ಕಾಂಗ್ರೆಸ್‌ ಎಂಎಲ್‌ಸಿ ಟಿಕೆಟ್‌ ಅರ್ಜಿ ಜತೆಗೆ 1 ಲಕ್ಷ ರು. ಡಿಡಿ ಕಡ್ಡಾಯ! ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಗಳಿಂದ ಕಾಂಗ್ರೆಸ್‌ ಅರ್ಜಿ ಆಹ್ವಾನಿಸಿದ್ದು, 1 ಲಕ್ಷ ರು. ಡಿ.ಡಿ ಸೂಚನೆ

ಬೆಂಗಳೂರು (ಸೆ.19): ರಾಜ್ಯದ 29 ವಿಧಾನಪರಿಷತ್‌ ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಗಳಿಂದ ಕಾಂಗ್ರೆಸ್‌ ಅರ್ಜಿ ಆಹ್ವಾನಿಸಿದ್ದು, 1 ಲಕ್ಷ ರು. ಡಿ.ಡಿ. ಜೊತೆಗೆ ಅರ್ಜಿ ಸಲ್ಲಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದ್ದಾರೆ.

ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಹಾಗೂ ಪದವೀಧರ, ಶಿಕ್ಷಕರ ಕ್ಷೇತ್ರಗಳ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧೆಗೆ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಅರ್ಜಿ ಸಲ್ಲಿಸುವ ಕುರಿತು ಶನಿವಾರ ಡಿಕೆಶಿ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಯುವ ಕಾಂಗ್ರೆಸ್‌ ವಕ್ತಾರರ ಶೋಧಕ್ಕೆ ದೇಶಾದ್ಯಂತ ‘ಟ್ಯಾಲೆಂಟ್‌ ಹಂಟ್‌’

ಇದರಲ್ಲಿ ಜಿಲ್ಲಾ ಪ್ರದೇಶ ಕಾಂಗ್ರೆಸ್‌ ಸಮಿತಿಗಳಿಂದ ಪಡೆದ ಅರ್ಜಿಗಳನ್ನು ಸೆ.30ರೊಳಗಾಗಿ ಭರ್ತಿ ಮಾಡಿ ಸಲ್ಲಿಸಬೇಕು. ಆಕಾಂಕ್ಷಿಗಳಿಗೆ ನೀಡುವ ಪ್ರತಿಯೊಂದು ಅರ್ಜಿಯಲ್ಲೂ ಕ್ರಮ ಸಂಖ್ಯೆಯನ್ನು ಮುದ್ರಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಮೊಹರಿನೊಂದಿಗೆ ವಿತರಿಸಬೇಕು. ಅರ್ಜಿ ಸ್ವೀಕರಿಸುವ ವೇಳೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯವರು ಆಕಾಂಕ್ಷಿಗಳಿಂದ ಡಿ.ಡಿ. ಲಗತ್ತಿಸಿರುವ ಅರ್ಜಿಗಳನ್ನು ಮಾತ್ರ ಸ್ವೀಕರಿಸಬೇಕು.

ಪ್ರತಿಯೊಂದು ಅರ್ಜಿಯ ಜೊತೆಗೆ ‘ಪ್ರೆಸಿಡೆಂಟ್‌ ಕೆಪಿಸಿಸಿ ಬಿಲ್ಡಿಂಗ್‌ ಫಂಡ್‌’ ಹೆಸರಿಗೆ 1 ಲಕ್ಷ ರು. ಮೊತ್ತದ ಡಿ.ಡಿ. ಲಗತ್ತಿಸಿರುವ ಅರ್ಜಿಗಳನ್ನು ಮಾತ್ರ ಸ್ವೀಕರಿಸಬೇಕು. ಇನ್ನು ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇರುವ, ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಹಾಗೂ ಕೋಮುವಾದವನ್ನು ಪ್ರಚೋದಿಸಿರುವ, ಕಾಂಗ್ರೆಸ್‌ ಪಕ್ಷದ ತತ್ವ-ಸಿದ್ಧಾಂತಗಳ ವಿರುದ್ಧವಾಗಿ ಆಚಾರ ಮತ್ತು ವಿಚಾರವನ್ನು ಪ್ರತಿಪಾದಿಸುವ ಯಾವುದೇ ಆಕಾಂಕ್ಷಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿಗಳಿಗೆ ನಿರ್ದೇಶನ ನೀಡಿದ್ದಾರೆ.