ಯಾವ ಪುಣ್ಯದ ಹಣದಲ್ಲಿ ರಾಧಿಕಾಗೆ ನೂರಾರು ಕೋಟಿ‌ ಕೊಟ್ರು: ಎಚ್​ಡಿಕೆ ವಿರುದ್ಧ ಮಾಜಿ ಶಾಸಕ ಕಿಡಿ

* ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ವಾಗ್ದಾಳಿ
* ಯಾವ ಪುಣ್ಯದ ಹಣದಲ್ಲಿ ರಾಧಿಕಾಗೆ ನೂರಾರು ಕೋಟಿ‌ ಕೊಟ್ಟರು ಎಂದು ಪ್ರಶ್ನೆ
* ಕುಮಾರಸ್ವಾಮಿ ಹಣ ಮಾಡುವ ದಂದೆಗೆ ಇಳಿದಿದ್ದಾರೆ ಎಂದು ಕಿಡಿಕಾರಿದ ಜೆಡಿಎಸ್ ಮಾಜಿ ಶಾಸಕ

Ramanagara Ex JDS MLA K Raju Hits Out at HD Kumaraswamy rbj

ರಾಮನಗರ, (ಫೆ.12): ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ರಾಮನಗರ ಮಾಜಿ ಶಾಸಕ  ಕೆ.ರಾಜು ವಾಗ್ದಾಳಿ ನಡೆಸಿದ್ದಾರೆ.

ರಾಮನಗರದಲ್ಲಿ (Ramanagara( ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿ‌ದ್ದವರು ರಾಧಿಕಾ ಅವರನ್ನು ಮದುವೆ ಆದರು. ಆದರೆ ರಾಧಿಕಾ ಕುಮಾರಸ್ವಾಮಿಯಿಂದ ದೂರವಾಗಲೂ ನೂರಾರು ಕೋಟಿ ರೂಪಾಯಿ ಕೊಟ್ಟರು. ಯಾವ ಪುಣ್ಯದ ಹಣದಲ್ಲಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೂರಾರು ಕೋಟಿ‌ ಕೊಟ್ಟರೆಂದು ರಾಜ್ಯದ ಜನರಿಗೆ ತಿಳಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಕಂಡವರ ಮಕ್ಕಳನ್ನ ಬಾವಿಗೆ ತಳ್ಳುತ್ತಿದೆ. ಕುಮಾರಸ್ವಾಮಿ ಕೆಂಡಾಮಂಡಲ

ಹಿರಿಯ ನಾಯಕರ ಸಮಾಧಿ ಮೇಲೆ ಎಚ್.ಡಿ. ಕುಮಾರಸ್ವಾಮಿ ಸೌಧವನ್ನು ಕಟ್ಟಿಕೊಂಡಿದ್ದಾರೆ. ನಾನು ರಾಜಕೀಯಕ್ಕೆ ಬಂದಾಗ ಕುಮಾರಸ್ವಾಮಿ ಎಲ್ಲಿದ್ದರೋ ಗೊತ್ತಿಲ್ಲ. ದೇವೇಗೌಡರ ಮಗನೆಂಬ ಕಾರಣಕ್ಕೆ ಜನ ಅವರನ್ನ ಗುರುತಿಸಿದ್ರು. ಕುಮಾರಸ್ವಾಮಿಯನ್ನು ನಾವೇ ರಾಮನಗರಕ್ಕೆ ಕರೆತಂದೆವು. ಅವರು ಒಬ್ಬರ ಮೇಲೆ ಒಬ್ಬರನ್ನ ಎತ್ತಿಕಟ್ಟಿ ಯಶಸ್ವಿಯಾದರು ಎಂದು ಕಿಡಿಕಾರಿದರು.

ನನಗೆ ಜಿಲ್ಲಾ ಪಂಚಾಯತ್ ಟಿಕೆಟ್ ನೀಡಿ ಸೋಲಿಸಲು ಹೇಳಿದ್ರು. ಅವರು ಹೇಳಿದಂತೆ ಕೇಳುವವರನ್ನ ಮಾತ್ರ ಕುಮಾರಸ್ವಾಮಿ ಬೆಳೆಸುತ್ತಾರೆ. ಕಾಂಗ್ರೆಸ್ ಬೆಂಬಲದಿಂದ  2ನೇ ಬಾರಿಗೆ ಸಿಎಂ ಆದರು. ಆಮೇಲೆ ಕುಮಾರಸ್ವಾಮಿ ಹಣ ಮಾಡುವ ದಂಧೆಗೆ ಇಳಿದರು. ಮಂಡ್ಯದಲ್ಲಿ ಮಗನನ್ನು ಗೆಲ್ಲಿಸಿಕೊಳ್ಳುವುದಕ್ಕೆ ಹೆಚ್​ಡಿಕೆಗೆ ಆಗಲಿಲ್ಲ. ನೂರಾರು ಕೋಟಿ ಸುರಿದರೂ ಮಗನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂದರು.

ಮಾಜಿ ಪ್ರಧಾನಿ‌ ದೇವೇಗೌಡರು ಸೋಲಲು ಕುಮಾರಸ್ವಾಮಿ ಕಾರಣ. ಕುಮಾರಸ್ವಾಮಿಯವರ ಆಕ್ರಮ ನೋಡಿ ಜನರು ಸೋಲಿಸಿದ್ರು. ಸುಳ್ಳಿನ ಸರಮಾಲೆ ಕಟ್ಟಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಾರೆ. ಜನರಿಗೆ ಮೋಡಿ ಮಾಡಿ ರಾಜಕೀಯ ಮಾಡಿದ್ದಾರೆ ಎಂದು  ಮಾಜಿ ಶಾಸಕ ಕೆ.ರಾಜು ಅವರು ಕುಮಾರಸ್ವಾಮಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

 ಜೆಡಿಎಸ್‌ನ ಮಾಜಿ ಶಾಸಕ, ರಾಮನಗರದ ಕೆ. ರಾಜು ತಮ್ಮ ಬೆಂಬಲಿಗರ ಜತೆ ಕಳೆದ ವರ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕುಮಾರಸ್ವಾಮಿ
ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ (Chamundeshwari Constituency) ನಾನೇ ಬರುತ್ತೇನೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಕುತೂಹಲ ಮೂಡಿಸಿದ್ದಾರೆ. ಕ್ಷೇತ್ರದ ಹಾಲಿ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ (GT Devegowda) ಅವರು ಪಕ್ಷ ತೊರೆಯುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮುಂದಿನ ವಿಧಾನಸಭಾ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಯಾರು ಬರುತ್ತಾರೆ ಎಂದು ಗುರುವಾರ ಪ್ರಶ್ನಿಸಿದಾಗ, ನಾನೇ ಬರುತ್ತೇನೆಂದು ಹೇಳಿ ಅಚ್ಚರಿ ಮೂಡಿಸಿದರು.

ಅನಿತಾ ಸ್ಪರ್ಧೆ ಬೇಡವೆಂದು ಚರ್ಚೆ:
 ಇದೇ ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ (Anita Kumaraswamy) ಸ್ಪರ್ಧಿಸುವುದು ಬೇಡ ಎಂದು ಚರ್ಚಿಸಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು. ಕುಟುಂಬ ರಾಜಕಾರಣದ ಹೆಸರಿನಲ್ಲಿ ನಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಇಂಥ ಅಪಪ್ರಚಾರದಿಂದ ದೂರವಾಗಲು ನಾನು-ಅನಿತಾ ಮುಂದಿನ ವಿಧಾನಸಭೆ ಚುನಾವಣೆಯಲ್ಲಿನ ಸ್ಪರ್ಧೆ ಕುರಿತು ಚರ್ಚೆ ಮಾಡಿದ್ದೇವೆ. 

ಈ ಬಗ್ಗೆ ಅಂತಿಮ ತೀರ್ಮಾನವನ್ನು ಚುನಾವಣೆ ಘೋಷಣೆಯಾದ ನಂತರವೇ ಮಾಡುತ್ತೇವೆ ಎಂದು ಹೇಳಿದರು. ಪುತ್ರ ನಿಖಿಲ್‌ನನ್ನು (Nikhil Kumaraswamy) ರಾಜಕಾರಣಕ್ಕೆ ಕರೆ ತರಲು ನನಗೆ ಇಷ್ಟವಿರಲಿಲ್ಲ. ಮುಖಂಡರ ಒತ್ತಡದ ಮೇರೆಗೆ ಕರೆ ತಂದೆ. ಕುಟುಂಬ ರಾಜಕಾರಣದ ವಿಚಾರದಲ್ಲಿ ನಾನು ಈಗ ಕೇವಲ ನನ್ನ ಕುಟುಂಬದ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಾನು-ನನ್ನ ಸೋದರರು ಬೇರೆಯಾಗಿದ್ದೇವೆ. ಹೀಗಾಗಿ ನಾನು, ನನ್ನ ಪತ್ನಿ, ನನ್ನ ಮಗನ ಬಗ್ಗೆ ಮಾತ್ರ ಪ್ರಸ್ತಾಪ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು

Latest Videos
Follow Us:
Download App:
  • android
  • ios