ಬೆಂಗಳೂರು (ಆ. 14): ಕರ್ನಾಟಕದ ಬಿಜೆಪಿಗೂ ಗುಜರಾತ್‌ನ ಬಿಜೆಪಿಗೂ ಸಾಕಷ್ಟು ಸಾಮ್ಯತೆಗಳಿವೆ. ಗುಜರಾತ್‌ನಲ್ಲಿ ಪಕ್ಷ ಕಟ್ಟಿದ ಶ್ರೇಯಸ್ಸು ಇರುವುದು ಕೇಶುಭಾಯಿ ಪಟೇಲ್‌ ಮತ್ತು ಶಂಕರ್‌ ಸಿಂಗ್‌ ವಘೇಲಾಗೆ. ಆಗ ಸಂಘಟನಾ ಕಾರ್ಯದರ್ಶಿ ನರೇಂದ್ರ ಮೋದಿ. ಪಟೇಲ್‌ ಮತ್ತು ವಘೇಲಾ ನಡುವೆ ಜಗಳ ಶುರುವಾದಾಗ ಮೋದಿ ಮೊದಲು ಕೇಶುಭಾಯಿ ಜೊತೆಗಿದ್ದರು. ಆದರೆ ವಘೇಲಾ ಹೊರಗೆ ಹೋದ ನಂತರ ಕೇಶುಭಾಯಿ-ಮೋದಿ ಜಗಳ ಶುರುವಾಯಿತು. ಮೋದಿ ಅವರನ್ನು ದಿಲ್ಲಿಗೆ ಸಂಘಟನಾ ಕಾರ್ಯದರ್ಶಿ ಆಗಿ ಕಳುಹಿಸಲಾಯಿತು.

ರಾಜಾಹುಲಿಗೆ ರಾಜಾಹುಲಿಯೇ ಸಾಟಿ; ಕರ್ನಾಟಕದಲ್ಲಿ ಬಿಎಸ್‌ವೈಗೆ ಇಲ್ಲ ಪೈಪೋಟಿ..!

ನಂತರ ಪ್ರಚಾರಕ ಮೋದಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಕರ್ನಾಟಕದಲ್ಲಿ ಪಕ್ಷ ಕಟ್ಟಿದ ಶ್ರೇಯಸ್ಸು ಇರುವುದು ಯಡಿಯೂರಪ್ಪ, ಅನಂತಕುಮಾರ್‌ ಅವರಿಗೆ. ಪಕ್ಷದ ಸಂಘಟನಾ ಕಾರ್ಯದರ್ಶಿ ಆಗಿದ್ದು ಸಂತೋಷ್‌. ಯಡಿಯೂರಪ್ಪ, ಅನಂತಕುಮಾರ್‌ ಮಧ್ಯೆ ಸಂಘರ್ಷವಾದಾಗ ಸಂತೋಷ್‌ ಹೆಚ್ಚು ಯಡಿಯೂರಪ್ಪ ಜೊತೆಗಿದ್ದರು. ಮುಂದೆ ಅನಂತಕುಮಾರ್‌ ಕಾಲವಾದರೆ ಯಡಿಯೂರಪ್ಪ-ಸಂತೋಷ್‌ ನಡುವಿನ ಸಂಬಂಧ ಬಿರುಕು ಬಿಟ್ಟಿತು. ಯಡಿಯೂರಪ್ಪ ಮುಖ್ಯಮಂತ್ರಿ ಆದರೆ, ಸಂತೋಷ್‌ ದಿಲ್ಲಿಗೆ; ಅದೇ ಮೋದಿ ಅವರಿದ್ದ ಜಾಗಕ್ಕೆ ಹೋಗಿದ್ದಾರೆ. ಹೀಗಾಗಿಯೇ ಆಗಾಗ ಸಂತೋಷ್‌ ಮುಖ್ಯಮಂತ್ರಿ ಆಗಿ ಬರುತ್ತಾರಾ ಎಂಬ ಸುದ್ದಿಗಳು ಹರಿದಾಡತೊಡಗುತ್ತವೆ. ಆದರೆ ಸಂಘದ ಮೂಲಗಳು ಹೇಳುವ ಪ್ರಕಾರ, ಪ್ರಚಾರಕರು ಸಕ್ರಿಯ ರಾಜಕಾರಣಕ್ಕೆ ಬರಬೇಕಾದರೆ ನಿರ್ಣಯ ಮೋದಿ, ಶಾ ತೆಗೆದುಕೊಳ್ಳುವುದಿಲ್ಲ. ಮೋಹನ್‌ ಭಾಗವತ್‌ ತೆಗೆದುಕೊಳ್ಳಬೇಕು.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ