ರಾಜ್ಯಸಭೆಯಂತೆ ಪರಿಷತ್‌ನಲ್ಲಿಯೂ ಬಿಜೆಪಿ ಶಾಕ್; ಗುಟ್ಟು ಬಿಟ್ಟ ಕಟೀಲ್!
ವಿಧಾನಪರಿಷತ್‌ಗೆ ಬಿಜೆಪಿಯಿಂದ ಯಾರು? ಗುಟ್ಟು ಬಿಡದೆ ಕಾದು ನೋಡಿ ಎಂದ ರಾಜ್ಯಾಧ್ಯಕ್ಷ/ ಅಚ್ಚರಿ ಕಾದಿದೇಯಾ ಎಂದಿದ್ದಲ್ಲೆ ಕಾದು ನೋಡಿ ಎಂದ ಕಟೀಲ್
ಸೇಡಂ(ಜೂ. 10) ರಾಜ್ಯಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಕೇಂದ್ರ ಶಾಕ್ ಕೊಟ್ಟಂತೆ, ವಿಧಾನ ಪರಿಷತ್ ಸದಸ್ಯರ ಆಯ್ಕೆಯಲ್ಲೂ ಅಚ್ಚರಿ ಕಾದಿದೆಯಾ? ಎಂಬ ಮಾಧ್ಯಮದವರ ಪ್ರಶ್ನೆಗೆ 'ಕಾದು ನೋಡಿ..' ಎಂಬ ಉತ್ತರ ನೀಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುತೂಹಲ ಮೂಡಿಸಿದ್ದಾರೆ.
ಸೇಡಂನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದರು. ಪಟ್ಟಣದ ವಾಸವದತ್ತ ಸಿಮೆಂಟ್ ಕಾರ್ಖಾನೆಯ ಆಡಿಟೋರಿಯಂನಲ್ಲಿ ಕಲಬುರಗಿ ವಿಭಾಗೀಯ ಪ್ರಮುಖರ ಸಭೆಗೆ ಆಗಮಿಸಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಿದೆ. ಪಕ್ಷ ಹೇಗೆ ವಿಭಿನ್ನವಾಗಿ ಚಿಂತಿಸುತ್ತದೆ ಅನ್ನೋದಕ್ಕೆ ಇದೊಂದು ಉದಾಹರಣೆ ಎಂದರು.
ರಾಜ್ಯಸಭೆಗೆ ಹೊರಟ ಬಿಜೆಪಿಯ ಎರಡು ಹೊಸ ಮುಖಗಳು
ಪರಿಷತ್ನಲ್ಲಿ ಏನಾಗುತ್ತೋ ಅಂತ ಕಾದು ನೋಡಿ?. ಸಾಮಾಜಿಕ ಮತ್ತು ಭೌಗೋಳಿಕ ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿ ಎಂಎಲ್ಸಿ ಟಿಕೆಟ್ ನೀಡಲಾಗುವುದು ಎಂದರು.
ಕೊರೊನಾ ವಿಷಯದಲ್ಲಿ ಹಾಗೂ ವಲಸೆ ಕಾರ್ಮಿಕರ ಹೆಸರಲ್ಲಿ ರಾಹುಲ್ ಗಾಂಧಿ ರಾಜಕೀಯ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತ ತೆಗೆದುಕೊಂಡ ನಿರ್ಧಾರಗಳನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಅಲ್ಲದೇ ಇಲ್ಲಿಯವರೆಗೂ ಆಹಾರ ಸಿಗದೆ ಯಾರೂ ಸತ್ತಿಲ್ಲ ಎಂದು ತಿಳಿಸಿದರು.
ತಮಿಳುನಾಡಿನ ಡಿಎಂಕೆ ಶಾಸಕ ಅನ್ಬಳಗನ್ ಕೊರೋನಾಗೆ ಬಲಿಯಾದ ಘಟನೆಗೆ ಪ್ರತಿಕ್ರಿಯಿಸುತ್ತಾ, ಕೊರೊನಾಗೆ ಜಾತಿ, ಮತ, ರಾಜಕಾರಣ ಅಂತೇನಿಲ್ಲ. ಅದು ಎಲ್ಲರನ್ನೂ ಬಾಧಿಸುತ್ತೆ. ಅದಕ್ಕಾಗಿಯೇ ಮೋದಿ ಲಾಕ್ಡೌನ್ ಘೋಷಿಸಿದ್ದು. ಹೀಗಾಗಿ ಎಲ್ಲರೂ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಲೇಬೇಕು ಎಂದು ಎಚ್ಚರಿಸಿದರು.