ಹಿಂದೂ ಎಂದು ಕರೆಯಲು ಇಷ್ಟವಿಲ್ಲದಿದ್ದರೆ ಭಾರತ, ಇಂಡಿಯಾ ಎಂದು ಯಾವ ಹೆಸರಿನಿಂದಾದರೂ ಕರೆಯಿರಿ. ಆದರೆ, ಆಲೋಚನೆ ಮಾತ್ರ ಒಂದು ರಾಷ್ಟವಾಗಿರಲಿ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ.ಮೋಹನ್ ಭಾಗವತ್‌ ಹೇಳಿದರು.

ಬೆಂಗಳೂರು (ನ.09): ಹಿಂದೂ ಎಂದು ಕರೆಯಲು ಇಷ್ಟವಿಲ್ಲದಿದ್ದರೆ ಭಾರತ, ಇಂಡಿಯಾ ಎಂದು ಯಾವ ಹೆಸರಿನಿಂದಾದರೂ ಕರೆಯಿರಿ. ಆದರೆ, ಆಲೋಚನೆ ಮಾತ್ರ ಒಂದು ರಾಷ್ಟವಾಗಿರಲಿ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ.ಮೋಹನ್ ಭಾಗವತ್‌ ಹೇಳಿದರು. ಆರ್‌ಎಸ್‌ಎಸ್‌ ನೂರನೇ ವರ್ಷದ ಆಚರಣೆ ಪ್ರಯುಕ್ತ ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ‘ಸಂಘದ 100 ವರ್ಷ ಪಯಣ, ನವ ಕ್ಷಿತಿಜ’ ಶೀರ್ಷಿಕೆಯಡಿ ಆಯೋಜಿಸಿರುವ ಎರಡು ದಿನಗಳ ಉಪನ್ಯಾಸ ಮಾಲೀಕೆಯಲ್ಲಿ ಮಾತನಾಡಿದ ಅವರು, ಹಿಂದೂ ಭಾವನೆಯನ್ನು ಮರೆತಾಗಲೆಲ್ಲ ಭಾರತವು ಒಡೆದಿದೆ. ಕುಟುಂಬಗಳು ವಿಭಜನೆಯಾಗಿವೆ ಎಂದರು.

ಸಮಾಜದಲ್ಲಿ ವಿವಿಧ ಸೇವಾ ಚಟುವಟಿಕೆಗಳಲ್ಲಿ, ಸತ್ಕಾರ್ಯದಲ್ಲಿ ತೊಡಗಿರುವ ಸಜ್ಜನಶಕ್ತಿಯು ನಮ್ಮ ಜೊತೆಗೆ ಕೈಜೋಡಿಸಬಹುದು. ಪರೋಕ್ಷವಾಗಿಯೂ ನಮಗೆ ಸಹಕರಿಸಬಹುದು. ತಮ್ಮಷ್ಟಕ್ಕೆ ತಾವೇ ಸಮಾಜಕ್ಕೆ ಏನಾದರೂ ಒಳಿತನ್ನು ಮಾಡುತ್ತ ಮುಂದುವರಿಯಬಹುದು. ಸಮಾಜಕ್ಕೆ ಯಾವುದೇ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದಾದರೆ, ಅವರು ನಮ್ಮ ಜೊತೆಗೆ ಸೇರದೇ ಇದ್ದರೂ ನಮ್ಮ ಕೆಲಸದ ಭಾಗವೇ ಆಗಿದ್ದಾರೆ ಎಂದು ಅರ್ಥ ಎಂದು ಹೇಳಿದರು.

ಸರಿಯಾದ ಮಾಹಿತಿ ಪಡೆದು ಪರ-ವಿರೋಧ ನಿಲುವು: ಎಲ್ಲರೂ ಗಣವೇಶವನ್ನು ಧರಿಸಬೇಕು ಎಂದು ಸಂಘವು ಬಯಸುವುದಿಲ್ಲ. ದೇಶದಲ್ಲಿ ಒಂದು ಧನಾತ್ಮಕ ವಾತಾವರಣ ನಿರ್ಮಾಣ ಆಗಬೇಕೆಂಬುದು ನಿರೀಕ್ಷೆ. ಮುಂದಿನ ಕೆಲವು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಅಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತೇವೆ ಎಂಬ ಆಶಯವಿದೆ. ಸಂಘವು ಆರಂಭವಾಗಿ ನೂರು ವರ್ಷ ಪೂರೈಸಿದರೂ ಕೆಲವರಲ್ಲಿ ಪೂರ್ಣ ನಿಖರ ಮಾಹಿತಿ ಇಲ್ಲ. ಆ ರೀತಿಯಾಗಿ ಸರಿಯಾದ ಮಾಹಿತಿಯನ್ನು ನೀಡುವ ಸಲುವಾಗಿ ಈ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಯಾರನ್ನೂ ನಮ್ಮ ಪರ ಮನವೊಲಿಸುವ ಉದ್ದೇಶವಿಲ್ಲ. ಸರಿಯಾದ ಮಾಹಿತಿಯ ಆಧಾರದಲ್ಲಿ ಸಂಘದ ಕುರಿತು ಪರ ಅಥವಾ ವಿರುದ್ಧ ನಿಲುವನ್ನು ತಳೆಯಬಹುದು ಎ೦ದು ಮೋಹನ್‌ ಭಾಗವತ್‌ ತಿಳಿಸಿದರು.

ಶತಮಾನದ ವರ್ಷ ಯೋಜನೆಗಳು: ಆರ್‌ಎಸ್‌ಎಸ್‌ ಶತಮಾನದ ವರ್ಷದಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜಕ್ಕಾಗಿ ಒಳಿತನ್ನು ಬಯಸುವ, ಅದಕ್ಕಾಗಿ ತಮ್ಮಿಂದ ಏನಾದರೂ ಮಾಡಬೇಕು ಎಂದು ಬಯಸುವ ಸಜ್ಜನ ಶಕ್ತಿಯ ಸಹಯೋಗ ಪಡೆಯುವುದು, ಸಮಾಜದಲ್ಲಿ ಧನಾತ್ಮಕತೆಯನ್ನು ಮೂಡಿಸಲು ಸಜ್ಜನಶಕ್ತಿಯ ಜಾಲವನ್ನು ರೂಪಿಸುವ ಉದ್ದೇಶವಿದೆ ಎಂದರು.

ಪ್ರತಿ ತಿಂಗಳು ಸದ್ಭಾವನಾ ಕಾರ್ಯಕ್ರಮ

ಸಮಾಜದಲ್ಲಿ ವಿವಿಧ ಜಾತಿ ನಾಯಕರ ನಡುವೆ ಸದ್ಭಾವನೆಯನ್ನು ರೂಪಿಸಲು ಸದ್ಭಾವನಾ ಕಾರ್ಯದ ಆಯೋಜನೆ, ಪ್ರತಿ ತಿಂಗಳು ವಿವಿಧ ಜಾತಿ ಸಮುದಾಯದ ನಾಯಕರು ಒಂದೆಡೆ ಸೇರಿಸುವುದು, ಸಮುದಾಯದ ಉನ್ನತೀಕರಣಕ್ಕೆ ನಡೆಯುತ್ತಿರುವ ಕ್ರಮಗಳೇನು ಎನ್ನುವುದನ್ನು ಇತರರಿಗೆ ತಿಳಿಸಲಾಗುವುದು. ಸಮಾಜದಲ್ಲಿನ ಒಂದು ಸಮಸ್ಯೆಯನ್ನು ಪರಿಹರಿಸಲು ಅಥವಾ ಒಂದು ಅವಶ್ಯಕತೆಯನ್ನು ಪೂರೈಸಲು ಎಲ್ಲರೂ ಸೇರಿ ಏನು ಮಾಡಬಹುದು ಎಂದು ಆಲೋಚಿಸಲಾಗುವುದು ಎಂದರು.