಸ್ತೆ ನಿರ್ಮಾಣ ಮಾಡಿದ್ದೇವೆ. ಮಳೆಯಿಂದ ಪಾಟ್ ಹೋಲ್ ಬಂದಿತ್ತು ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರಿಗೆ ವಿಶೇಷ ಯೋಜನೆ ನಾವು ಹಾಕಿಕೊಂಡಿದ್ದೇವೆ. ಸಬ್ ಅರ್ಬನ್ ಟ್ರೈನ್ ಕೆಲಸ ಆರಂಭವಾಗಿದೆ. ಬೆಂಗಳೂರು ಅಭಿವೃದ್ಧಿ ಕೆಲಸದ ಪಟ್ಟಿನಾವು ಕೊಡುತ್ತೇವೆ. ಕಾಂಗ್ರೆಸ್ ಕೇವಲ ಆರೋಪ ಮಾಡುತ್ತೆ, ಆಧಾರ ಯಾವುದೆ ಇಲ್ಲ. ನನಗೆ ವಿಶ್ವಾಸ ಇದೆ ಮತ್ತೆ ನಾವೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ಕಳಸಾ ಬಂಡೂರಿ, ನಾವು ನುಡಿದಂತೆ ನಡೆದುಕೊಂಡಿದ್ದೇವೆ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಜನರ ಅಭಿವೃದ್ಧಿ ಬಗ್ಗೆ ಯೋಚಿಸೊಲ್ಲ: ಜನರ ಸುತ್ತಲೂ ಅಭಿವೃದ್ಧಿ ಆಗಬೇಕೇ ಹೊರತು, ಅಭಿವೃದ್ಧಿ ಸುತ್ತ ಜನರು ಓಡಾಡಬಾರದು. ಕಾಂಗ್ರೆಸ್ ಯಾವತ್ತಿಗೂ ಪವರ್ ಪಾಲಿಟಿಕ್ಸ್ ಮಾಡಿದೆ. ಜನರನ್ನು ಜಾತಿ, ಧರ್ಮದಿಂದ ಒಡೆಯುವ ಕೆಲಸದಿಂದ ಅಧಿಕಾರಕ್ಕೆ ಬರೋದು. ಇಬ್ಬರ ನಡುವೆ ಜಗಳದ ಬೆಂಕಿ ಹಚ್ಚಿ ಕೋತಿ ತಾನು ತಿಂತು ಅನ್ನೋ ಮಾತಿದೆಯಲ್ಲ, ಹಾಗೇ ಕಾಂಗ್ರೆಸ್ ನವರ ಬುದ್ದಿಯಾಗಿದೆ. ಅವರಿಗೆ ದೇಶ ರಾಜ್ಯದ ಬಗ್ಗೆ ಏನು ಗೊತ್ತೇ ಇಲ್ಲ. ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕಾಗಿ ಹೋರಾಟ ಮಾಡ್ತಿದೆ. ಆದರೆ ಬಿಜೆಪಿ ಭಾರತದ ಅಭಿವೃದ್ಧಿಗಾಗಿ ಹೋರಾಟ ಮಾಡ್ತಿದೆ. ಕಾಂಗ್ರೆಸ್ ಜನರ ಬಗ್ಗೆ ಯಾವತ್ತಿಗೂ ಯೋಚನೆ ಮಾಡಿಲ್ಲ. ಬಿಜೆಪಿ ಯಾವತ್ತಿಗೂ ಅಸ್ತಿತ್ವದ ಬಗ್ಗೆ ಯೋಚನೆ ಮಾಡಿಲ್ಲ. ನಾವು ಜನರ ರಾಜಕಾರಣದಿಂದ ಒಪ್ಪಿ ಜನರ ರಾಜಕಾರಣ ಮಾಡ್ತಿದ್ದೇವೆ. ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಸಂಸದ ಪಿ.ಸಿ. ಮೋಹನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.