ಭೋಪಾಲ್‌[ಮಾ.14]: ಕಾಂಗ್ರೆಸ್‌ನ 22 ಶಾಸಕರ ರಾಜೀನಾಮೆಯಿಂದಾಗಿ ಮಧ್ಯಪ್ರದೇಶದಲ್ಲಿ ಕಂಡುಬಂದಿರುವ ರಾಜಕೀಯ ಹೈಡ್ರಾಮ ಶುಕ್ರವಾರವೂ ಮುಂದುವರೆದಿದೆ. ಮುಖ್ಯಮಂತ್ರಿ ಕಮಲ್‌ನಾಥ್‌ ಶುಕ್ರವಾರ ರಾಜ್ಯಪಾಲ ಲಾಲಾಜಿ ಟಂಡನ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಮೂರು ಬಿಜೆಪಿ ವಿರುದ್ದ ಮೂರು ಪುಟಗಳ ದೂರು ನೀಡಿದ ಕಮಲ್‌ನಾಥ್‌, ಬಿಜೆಪಿ ನಾಯಕರು ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಬಿಜೆಪಿ ಕೂಡಿ ಹಾಕಿರುವ ಶಾಸಕರ ಬಿಡುಗಡೆಗೆ ಮಧ್ಯಪ್ರವೇಶಿಸಬೇಕು ಎಂದು ಕೋರಿದ್ದಾರೆ. ಅಲ್ಲದೇ ಇದೇ ವೇಳೆ ಬಹುಮತ ಸಾಬೀತು ಪಡಿಸಲು ಸಿದ್ದ ಎಂದೂ ಹೇಳಿದ್ದಾರೆ.

ಇದೇ ವೇಳೆ 22 ರೆಬೆಲ್‌ ಶಾಸಕರ ಪೈಕಿ ಇರುವ ಆರು ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಗುರುವಾರ ಕಮಲ್‌ನಾಥ್‌ ಕೋರಿದ್ದ ಮನವಿಯನ್ನು ರಾಜ್ಯಪಾಲರು ಪುರಸ್ಕರಿಸಿದ್ದು, ಆರು ಸಚಿವರನ್ನು ಸಂಪುಟದಿಂದ ಕಿತ್ತು ಹಾಕಲಾಗಿದೆ.

ಏತನ್ಮಧ್ಯೆ ರಾಜೀನಾಮೆ ನೀಡಿದ ಶಾಸಕರು ಶುಕ್ರವಾರ ಖುದ್ದಾಗಿ ಹಾಜರಾಗಿ ಹೇಳಿಕೆ ನೀಡಬೇಕು ಎಂದು ಸ್ಪೀಕರ್‌ ನೋಟಿಸ್‌ ನೀಡಿದ ಹೊರತಾಗಿಯೂ, ಬೆಂಗಳೂರಿನಲ್ಲಿ ಇರುವ ಶಾಸಕರು ಭೋಪಾಲ್‌ಗೆ ತೆರಳದೇ ಇಲ್ಲೇ ಉಳಿದುಕೊಂಡರು. ಭೋಪಾಲ್‌ಗೆ ತೆರಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರಾದರೂ, ಕೊನೆ ಕ್ಷಣದಲ್ಲಿ ತೆರಳದೇ ಮತ್ತೆ ರೆಸಾರ್ಟ್‌ಗೆ ಮರಳಿದರು.

ಈ ವೇಳೆ ಅತ್ತ ಶಾಸಕರ ಆಗಮನಕ್ಕಾಗಿ ಕಾದು ಕುಳಿತಿದ್ದ ಸ್ಪೀಕರ್‌ ಪ್ರಜಾಪತಿ, ನೀಡಿದ ಸಮಯಕ್ಕಿಂತ ಮೂರು ಗಂಟೆಗಳ ಕಾಲ ಹೆಚ್ಚು ಹೊತ್ತು ವಿಧಾನಸೌಧದಲ್ಲೆ ಕಾದು ತೆರಳಿದರು. ಹೀಗಾಗಿ ಸ್ಪೀಕರ್‌ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಇವೆಲ್ಲದರ ನಡುವೆ, ಕೊರೋನಾ ಭೀತಿಯಿಂದಾಗಿ ಮಾಚ್‌ರ್‍ 16 ರಿಂದ ಆರಂಭವಾಗಬೇಕಿದ್ದ ವಿಧಾನಸಭಾ ಅಧಿವೇಶನವನ್ನು ಮುಂದೂಡುವಂತೆ ಕಮಲ್‌ನಾಥ್‌ ಮನವಿ ಮಾಡುವ ಮೂಲಕ ಸರ್ಕಾರವನ್ನು ಶತಾಯಗತಾಯ ಉಳಿಸುವ ಪ್ರಯತ್ನ ಮಾಡಿದ್ದಾರೆ.