ಬೆಂಗಳೂರು, (ಜ.08): ಡಿಸೆಂಬರ್ 15ರಂದು ವಿಧಾನ ಪರಿಷತ್​ ಕಲಾಪದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಚನೆಯಾಗಿದ್ದ ಸದನ ಸಮಿತಿಯ ಸದಸ್ಯ ಸ್ಥಾನಕ್ಕೆ ಬಿಜೆಪಿಯ  ಎಚ್.ವಿಶ್ವನಾಥ್ ಮತ್ತು ಎಸ್.ವಿ ಸಂಕನೂರು ರಾಜೀನಾಮೆ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಚ್​.ವಿಶ್ವನಾಥ್​, ಪರಿಷತ್​ನಲ್ಲಿ ನಡೆದ ಗಲಾಟೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಉನ್ನತ ಮಟ್ಟದ ತನಿಖೆ ಆಗಬೇಕು. ಆ ಗದ್ದಲ ಸಂದರ್ಭದಲ್ಲಿ ನಾವು ಅಲ್ಲಿ ಇದ್ದೆವು. ಹಾಗಾಗಿ ನಾನು ಇದನ್ನು ಧಿಕ್ಕರಿಸಿ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಪರಿಷತ್ ಗದ್ದಲ ಪ್ರಕರಣ: ತನಿಖಾ ಸಮಿತಿಗೆ ಬಿಜೆಪಿ ಸದಸ್ಯರ ರಾಜೀನಾಮೆ

ಇದು ನಾವೆಲ್ಲಾ ತಲೆ ತಗ್ಗಿಸುವ ವಿಚಾರ. ಲೋಕಸಭಾ ಸ್ಪೀಕರ್​​ ಓಂ ಬಿರ್ಲಾ ಕೂಡಾ ಇದರ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಹೆಚ್​​. ವಿಶ್ವನಾಥ್​ ಒತ್ತಾಯಿಸಿದರು.