ತನ್ನ ಸೋಲಿನಿಂದಾಗಿ ಜನರಿಗೆ ಅನ್ನ ನಿರಾಕರಿಸುವಷ್ಟರ ಮಟ್ಟಿಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರುಡಾಗಿದ್ದಾರೆಯೇ? ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಅಕ್ಕಿ ಮಾರಲು ಎಫ್‌ಸಿಐ ಸಿದ್ಧವಿದೆ. ಆದರೆ, ರಾಜ್ಯಕ್ಕೆ ಉತ್ತಮ ದರದಲ್ಲಿ ಅಕ್ಕಿ ನೀಡಲು ನಿರ್ಬಂಧ ಹೇರಿರುವುದೇಕೆ?: ರಣದೀಪ್‌ ಸಿಂಗ್‌ ಸುರ್ಜೇವಾಲಾ 

ಬೆಂಗಳೂರು(ಜೂ.16):  ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ಭಾರತೀಯ ಆಹಾರ ನಿಗಮ (ಎಫ್‌ಸಿಐ) ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಬಡವರ ಪರವಾದ ಯೋಜನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದ್ದು, ಇದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಶತೃತ್ವ ನೀತಿ ಬಯಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಪೂರೈಸಲು ಭಾರತೀಯ ಆಹಾರ ನಿಗಮ ನಿರಾಕರಿಸಿರುವ ಕುರಿತಂತೆ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ರಣದೀಪ್‌ ಸುರ್ಜೇವಾಲಾ, ಕೇಂದ್ರ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ಪಡಿತರ ಚೀಟಿದಾರರಿಗೆ 10 ಕೆ.ಜಿ. ಅಕ್ಕಿ ಉಚಿತ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಯೋಜನೆ ಅಡಿಯಲ್ಲಿ 1.28 ಕೋಟಿ ಕುಟುಂಬದ 4.42 ಕೋಟಿ ಜನರು ಫಲಾನುಭವಿಗಳಾಗಿದ್ದಾರೆ. ಅವರಿಗೆಲ್ಲ ಮಾಸಿಕ 10 ಕೆ.ಜಿ. ಅಕ್ಕಿ ವಿತರಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಹೆಚ್ಚುವರಿ ಅಕ್ಕಿಯ ಅಗತ್ಯವಿದ್ದು, ಅದಕ್ಕಾಗಿ ಎಫ್‌ಸಿಐಗೆ 11 ಸಾವಿರ ಕೋಟಿ ರು. ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಅಕ್ಕಿ ಪೂರೈಸದಂತೆ ನಿರ್ದೇಶನ ನೀಡಿದೆ. ಇದು ಭ್ರಷ್ಟಬಿಜೆಪಿಯನ್ನು ಬಡಿದೋಡಿಸಿದ ಪರಿಶಿಷ್ಟಜಾತಿ, ಪಂಗಡ, ಒಬಿಸಿ ಮತ್ತು ಬಡವರ ವಿರುದ್ಧ ಬಿಜೆಪಿಗಿರುವ ದ್ವೇಷವನ್ನು ತೋರುತ್ತಿದೆ ಎಂದಿದ್ದಾರೆ.

ಸಭೆಯಲ್ಲಿ ಸುರ್ಜೇವಾಲ ಪಾಲ್ಗೊಂಡಿದ್ದರಲ್ಲಿ ತಪ್ಪೇನಿಲ್ಲ: ಸಚಿವ ಚಲುವರಾಯಸ್ವಾಮಿ

ಸುರ್ಜೇವಾಲಾ ಪ್ರಶ್ನೆಗಳು:

ತನ್ನ ಸೋಲಿನಿಂದಾಗಿ ಜನರಿಗೆ ಅನ್ನ ನಿರಾಕರಿಸುವಷ್ಟರ ಮಟ್ಟಿಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರುಡಾಗಿದ್ದಾರೆಯೇ? ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ವ್ಯಾಪಾರಿಗಳಿಗೆ ಅಕ್ಕಿ ಮಾರಲು ಎಫ್‌ಸಿಐ ಸಿದ್ಧವಿದೆ. ಆದರೆ, ರಾಜ್ಯಕ್ಕೆ ಉತ್ತಮ ದರದಲ್ಲಿ ಅಕ್ಕಿ ನೀಡಲು ನಿರ್ಬಂಧ ಹೇರಿರುವುದೇಕೆ? ಕಾಂಗ್ರೆಸ್‌ ಸರ್ಕಾರ ಎಫ್‌ಸಿಐಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಕೇಳಿದ ನಂತರ ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡದಂತೆ ನಿರ್ದೇಶನ ನೀಡುವುದೇಕೆ? ದೊಡ್ಡ ವ್ಯಾಪಾರಿಗಳ ಕೂಟ ಬಡವರ ಅಕ್ಕಿ ಕಸಿಯಲು ಮುಂದಾಗಿದೆಯೇ? ರಾಜ್ಯದ ಸಂಸದರು, ಕೇಂದ್ರ ಸಚಿವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಕಂಡು ಮೌನವಾಗಿರುವುದೇಕೆ? ರಾಜ್ಯದ ಜನರಿಗೆ ದ್ರೋಹ ಬಗೆದಿರುವ ಅವರು ಕೂಡಲೇ ರಾಜೀನಾಮೆ ನೀಡಬಾರದೇಕೆ? ನರೇಂದ್ರ ಮೋದಿ ಸರ್ಕಾರದ ಕರ್ನಾಟಕ ಹಾಗೂ ಬಡವರ ವಿರೋಧಿ ನೀತಿ ಬಗ್ಗೆ ಬಿಜೆಪಿ ಬಿ ಟೀಂ ಆಗಿರುವ ಜೆಡಿಎಸ್‌ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.