ತರೀಕೆರೆ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದ ಶ್ರೀನಿವಾಸ್‌ ಹಾಗೂ ಗೋಪಿಕೃಷ್ಣ ನಡುವಿನ ಟಿಕೆಟ್‌ ಪೈಪೋಟಿಯಲ್ಲಿ ಶ್ರೀನಿವಾಸ್‌ ಕೈ ಮೇಲಾಗಿದೆ. ಇದರಿಂದ ಮಡಿವಾಳ ಸಮುದಾಯದ ಗೋಪಿಕೃಷ್ಣ ಬಂಡಾಯವೇಳುವ ಸಾಧ್ಯತೆಯಿದೆ.

ಬೆಂಗಳೂರು(ಏ.16): ರಾಜ್ಯ ಕಾಂಗ್ರೆಸ್‌ ಶನಿವಾರ ಬಿಡುಗಡೆ ಮಾಡಿರುವ ಮೂರನೇ ಪಟ್ಟಿಯಲ್ಲಿ ಟಿಕೆಟ್‌ ವಂಚಿತರಾದ ಆಕಾಂಕ್ಷಿಗಳಿಂದ 6 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಬಂಡಾಯ ಎದುರಾಗುವ ಸಾಧ್ಯತೆಯಿದೆ. ಕಾಂಗ್ರೆಸ್‌ ಹಿರಿಯ ನಾಯಕ, ಪರಿಷತ್‌ ಚುನಾವಣೆಗೆ ಅವಕಾಶ ನಿರಾಕರಿಸಿದ್ದಕ್ಕೆ ಸಿಡಿದೆದ್ದಿದ್ದ ಎಸ್‌.ಆರ್‌.ಪಾಟೀಲ್‌ ಅವರಿಗೆ ಪಕ್ಷ ಟಿಕೆಟ್‌ ನಿರಾರಿಸಿದೆ. ಎಸ್‌.ಆರ್‌.ಪಾಟೀಲ್‌ ಬೀಳಗಿ ಅಥವಾ ದೇವರಹಿಪ್ಪರಗಿ ಎರಡರಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದರು. ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಬೀಳಗಿ ಕ್ಷೇತ್ರದಿಂದ ಅವಕಾಶ ನೀಡದಂತೆ ಪಟ್ಟು ಹಿಡಿದ ಪರಿಣಾಮ 3ನೇ ಪಟ್ಟಿಯಲ್ಲಿ ದೇವರಹಿಪ್ಪರಗಿ ಕ್ಷೇತ್ರದಿಂದಾದರೂ ಟಿಕೆಟ್‌ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಎಸ್‌.ಆರ್‌.ಪಾಟೀಲ್‌ ಇದ್ದರು. ಇದೀಗ ನಿರೀಕ್ಷೆ ಹುಸಿಯಾಗಿರುವುದರಿಂದ ಬಂಡಾಯ ಏಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಇನ್ನು ತರೀಕೆರೆ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದ ಶ್ರೀನಿವಾಸ್‌ ಹಾಗೂ ಗೋಪಿಕೃಷ್ಣ ನಡುವಿನ ಟಿಕೆಟ್‌ ಪೈಪೋಟಿಯಲ್ಲಿ ಶ್ರೀನಿವಾಸ್‌ ಕೈ ಮೇಲಾಗಿದೆ. ಇದರಿಂದ ಮಡಿವಾಳ ಸಮುದಾಯದ ಗೋಪಿಕೃಷ್ಣ ಬಂಡಾಯವೇಳುವ ಸಾಧ್ಯತೆಯಿದೆ.

ಸವದಿ, ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಗೆ ಹಾನಿ: ಪ್ರಭಾಕರ ಕೋರೆ

ಇನ್ನು ಹಿರಿಯ ನಾಯಕಿ ಶಕುಂತಲಾ ಶೆಟ್ಟಿ ಆಕಾಂಕ್ಷಿಯಾಗಿದ್ದ ಪುತ್ತೂರಿನಲ್ಲಿ ಅಶೋಕ್‌ ಕುಮಾರ್‌ ರೈ ಅವರಿಗೆ ಅವಕಾಶ ನೀಡಲಾಗಿದೆ. ಮದ್ದೂರಿನಲ್ಲಿ ಎಸ್‌.ಎಂ. ಕೃಷ್ಣ ಅವರ ಸಂಬಂಧಿ ಗುರುಚರಣ್‌ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್‌ ಪಕ್ಷ ಸಮ್ಮಿಶ್ರ ಸರ್ಕಾರ ಪತನದಲ್ಲಿ ಸಹಕರಿಸಿದ್ದ ಹಾಗೂ ಮದ್ದೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಉದಯ್‌ ಅವರಿಗೆ ಟಿಕೆಟ್‌ ನೀಡಿದೆ. ಹೀಗಾಗಿ ಗುರುಚರಣ್‌ ಬಂಡಾಯ ಏಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ತೇರದಾಳದಲ್ಲಿ ಉಮಾಶ್ರೀ ಬದಲಿಗೆ ಸಿದ್ದಪ್ಪ ರಾಮಪ್ಪ ಕೊನ್ನೂರು ಅವರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಮಾಜಿ ಸಚಿವ ಉಮಾಶ್ರೀ ಅವರು ಅಸಮಾಧಾನಗೊಳ್ಳುವ ಸಾಧ್ಯತೆಯಿದೆ.

ಹರಪ್ಪನಹಳ್ಳಿಯಲ್ಲಿ ಎನ್‌.ಕೊಟ್ರೇಶ್‌ ಅವರಿಗೆ ಅವಕಾಶ ನೀಡಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಪುತ್ರಿಯರಾದ ವೀಣಾ ಹಾಗೂ ಲತಾ ಇಬ್ಬರೂ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಟಿಕೆಟ್‌ಗಾಗಿ ಇಬ್ಬರೂ ತೀವ್ರ ಪೈಪೋಟಿ ನಡೆಸಿದ್ದರು. ಇಬ್ಬರಿಗೂ ತಪ್ಪಿಸಿ ಕಾಂಗ್ರೆಸ್‌ ಕೊಟ್ರೇಶ್‌ ಅವರಿಗೆ ಅವಕಾಶ ನೀಡಿರುವುದಕ್ಕೆ ಪ್ರಕಾಶ್‌ ಪುತ್ರಿಯರು ಬಂಡಾಯ ಏಳಲಿದ್ದಾರೆ ಎಂದು ಹೇಳಲಾಗಿದೆ.

ಪ್ರಧಾನ್‌ ಬಂದರೂ ಆರದ ಬಿಜೆಪಿ ಬಂಡಾಯದ ಕಾವು: ಕಮಲ ಪಾಳಯ ಇನ್ನೂ ಕೊತಕೊತ..!

ಇನ್ನು ಕುಂದಗೋಳ ಕ್ಷೇತ್ರದಲ್ಲಿ ಶಾಸಕಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಬಿಜೆಪಿಯಿಂದ ಕಾಂಗ್ರೆಸ್‌ ಸಂಪರ್ಕಕ್ಕೆ ಬಂದು ಚರ್ಚೆ ನಡೆಸಿದ್ದ ಚಿಕ್ಕನಗೌಡ ಅವರು ಆಕಾಂಕ್ಷಿಯಾಗಿದ್ದರು. ಇದೀಗ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಎದುರಾಳಿಯಾಗುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.